Sandalwood: ಬಾಕ್ಸ್ ಆಫೀಸ್‌ನಲ್ಲಿ ‘ಕೆಡಿ’ ಅಬ್ಬರ: ಎರಡನೇ ಭಾಗದ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಜೋಗಿ ಪ್ರೇಮ್!

sandalwoood kd film collection information

ಬೆಂಗಳೂರು: ಸ್ಯಾಂಡಲ್‌ವುಡ್‌ನ (Sandalwood) ಬಹುನಿರೀಕ್ಷಿತ ಆಕ್ಷನ್ ಸಿನಿಮಾ ‘ಕೆಡಿ: ದಿ ಡೆವಿಲ್’ ಏಪ್ರಿಲ್ 30ರಂದು ಅದ್ಧೂರಿಯಾಗಿ ತೆರೆಕಂಡಿದ್ದು, ರಾಜ್ಯಾದ್ಯಂತ ಸಿನಿಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಜೋಡಿಯ ಈ ಮಾಸ್ ಸಿನಿಮಾ, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿದೆ.

ಮೊದಲ ದಿನದ ಗಳಿಕೆ ಎಷ್ಟು? ಚಿತ್ರದ ಅಧಿಕೃತ ಕಲೆಕ್ಷನ್ ರಿಪೋರ್ಟ್ ಇನ್ನು ಹೊರಬೀಳಬೇಕಿದ್ದರೂ, ಜಾಲತಾಣಗಳ ಅಂದಾಜಿನ ಪ್ರಕಾರ ‘ಕೆಡಿ’ ಮೊದಲ ದಿನವೇ ದೇಶಾದ್ಯಂತ ಸುಮಾರು 4.10 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗುತ್ತಿದೆ. ಇಂದು (ಮೇ 1) ಕಾರ್ಮಿಕರ ದಿನಾಚರಣೆಯ ರಜೆ ಇರುವುದರಿಂದ, ಎರಡನೇ ದಿನ ಚಿತ್ರದ ಗಳಿಕೆ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳು ದಟ್ಟವಾಗಿವೆ. ಧ್ರುವ ಸರ್ಜಾ ಅವರ ರಗಡ್ ಅವತಾರ ಮತ್ತು ಪ್ರೇಮ್ ಅವರ ಅದ್ಧೂರಿ ಮೇಕಿಂಗ್ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದಂತಿದೆ.

ಖಚಿತವಾಯಿತು ‘ಕೆಡಿ ಪಾರ್ಟ್-2’: ಸಿನಿಮಾದ ಯಶಸ್ಸಿನ ನಡುವೆಯೇ ನಿರ್ದೇಶಕ ಪ್ರೇಮ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಚಿತ್ರಕ್ಕೆ ಎರಡನೇ ಭಾಗ ಇರುವುದು ಖಚಿತವಾಗಿದ್ದು, ಈ ಬಗ್ಗೆ ಅವರು ಮಾತನಾಡಿದ್ದಾರೆ. “ಕೆಡಿ 2 ಸಿದ್ಧಪಡಿಸಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಸದ್ಯಕ್ಕೆ ಸಿನಿಮಾ ಎಲ್ಲಾ ಭಾಷೆಗಳಲ್ಲಿ ಜನರನ್ನು ತಲುಪಲಿ. ಮುಂದಿನ ಭಾಗದ ಕೆಲಸಗಳು ಸದ್ಯದಲ್ಲೇ ಶುರುವಾಗಲಿವೆ” ಎಂದು ಅವರು ತಿಳಿಸಿದ್ದಾರೆ. ಇನ್ನು ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಅತಿಥಿ ಪಾತ್ರ ಪಾರ್ಟ್-2 ನಲ್ಲಿ ಪೂರ್ಣ ಪ್ರಮಾಣದಲ್ಲಿ ಇರಲಿದೆಯೇ ಎಂಬ ಪ್ರಶ್ನೆಗೆ, ಪ್ರೇಮ್ “ಕಾದು ನೋಡಿ” ಎನ್ನುವ ಮೂಲಕ ಸಸ್ಪೆನ್ಸ್ ಉಳಿಸಿಕೊಂಡಿದ್ದಾರೆ.

ಪ್ರೇಮ್ ಬೆನ್ನುತಟ್ಟಿದ ಧ್ರುವ: ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಧ್ರುವ ಸರ್ಜಾ, “ಮಚ್ಚು ಹಿಡಿದು ಅಬ್ಬರಿಸಲು ನಾನು ಯಾವಾಗಲೂ ಸಿದ್ಧ. ಆದರೆ ಇಂತಹ ಮಾಸ್ ಪಾತ್ರಗಳನ್ನು ಸೃಷ್ಟಿಸಲು ಎಲ್ಲರಿಗೂ ಸಾಧ್ಯವಿಲ್ಲ, ಅದಕ್ಕೆ ಪ್ರೇಮ್ ಅವರಂತಹ ನಿರ್ದೇಶಕರೇ ಬೇಕು” ಎಂದು ಶ್ಲಾಘಿಸಿದ್ದಾರೆ. ಆರಂಭದಲ್ಲಿ ತಾಂತ್ರಿಕ ಸಮಸ್ಯೆಯಿಂದ ಕೆಲವು ಶೋಗಳು ರದ್ದಾಗಿದ್ದರೂ, ಸದ್ಯ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡದ ಉತ್ಸಾಹ ಹೆಚ್ಚಿಸಿದೆ. ವಾರಾಂತ್ಯದಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ಕರಾವಳಿ ಚೆಲುವೆ ಪೂಜಾ ಹೆಗ್ಡೆಗೆ ರಾಜ್ ಬಿ ಶೆಟ್ಟಿ ನಟನೆ ಅಂದ್ರೆ ಪಂಚಪ್ರಾಣ: ಮಂಗಳೂರಿನಲ್ಲಿ ನಟಿ ಮನದಾಳದ ಮಾತು

Leave a Reply

Your email address will not be published. Required fields are marked *