ಬೆಂಗಳೂರು: ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ನಲ್ಲಿ ಲಂಕಾಧಿಪತಿಯಾಗಿ ಯಶ್ ಅವರ ಝಲಕ್ ಭಾರಿ ಕುತೂಹಲ ಮೂಡಿಸಿದೆ. ಬೆಳ್ಳಿಪರದೆಯ ಮೇಲೆ ಯಶ್ ಅವರ ಈ ರೌದ್ರಾವತಾರವನ್ನು ನೋಡಲು ಇಡೀ ದೇಶವೇ ಕಾಯುತ್ತಿರುವ ಬೆನ್ನಲ್ಲೇ, ಅವರ ಪತ್ನಿ ರಾಧಿಕಾ ಪಂಡಿತ್ (Radhika Pandit) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಪ್ರಿಂಟೆಡ್ ಗೌನ್ ಧರಿಸಿ ಹತ್ತು ತಲೆಯ ರಾವಣನ ಪ್ರತಿಕೃತಿಯ ಮುಂದೆ ನಿಂತು ಫೋಸ್ ನೀಡಿರುವ ರಾಧಿಕಾ, “ಗೊತ್ತಿರೋರಿಗೆ ಗೊತ್ತು ಬಿಡಿ…” ಎಂಬ ತಮಾಷೆಯ ಅಡಿಬರಹದೊಂದಿಗೆ ಪತಿಯ ಹೊಸ ಪಾತ್ರವನ್ನು ಕಾಲೆಳೆದಿದ್ದಾರೆ.
ರಾವಣನ ಪಾತ್ರದ ಕಷ್ಟದ ಬಗ್ಗೆ ಯಶ್ ಹೇಳಿದ್ದೇನು?
ಇನ್ನು ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಚಿತ್ರದ ಸಹನಟ ರಣಬೀರ್ ಕಪೂರ್, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿದ್ದ ನಟ ಯಶ್, ರಾವಣನ ಪಾತ್ರ ನಿರ್ವಹಿಸುವಾಗ ಎದುರಾದ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈಗಾಗಲೇ ಎಲ್ಲರಿಗೂ ಪರಿಚಿತವಿರುವ ಇಂತಹ ಪೌರಾಣಿಕ ಪಾತ್ರವನ್ನು ಮಾಡುವುದು ನಟನಿಗೆ ದೊಡ್ಡ ಜವಾಬ್ದಾರಿಯಾಗಿದೆ. ಹೊಸ ಕಥೆಯಾಗಿದ್ದರೆ ನಾವು ಮಾಡುವ ನಟನೆಯೇ ಆ ಪಾತ್ರಕ್ಕೆ ಹೊಸ ರೂಪ ನೀಡುತ್ತದೆ, ಆದರೆ ಈಗಾಗಲೇ ಹಲವು ದಿಗ್ಗಜರು ವಿಭಿನ್ನವಾಗಿ ನಟಿಸಿ ಜನಮಾನಸದಲ್ಲಿ ಅಚ್ಚೊತ್ತಿರುವ ರಾವಣನ ಪಾತ್ರವನ್ನು ಒಪ್ಪಿಕೊಂಡಾಗ ಸಹಜವಾಗಿಯೇ ಭಾರಿ ಒತ್ತಡವಿರುತ್ತದೆ ಎಂದು ಯಶ್ ತಿಳಿಸಿದ್ದಾರೆ. ತಾವು ಹಳೆಯ ಯಾವುದೇ ನಟನೆಯನ್ನು ನಕಲು ಮಾಡಿಲ್ಲ, ಬದಲಾಗಿ ರಾವಣನ ಕ್ರೌರ್ಯಕ್ಕೆ ಕಾರಣವೇನು ಮತ್ತು ಆತನ ಯೋಚನಾ ಲಹರಿ ಹೇಗಿತ್ತು ಎಂಬ ಮೂಲ ಅಂಶಗಳನ್ನು ಅರ್ಥಮಾಡಿಕೊಂಡು ವಿಭಿನ್ನವಾದ ಶೈಲಿಯಲ್ಲಿ ಅಭಿನಯಿಸಿರುವುದಾಗಿ ಅವರು ಹೇಳಿದ್ದಾರೆ.
ದೀಪಾವಳಿಗೆ ತೆರೆಗೆ ಬರಲಿದೆ ಸಿನಿಮಾ
ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ‘ರಾಮಾಯಣ’ ಮಹಾಕಾವ್ಯವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗವು ಇದೇ ವರ್ಷ ಅಂದರೆ 2026ರ ಅಕ್ಟೋಬರ್‌ನಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಎರಡನೇ ಭಾಗವನ್ನು ಮುಂದಿನ ವರ್ಷ ಅಂದರೆ 2027ರ ದೀಪಾವಳಿಗೆ ರಿಲೀಸ್ ಮಾಡಲು ಚಿತ್ರತಂಡ ಯೋಜಿಸಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಸನ್ನಿ ಡಿಯೋಲ್ ಹನುಮಂತನಾಗಿ, ಲಾರಾ ದತ್ತಾ ಕೈಕೇಯಿಯಾಗಿ, ರವಿ ದುಬೆ ಲಕ್ಷ್ಮಣನಾಗಿ ಮತ್ತು ರಕುಲ್ ಪ್ರೀತ್ ಸಿಂಗ್ ಶೂರ್ಪನಖಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರಾಮಾಯಣ’ ಟ್ರೇಲರ್ ಜಾದೂ: ಪ್ರೇಕ್ಷಕರ ಮನಗೆದ್ದ ಸ್ಟಾರ್‌ಗಳ ಹೊಸ ಅವತಾರ, ನೆಟ್ಟಿಗರ ರೇಟಿಂಗ್ ಎಷ್ಟು?
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಹುಕೋಟಿ ವೆಚ್ಚದ ‘ರಾಮಾಯಣ’ ಚಲನಚಿತ್ರದ ಟ್ರೇಲರ್ ಕೊನೆಗೂ ಅಧಿಕೃತವಾಗಿ ಬಿಡುಗಡೆಯಾಗಿದೆ. ಮುಂಜಾನೆಯ ಪವಿತ್ರ ಬ್ರಹ್ಮ ಮುಹೂರ್ತದಲ್ಲೇ ಪ್ರೇಕ್ಷಕರ ಮುಂದೆ ಬಂದಿರುವ ಈ ಟ್ರೇಲರ್, ಸದ್ಯ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಸಿನಿಮಾ ಪ್ರೇಮಿಗಳ ರೋಮಾಂಚನವನ್ನು ದುಪ್ಪಟ್ಟು ಮಾಡಿದೆ.
ಮುಂಜಾನೆ ಬಿಡುಗಡೆಯಾಗಿ ಇತಿಹಾಸ ಸೃಷ್ಟಿಸಿದ ಟ್ರೇಲರ್
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮುಂಜಾನೆ 4.15ರ ಸುಮಾರಿಗೆ ಸಿನಿಮಾವೊಂದರ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡ ಹೊಸ ದಾಖಲೆ ಬರೆದಿದೆ. ಬಾಲಿವುಡ್‌ನ ಸ್ಟಾರ್ ನಿರ್ದೇಶಕ ನಿತೀಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ದೃಶ್ಯಕಾವ್ಯಕ್ಕೆ ಬರೋಬ್ಬರಿ 4,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದ್ದು, ಹಾಲಿವುಡ್ ತಂತ್ರಜ್ಞಾನಕ್ಕೆ ಸರಿಸಾಟಿಯಾಗುವಂತಹ ಮೇಕಿಂಗ್ ಟ್ರೇಲರ್‌ನ ಪ್ರತಿಯೊಂದು ಫ್ರೇಮ್‌ನಲ್ಲೂ ಎದ್ದು ಕಾಣುತ್ತಿದೆ.
ಲಂಕಾಧಿಪತಿಯಾಗಿ ರಾಕಿ ಭಾಯ್ ಅಬ್ಬರ, ಬೆಕ್ಕಸಬೆರಗಾದ ಪ್ರೇಕ್ಷಕರು
ಈ ಇಡೀ ಟ್ರೇಲರ್‌ನಲ್ಲಿ ಪ್ರೇಕ್ಷಕರ ಕಣ್ಣು ಕೋರೈಸುವಂತೆ ಮಾಡಿರುವುದು ನಮ್ಮ ಹೆಮ್ಮೆಯ ಕನ್ನಡಿಗ, ರಾಕಿಂಗ್ ಸ್ಟಾರ್ ಯಶ್ ಅವರ ರಾವಣನ ಖದರ್. ಲಂಕಾಧಿಪತಿಯ ರೌದ್ರಾವತಾರ, ಅವರ ಗಂಭೀರ ಧ್ವನಿ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ವಿಶೇಷವೆಂದರೆ, ಯಶ್ ಕೇವಲ ಈ ಚಿತ್ರದಲ್ಲಿ ನಟಿಸುವುದಷ್ಟೇ ಅಲ್ಲದೆ, ಪ್ರಮುಖ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಕನ್ನಡದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಶ್ರೀರಾಮ-ಸೀತೆಯಾಗಿ ರಣಬೀರ್, ಸಾಯಿ ಪಲ್ಲವಿ ದೈವಿಕ ಲುಕ್
ಆರಂಭದಲ್ಲಿ ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಸೂಕ್ತವೇ ಎಂಬ ಅಪಸ್ವರ ಎತ್ತಿದ್ದವರಿಗೆ ಈ ಟ್ರೇಲರ್ ಖಡಕ್ ಉತ್ತರ ನೀಡಿದೆ. ಸೌಮ್ಯತೆ ಹಾಗೂ ದೈವಿಕ ತೇಜಸ್ಸಿನೊಂದಿಗೆ ರಣಬೀರ್ ಶ್ರೀರಾಮನ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದಾರೆ. ಮತ್ತೊಂದೆಡೆ, ಸೀತೆಯ ಪಾತ್ರಧಾರಿ ಸಾಯಿ ಪಲ್ಲವಿ ತಮ್ಮ ನೈಸರ್ಗಿಕ ನಟನೆ, ರಾಜವಂಶಸ್ಥೆಯ ಕಳೆ ಹಾಗೂ ಮುಗ್ಧ ಮುಖಭಾವದ ಮೂಲಕ ವಿಮರ್ಶಕರಿಂದಲೂ ಜೈ ಎನಿಸಿಕೊಂಡಿದ್ದಾರೆ. ಮುಂಬರುವ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಿಶ್ವದಾದ್ಯಂತ ತೆರೆಕಾಣಲಿರುವ ಈ ಚಿತ್ರ, ಭಾರತೀಯ ಸಿನಿರಂಗದ ಗತಿಯನ್ನೇ ಬದಲಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಕಾವೇರಿ ಕಿಚ್ಚಿಗೆ ಸ್ಯಾಂಡಲ್‌ವುಡ್ ಸಾಥ್: ಅವೈಜ್ಞಾನಿಕ ತೀರ್ಪು ಬದಲಾಗದಿದ್ದರೆ ಬೀದಿಗಿಳಿಯಲು ಸಿದ್ಧ ಎಂದ ಸಾರಾ ಗೋವಿಂದು
