TOP NEWS

BDA: ಬಿಡಿಎ ಆಸ್ತಿ ಗುಳುಂ ಮಾಡಲು ಸ್ಕೆಚ್; 160 ಕೋಟಿ ಮೌಲ್ಯದ ಭೂ ಹಗರಣ ಬಯಲು

FIR on people who tried to grabbing BDA land by fake documents

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (BDA) ಸೇರಿದ ಸುಮಾರು 160 ಕೋಟಿ ರೂಪಾಯಿ ಮೌಲ್ಯದ ಜಮೀನನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸಿದ ದೊಡ್ಡ ಜಾಲವೊಂದನ್ನು ಬಿಡಿಎ ವಿಚಕ್ಷಣಾ ದಳ ಭೇದಿಸಿದೆ. ಈ ಸಂಬಂಧ ಬೆಂಗಳೂರು ದಕ್ಷಿಣದ ಕೊತ್ತನೂರಿನ ನಿವಾಸಿಗಳಾದ ಲಕ್ಷ್ಮೀನಾರಾಯಣ, ಮಾರುತಿ ಕುಮಾರ್ ಸೇರಿದಂತೆ ಐವರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ (FIR) ದಾಖಲಾಗಿವೆ.

ಪ್ರಕರಣದ ಹಿನ್ನೆಲೆ

ಕೊತ್ತನೂರಿನ ಸರ್ವೆ ನಂಬರ್ 177/1 ಮತ್ತು 176/1ರಲ್ಲಿರುವ 10 ಗುಂಟೆ ಬೆಲೆಬಾಳುವ ಆಸ್ತಿಯೇ ಈ ವಿವಾದದ ಕೇಂದ್ರಬಿಂದು. ಈ ಜಮೀನನ್ನು ಬಿಡಿಎ 1994ರಲ್ಲೇ ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಂಡಿತ್ತು ಮತ್ತು 1996ರಲ್ಲಿ ವಾರಸುದಾರರಿಗೆ ಪರಿಹಾರವನ್ನೂ ಪಾವತಿಸಲಾಗಿತ್ತು. ಅಷ್ಟೇ ಅಲ್ಲದೆ, ಈ ಜಾಗವು ಬಿಡಿಎಗೆ ಸೇರಿದ್ದೆಂದು ಹೈಕೋರ್ಟ್ ಕೂಡ ಈ ಹಿಂದೆ ಸ್ಪಷ್ಟವಾಗಿ ಆದೇಶಿಸಿತ್ತು. ಇಷ್ಟೆಲ್ಲಾ ಸ್ಪಷ್ಟನೆಗಳಿದ್ದರೂ ಸಹ ಭೂಗಳ್ಳರು ಈ ಆಸ್ತಿಯ ಮೇಲೆ ಕಣ್ಣಿಟ್ಟಿದ್ದರು.

ಆರೋಪಿಗಳು ನಕಲಿ ಜಿಪಿಎ (GPA) ದಾಖಲೆಗಳನ್ನು ಸೃಷ್ಟಿಸಿ ಈ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹೊಂಚು ಹಾಕಿದ್ದರು. ಈ ಕುರಿತು ಹರ್ಷವರ್ಧನ್ ಎಂಬುವವರು ನೀಡಿದ ದೂರಿನ ಮೇರೆಗೆ ಬಿಡಿಎ ವಿಚಕ್ಷಣಾ ದಳದ ಡಿವೈಎಸ್‌ಪಿ ಹನುಮಂತರಾಯ ಅವರು ತನಿಖೆ ನಡೆಸಿದಾಗ ಅಕ್ರಮ ಬಯಲಾಗಿದೆ. ದಾಖಲೆಗಳ ಸೃಷ್ಟಿ ಮತ್ತು ವಂಚನೆಯ ಉದ್ದೇಶ ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಸರ್ಕಾರಿ ಆಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಬಿಡಿಎ ಅಧಿಕಾರಿಗಳ ಈ ಕ್ರಮ ಮಹತ್ವದ್ದಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಇದನ್ನೂ ಓದಿ: ಸಾರಿಗೆ ಸಮರ: ಮೇ 20 ರಿಂದ ರಾಜ್ಯಾದ್ಯಂತ ನೌಕರರ ಮುಷ್ಕರ

Leave a Reply

Your email address will not be published. Required fields are marked *