ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ (KSRTC) ನಡುವಿನ ವೇತನ ಜಟಾಪಟಿ ಈಗ ಮುಷ್ಕರದ ಹಂತಕ್ಕೆ ಬಂದು ತಲುಪಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮೇ 20ರಿಂದ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲು ಸಾರಿಗೆ ನೌಕರರ ಸಂಘಟನೆಗಳು ನಿರ್ಧರಿಸಿವೆ. ಇದರಿಂದಾಗಿ ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಮಾತುಕತೆ ವಿಫಲ, ಮುಷ್ಕರ ಅನಿವಾರ್ಯ: ಸರ್ಕಾರದೊಂದಿಗೆ ನಡೆಸಿದ ಸಂಧಾನ ಸಭೆಗಳು ಯಶಸ್ವಿಯಾಗದ ಹಿನ್ನೆಲೆಯಲ್ಲಿ ನೌಕರರ ಜಂಟಿ ಕ್ರಿಯಾ ಸಮಿತಿ ಈ ನಿರ್ಧಾರಕ್ಕೆ ಬಂದಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, “ನಾವು ಸಾರ್ವಜನಿಕರಿಗೆ ತೊಂದರೆ ನೀಡಬೇಕು ಎಂದು ಈ ನಿರ್ಧಾರ ಕೈಗೊಂಡಿಲ್ಲ. ಆದರೆ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಒಂದು ವೇಳೆ ಮೇ 20ರಿಂದ ಬಸ್ ಇಲ್ಲದೆ ಪ್ರಯಾಣಿಕರು ಪರದಾಡುವಂತಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆ,” ಎಂದು ಎಚ್ಚರಿಸಿದ್ದಾರೆ.
ನೌಕರರ ಪ್ರಮುಖ ಬೇಡಿಕೆಗಳೇನು? ಸಾರಿಗೆ ನೌಕರರು ಪ್ರಮುಖವಾಗಿ ಐದು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ:
- ಕಳೆದ 38 ತಿಂಗಳ ಬಾಕಿ ಇರುವ ಹಿಂಬಾಕಿ ವೇತನವನ್ನು ತಕ್ಷಣವೇ ನೀಡಬೇಕು.
- 2024ರ ಜನವರಿಯಿಂದ ಅನ್ವಯವಾಗುವಂತೆ ಮೂಲ ವೇತನದಲ್ಲಿ ಶೇ. 25ರಷ್ಟು ಹೆಚ್ಚಳ ಮಾಡಬೇಕು.
- ಶೇ. 31ರಷ್ಟು ತುಟ್ಟಿಭತ್ಯೆಯನ್ನು (DA) ಮೂಲ ವೇತನದೊಂದಿಗೆ ವಿಲೀನಗೊಳಿಸಬೇಕು.
- ಬಾಟಾ ಸೇರಿದಂತೆ ಇತರ ಭತ್ಯೆಗಳ ಮೊತ್ತವನ್ನು ಹೆಚ್ಚಿಸಬೇಕು.
- ಕೋವಿಡ್ ಸಮಯದ ಬಾಕಿ ಹಾಗೂ ₹1,272 ಕೋಟಿ ಮೊತ್ತದ ಹಿಂಬಾಕಿಯನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು.
ಸರ್ಕಾರದ ವಿರುದ್ಧ ಮುಖಂಡರ ಆಕ್ರೋಶ: ಸಾರಿಗೆ ನೌಕರರ ಮುಖಂಡರಾದ ಜ್ಯೋತಿ ಅನಂತಸುಬ್ಬಾರಾವ್ ಅವರು ಮಾತನಾಡಿ, ಸರ್ಕಾರದ ಶಕ್ತಿ ಯೋಜನೆಯ ಯಶಸ್ಸಿನ ಹಿಂದೆ ನೌಕರರ ಕಠಿಣ ಶ್ರಮವಿದೆ. ಇಷ್ಟಿದ್ದರೂ ನಷ್ಟದ ನೆಪ ಹೇಳಿ ನೌಕರರನ್ನು ಸತಾಯಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಸರ್ಕಾರ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವುದನ್ನು ನಿಲ್ಲಿಸಿ, ನೌಕರರ ಹಿತ ಕಾಪಾಡದಿದ್ದರೆ ಮೇ 20ರಿಂದ ರಾಜ್ಯದ ಮೂಲೆ ಮೂಲೆಯಲ್ಲೂ ಬಸ್ ಸಂಚಾರ ಬಂದ್ ಮಾಡಿ ಹೋರಾಟ ತೀವ್ರಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ತೀರ್ಮಾನವೇ ನಮಗೆ ಪ್ರಸಾದ: ನಾಯಕತ್ವ ಬದಲಾವಣೆ ಚರ್ಚೆಗೆ ಡಿಕೆಶಿ ಮಾರ್ಮಿಕ ಪ್ರತಿಕ್ರಿಯೆ
