TOP NEWS

Sandalwood: ಸಾರಾ ಗೋವಿಂದು ವರ್ಸಸ್ ಚೇತನ್, ಬೆದರಿಕೆ ದೂರು ದಾಖಲಿಸಿದ ನಟ

sandalwood actor Chetan registered police complaint against sara govindu

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಅವರ ಪುಣ್ಯಭೂಮಿ ಕುರಿತು ನಟ ಚೇತನ್ ಅಹಿಂಸ ನೀಡಿದ್ದ ವಿವಾದಾತ್ಮಕ ಹೇಳಿಕೆ ಈಗ ಸಂಘರ್ಷದ (Sandalwood) ರೂಪ ಪಡೆದುಕೊಂಡಿದೆ. ಈ ಸಂಬಂಧ ಈಗಾಗಲೇ ಕ್ಷಮೆ ಕೇಳಿರುವ ಚೇತನ್, ಈಗ ಕನ್ನಡ ಪರ ಹೋರಾಟಗಾರ ಸಾರಾ ಗೋವಿಂದು ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಿದ್ದಾರೆ. ಇದು ಸ್ಯಾಂಡಲ್‌ವುಡ್ ಮತ್ತು ಕನ್ನಡ ಪರ ಸಂಘಟನೆಗಳ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೆದರಿಕೆ ಆರೋಪ ಮಾಡಿದ ಚೇತನ್: ಸಾರಾ ಗೋವಿಂದು ಮತ್ತು ಅವರ ಬೆಂಬಲಿಗರು ತಮ್ಮ ಮನೆಗೆ ಮುತ್ತಿಗೆ ಹಾಕಿದ್ದು, ಕ್ಷಮೆ ಕೇಳುವಂತೆ ಒತ್ತಾಯಿಸುವ ನೆಪದಲ್ಲಿ ತಮಗೆ ಧಮ್ಕಿ ಹಾಕಿದ್ದಾರೆ ಎಂದು ಚೇತನ್ ದೂರಿದ್ದಾರೆ. “ಸಾರಾ ಗೋವಿಂದು ಅವರು ನನ್ನ ಬಳಿ ಮಾತನಾಡಿದ ರೀತಿ ಮತ್ತು ಅವರ ವರ್ತನೆ ಬೆದರಿಕೆ ಹಾಕುವಂತಿತ್ತು,” ಎಂದು ದೂರಿನಲ್ಲಿ ಉಲ್ಲೇಖಿಸಿರುವ ಚೇತನ್, ತಮಗೆ ಮತ್ತು ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಪೊಲೀಸರನ್ನು ಕೋರಿದ್ದಾರೆ.

ಗಡಿಪಾರು ಮಾಡುವಂತೆ ಸಾರಾ ಗೋವಿಂದು ಆಕ್ರೋಶ: ಚೇತನ್ ಅವರ ದೂರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಾರಾ ಗೋವಿಂದು, ಚೇತನ್ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ. “ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಡಾ. ರಾಜ್‌ಕುಮಾರ್ ಅವರ ಸಾಧನೆಯ ಅರಿವಿಲ್ಲದೆ ಮಾತನಾಡಿರುವ ಚೇತನ್‌ಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಸಮಾಜದಲ್ಲಿ ಸದಾ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಇವನನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕು,” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಚೇತನ್ ಒಬ್ಬ ಕೆಲಸವಿಲ್ಲದ ವ್ಯಕ್ತಿಯಾಗಿದ್ದು, ಕೇವಲ ಪ್ರಚಾರಕ್ಕಾಗಿ ಮೇರು ನಟರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾನೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಚಾರದ ಹುಚ್ಚಾಟ ಬೇಡ ಎಂದ ಮುಖಂಡರು: ಕನ್ನಡಿಗರ ಭಾವನೆಗಳೊಂದಿಗೆ ಆಟವಾಡುತ್ತಿರುವ ಚೇತನ್‌ಗೆ ಸಂಸ್ಕಾರದ ಕೊರತೆ ಇದೆ ಎಂದು ಸಾರಾ ಗೋವಿಂದು ಕಿಡಿಕಾರಿದ್ದಾರೆ. “ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಮಾತನಾಡಿ ಚೇತನ್ ತಾನೇ ಚಿಕ್ಕವನಾಗುತ್ತಿದ್ದಾನೆ. ಪ್ರಚಾರಕ್ಕಾಗಿ ಇಂತಹ ಹುಚ್ಚಾಟಗಳನ್ನು ಮಾಡುವ ಬದಲು ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ಕಡೆಗಳಲ್ಲಿ ಧರಣಿ ನಡೆಸಲಿ,” ಎಂದು ಸಲಹೆ ನೀಡಿದ್ದಾರೆ. ಚೇತನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಅವರು ತಿಳಿಸಿದ್ದು, ಈ ವಿವಾದ ಮತ್ತಷ್ಟು ಕಾವೇರುವ ಲಕ್ಷಣಗಳು ಕಾಣುತ್ತಿವೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ‘ಕೆಡಿ’ ಅಬ್ಬರ: ಎರಡನೇ ಭಾಗದ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಜೋಗಿ ಪ್ರೇಮ್!

Leave a Reply

Your email address will not be published. Required fields are marked *