TOP NEWS

Solar Cap: ಬೆಳಗಾವಿ ಬಿಸಿಲಿಗೆ ಪೊಲೀಸ್ ಹೈಟೆಕ್ ಮೊರೆ: ಸೋಲಾರ್ ಟೋಪಿ ಧರಿಸಿ ಟ್ರಾಫಿಕ್ ಸಿಬ್ಬಂದಿ ಕರ್ತವ್ಯ

Belagavi traffic police uses solar cap

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ. ಕಳೆದ 15 ದಿನಗಳಿಂದ ಇಲ್ಲಿನ ತಾಪಮಾನ 36 ರಿಂದ 39 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇಂತಹ ಸುಡುವ ಬಿಸಿಲಿನಲ್ಲಿ ರಸ್ತೆಯ ಮಧ್ಯೆ ನಿಂತು ದಣಿವರಿಯದೆ ಕೆಲಸ ಮಾಡುವ ಸಂಚಾರಿ ಪೊಲೀಸರ ಕಷ್ಟ ಹೇಳತೀರದು. ಆದರೆ, ಬೆಳಗಾವಿಯ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಈ ಬಿಸಿಲಿನಿಂದ ಪಾರಾಗಲು ಕಂಡುಕೊಂಡಿರುವ ‘ಸೋಲಾರ್ ಕ್ಯಾಪ್’ (Solar Cap) ಉಪಾಯ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಟೋಪಿ ಮೇಲೆ ಸೋಲಾರ್‌ ಪ್ಯಾನಲ್

ನಗರದ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತದ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್‌ಸ್ಟೆಬಲ್ ಶೈಲೇಶ್ ಸಡಲಗಿ ಅವರು ಸೌರಶಕ್ತಿ ಚಾಲಿತ ಫ್ಯಾನ್ ಹೊಂದಿರುವ ವಿಶೇಷ ಟೋಪಿಯನ್ನು ಧರಿಸಿ ಕೆಲಸ ಮಾಡುತ್ತಿದ್ದಾರೆ. ಈ ಟೋಪಿಯ ಮೇಲ್ಭಾಗದಲ್ಲಿ ಚಿಕ್ಕ ಸೌರ ಫಲಕವನ್ನು (ಸೋಲಾರ್ ಪ್ಯಾನಲ್) ಅಳವಡಿಸಲಾಗಿದ್ದು, ಅದಕ್ಕೆ ಸಣ್ಣ ಮೋಟಾರ್ ಮತ್ತು ಫ್ಯಾನ್ ಸಂಪರ್ಕ ನೀಡಲಾಗಿದೆ. ಸೂರ್ಯನ ಕಿರಣಗಳು ಈ ಫಲಕದ ಮೇಲೆ ಬಿದ್ದ ತಕ್ಷಣ ಫ್ಯಾನ್ ತಿರುಗಲು ಆರಂಭಿಸುತ್ತದೆ. ಇದರಿಂದ ಹಣೆಯ ಭಾಗ ಹಾಗೂ ಕಣ್ಣುಗಳಿಗೆ ತಂಪು ಗಾಳಿ ಸಿಗಲಿದ್ದು, ಬಿಸಿಲಿನ ಬೇಗೆಯಲ್ಲೂ ಆರಾಮವಾಗಿ ಕೆಲಸ ಮಾಡಲು ಸಹಕಾರಿಯಾಗಿದೆ ಎಂದು ಶೈಲೇಶ್ ತಿಳಿಸಿದ್ದಾರೆ.

ಕಳೆದ 25 ದಿನಗಳಿಂದ ಈ ವಿಶೇಷ ಟೋಪಿಯನ್ನು ಬಳಸುತ್ತಿರುವ ಶೈಲೇಶ್ ಅವರು, ವಿವಿಐಪಿ ಭದ್ರತಾ ಕರ್ತವ್ಯ ಹಾಗೂ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ದೀರ್ಘಕಾಲ ನಿಲ್ಲುವಾಗ ಇದು ತುಂಬಾ ಸಹಕಾರಿ ಎಂದು ಹೇಳಿದ್ದಾರೆ. ಬಿಸಿಲಿನಲ್ಲಿ ನಿರಂತರವಾಗಿ ಕೆಲಸ ಮಾಡುವ ಪೊಲೀಸರಿಗೆ ಇಂತಹ ಹೈಟೆಕ್ ಟೋಪಿಗಳು ಅತ್ಯಗತ್ಯ ಎಂಬುದು ಅವರ ಅಭಿಪ್ರಾಯ. ಶೈಲೇಶ್ ಅವರ ಈ ಹೊಸ ಪ್ರಯೋಗವನ್ನು ಕಂಡ ಸಾರ್ವಜನಿಕರು ಕುತೂಹಲದಿಂದ ಅವರ ಬಳಿ ಬಂದು ವಿಚಾರಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಭೂಷಣ್ ಬೊರಾಸೆ ಅವರು, ಬಿಸಿಲಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ ಸೌರಶಕ್ತಿ ಟೋಪಿಗಳು ಹೆಚ್ಚು ಅನುಕೂಲಕರವಾಗಿವೆ. ಪ್ರಸ್ತುತ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಛತ್ರಿಗಳನ್ನು ಒದಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಸೋಲಾರ್ ಟೋಪಿಗಳನ್ನು ನಗರದ ಎಲ್ಲಾ ಸಂಚಾರಿ ಪೊಲೀಸರಿಗೆ ವಿತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ತಾಂತ್ರಿಕತೆಯನ್ನು ಬಳಸಿಕೊಂಡು ಬಿಸಿಲಿಗೆ ಸವಾಲೆಸೆದಿರುವ ಈ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಬಿಡಿಎ ಆಸ್ತಿ ಗುಳುಂ ಮಾಡಲು ಸ್ಕೆಚ್; 160 ಕೋಟಿ ಮೌಲ್ಯದ ಭೂ ಹಗರಣ ಬಯಲು

Leave a Reply

Your email address will not be published. Required fields are marked *