TOP NEWS

High Court: ಚಿಕ್ಕಮಗಳೂರು ವಿಧಾನ ಪರಿಷತ್ ಚುನಾವಣಾ ವಿವಾದ: ಗಾಯತ್ರಿ ಶಾಂತೇಗೌಡಗೆ ಗೆಲುವು

High Court Verdict BJP MK Pranesh Suffers Blow Congress Gayathri Shantegowda Declared Winner in MLC Poll Row

ಚಿಕ್ಕಮಗಳೂರು: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿಧಾನ ಪರಿಷತ್ ಸದಸ್ಯ (ಎಮ್‌ಎಲ್‌ಸಿ) ಎಂ.ಕೆ. ಪ್ರಾಣೇಶ್ ಹಾಗೂ ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋಲು ಕಂಡಿದ್ದ ಕಾಂಗ್ರೆಸ್ ನಾಯಕಿ ಎ.ವಿ. ಗಾಯತ್ರಿ ಶಾಂತೇಗೌಡ ಅವರ ರಾಜಕೀಯ ಭವಿಷ್ಯ ನಿರ್ಣಯವಾಗಿದೆ. ಈ ಹೈವೋಲ್ಟೇಜ್ ಚುನಾವಣಾ ತಕರಾರು ಅರ್ಜಿಯ ಅಂತಿಮ ವಿಚಾರಣೆ ಇಂದು ಉಚ್ಚ ನ್ಯಾಯಾಲಯದಲ್ಲಿ (High Court) ನಡೆದಿದ್ದು, ಗಾಯತ್ರಿ ಶಾಂತೇಗೌಡಗೆ ಗೆಲುವು ಸಿಕ್ಕಿದೆ.

ಏನಿದು ಪ್ರಕರಣ?

ಕಳೆದ 2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರು ಕೇವಲ 6 ಮತಗಳ ಅಂತರದಿಂದ ರೋಚಕ ಜಯ ಸಾಧಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನಿಯಮಬಾಹಿರವಾಗಿ ಮೂರು ಪಟ್ಟಣ ಪಂಚಾಯಿತಿಗಳ 12 ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ, ಆದರೆ ಕಾನೂನು ಪ್ರಕಾರ ಅವರಿಗೆ ಮತದಾನದ ಹಕ್ಕಿರುವುದಿಲ್ಲ ಎಂಬುದು ಗಾಯತ್ರಿ ಅವರ ಪ್ರಮುಖ ವಾದವಾಗಿತ್ತು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಆ 12 ನಾಮನಿರ್ದೇಶಿತ ಸದಸ್ಯರ ಮತಗಳನ್ನು ಬದಿಗಿಟ್ಟು, ಉಳಿದ ಮತಗಳನ್ನು ಮರುಎಣಿಕೆ ಮಾಡುವಂತೆ ಆದೇಶಿಸಿತ್ತು. ಅದರಂತೆ 2025ರ ಫೆಬ್ರವರಿ 28ರಂದು ಮತಗಳ ಮರುಎಣಿಕೆ ಪ್ರಕ್ರಿಯೆ ನಡೆದು, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಮರುಎಣಿಕೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು.

ಈ ನಡುವೆ, ಹೈಕೋರ್ಟ್ ನೀಡಿದ್ದ ಮರುಎಣಿಕೆ ಆದೇಶವನ್ನು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಪ್ರಾಣೇಶ್ ಅವರ ಅರ್ಜಿಯನ್ನು ವಜಾಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು, ಜನವರಿ 29, 2025 ರಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಸೂಚಿಸಿತ್ತು. ಸುಪ್ರೀಂ ಕೋರ್ಟ್‌ನ ಈ ನಿರ್ದೇಶನದ ಹಿನ್ನೆಲೆಯಲ್ಲಿ, ಗಾಯತ್ರಿ ಶಾಂತೇಗೌಡ ಅವರು ಸಲ್ಲಿಸಿರುವ ಮೂಲ ಅರ್ಜಿಯ ಅಂತಿಮ ಹಂತದ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಿಗದಿಯಾಗಿತ್ತು, ಮರುಎಣಿಕೆಯ ಫಲಿತಾಂಶ ಏನಾಗಲಿದೆ ಮತ್ತು ಕ್ಷೇತ್ರದ ಮುಂದಿನ ಶಾಸಕರು ಯಾರು ಎಂಬ ಕುತೂಹಲಕ್ಕೆ ಇಂದು ಕೊನೆಗೂ ತೆರೆ ಬಿದ್ದಿದೆ.

ಇದನ್ನೂ ಓದಿ: ಪರಿಸ್ಥಿತಿ ತಿಳಿಯಾದ ಬಳಿಕ ತಮಿಳುನಾಡು ಸಿಎಂ ವಿಜಯ್ ಜೊತೆ ಸಭೆ: ಡಿಕೆಶಿ

Leave a Reply

Your email address will not be published. Required fields are marked *