ನವದೆಹಲಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಯ ಯೋಜನೆಯೊಂದರ ಅಡಿಯಲ್ಲಿ ಸೌತೆಕಾಯಿ ಬೇಸಾಯಕ್ಕಾಗಿ ಬರೋಬ್ಬರಿ 99 ಲಕ್ಷ 60 ಸಾವಿರ ರೂಪಾಯಿ ಸರ್ಕಾರಿ ಸಬ್ಸಿಡಿ (Subsidy) ಪಡೆದಿರುವುದು ಇದೀಗ ದೇಶಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವನ್ನು ಮುನ್ನೆಲೆಗೆ ತಂದಿರುವ ವಿರೋಧ ಪಕ್ಷಗಳು, ಸಚಿವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಇಷ್ಟು ದೊಡ್ಡ ಮೊತ್ತದ ಸಬ್ಸಿಡಿ ಲಪಟಾಯಿಸಿದ್ದಾರೆ ಎಂದು ಗಂಭೀರ ಆರೋಪ ಮಾಡುತ್ತಿವೆ. ಆದರೆ, ಈ ವಿವಾದದ ಕುರಿತು ಅಧಿಕೃತವಾಗಿ ಪ್ರತಿಕ್ರಿಯಿಸಿರುವ ಸಚಿವರು, ರಾಜಕೀಯಕ್ಕೆ ಬರುವ ಮುನ್ನವೂ ತಾನೊಬ್ಬ ರೈತನಾಗಿದ್ದು, ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಯೇ ಈ ಸಬ್ಸಿಡಿ ಪಡೆದಿದ್ದೇನೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಬ್ಸಿಡಿ ಸಿಕ್ಕಿರುವುದನ್ನ ಒಪ್ಪಿಕೊಂಡ ಸಚಿವ
ರಾಜಸ್ಥಾನದ ಪುಷ್ಕರ್ ಬಳಿ ಇರುವ ತಮ್ಮ ವೈಯಕ್ತಿಕ ಫಾರ್ಮ್ ಹೌಸ್‌ನಲ್ಲಿ ಆಧುನಿಕ ಕೃಷಿ ಕೈಗೊಳ್ಳಲು ಕೃಷಿ ಸಚಿವಾಲಯದ ಯೋಜನೆಯಡಿ ಧನಸಹಾಯ ಸಿಕ್ಕಿರುವುದನ್ನು ಸಚಿವರು ಒಪ್ಪಿಕೊಂಡಿದ್ದಾರೆ. ವರದಿಗಳ ಪ್ರಕಾರ, ಆಯ್ದ ತರಕಾರಿಗಳು ಮತ್ತು ಹೂವುಗಳ ವಾಣಿಜ್ಯ ಬೇಸಾಯವನ್ನು ಉತ್ತೇಜಿಸುವ ಉದ್ದೇಶದಿಂದ 2014-15 ರಲ್ಲಿ ಆರಂಭಿಸಲಾದ ‘ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್’ (MIDH) ಅಡಿಯಲ್ಲಿ ಈ ಸಬ್ಸಿಡಿ ನೀಡಲಾಗಿದೆ. ಇದನ್ನು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ‘ನ್ಯಾಷನಲ್ ಹಾರ್ಟಿಕಲ್ಚರ್ ಬೋರ್ಡ್’ (NHB) ನಿರ್ವಹಿಸುತ್ತದೆ. ಈ ಮಂಡಳಿಯು ೨೦೨೫ ರಲ್ಲಿ ವಾಣಿಜ್ಯ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ದೇಶಾದ್ಯಂತ ಮಂಜೂರು ಮಾಡಿದ್ದ ಒಟ್ಟು ೪೬೭ ಯೋಜನೆಗಳಲ್ಲಿ ಸಚಿವ ಭಾಗೀರಥ್ ಚೌಧರಿ ಅವರ ೧೬,೫೯೨ ಚದರ ಮೀಟರ್ ವಿಸ್ತೀರ್ಣದ ಸೌತೆಕಾಯಿ ಕೃಷಿ ಯೋಜನೆಯೂ ಒಂದಾಗಿತ್ತು.
ಬ್ಯಾಂಕ್ ಸಾಲ ಪಡೆದು ಆಧುನಿಕ ಕೃಷಿ; ಕೃಷಿ ಭೂಮಿಯಲ್ಲಿ ಸಬ್ಸಿಡಿ ಬೋರ್ಡ್ ಹಾಕಿದ ಸಚಿವ
ತಮ್ಮ ಮೇಲಿನ ಆರೋಪಗಳಿಗೆ ಸವಿಸ್ತಾರವಾದ ಉತ್ತರ ನೀಡಿರುವ ಭಾಗೀರಥ್ ಚೌಧರಿ, “ನಾನು ಮೊದಲಿನಿಂದಲೂ ಕೃಷಿ ಮಾಡಿಕೊಂಡೇ ಬಂದವನು. ನನ್ನ ಜಮೀನಿರುವ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಹೀಗಾಗಿ ಮಳೆನೀರನ್ನು ಸಂಗ್ರಹಿಸಿ ನನ್ನ 60 ಬಿಘಾ ಜಮೀನಿನಲ್ಲಿರುವ ಗಿಡಮರಗಳಿಗೆ ವರ್ಷಪೂರ್ತಿ ನೀರುಣಿಸಲು 2 ಕೋಟಿ ಲೀಟರ್ ಸಾಮರ್ಥ್ಯದ ನಾಲ್ಕು ಬೃಹತ್ ಕೃಷಿ ಹೊಂಡಗಳನ್ನು (Farm Pools) ನಿರ್ಮಿಸಿದ್ದೇನೆ. ಈ ಅತ್ಯಾಧುನಿಕ ತಂತ್ರಜ್ಞಾನದ ಕೃಷಿಗಾಗಿ ನಾನು ರಾಷ್ಟ್ರೀಕೃತ ಬ್ಯಾಂಕ್‌ನಿಂದ ನಿಯಮಾನುಸಾರವೇ 2 ಕೋಟಿ ರೂಪಾಯಿ ಸಾಲ ಪಡೆದಿದ್ದೇನೆ. ನಾನು ಯಾವುದೇ ವಿಷಯವನ್ನು ಮುಚ್ಚಿಟ್ಟಿಲ್ಲ, ಜಮೀನು ನನ್ನ ಹೆಸರಿನಲ್ಲೇ ಇದೆ ಮತ್ತು ಸಬ್ಸಿಡಿಯನ್ನೂ ನನ್ನದೇ ಹೆಸರಿನಲ್ಲಿ ಪಡೆದಿದ್ದೇನೆ. ಇದು ನನಗೆ ಸಹೋದ್ಯೋಗಿ ಸಚಿವ ರಾಮನಾಥ್ ಠಾಕೂರ್ ಅವರ ಇಲಾಖೆಯಿಂದ ಸಿಕ್ಕಿರುವ ಸಬ್ಸಿಡಿಯಾಗಿದೆ” ಎಂದು ವಿವರಿಸಿದ್ದಾರೆ.
ತಾವು ಮಾಡುತ್ತಿರುವ ಸಾಧನೆಯನ್ನು ಇತರ ರೈತರಿಗೂ ತಲುಪಿಸುವ ನಿಟ್ಟಿನಲ್ಲಿ, ತಮಗೆ ಸಿಕ್ಕ ಸಬ್ಸಿಡಿ ಮತ್ತು ಯೋಜನೆಯ ಒಟ್ಟು ವೆಚ್ಚದ ಸಂಪೂರ್ಣ ವಿವರಗಳಿರುವ ಬೃಹತ್ ಮಾಹಿತಿ ಫಲಕವನ್ನು (Board) ತಮ್ಮ ಜಮೀನಿನ ಮುಂದೆಯೇ ಪ್ರದರ್ಶಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ದೇಶದಲ್ಲಿ ಒಬ್ಬ ಉದ್ಯಮಿ ಅಥವಾ ರಾಜಕಾರಣಿ ಕೈಗಾರಿಕೆ ಸ್ಥಾಪಿಸಿದಾಗಲೂ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ಅದೇ ರೀತಿ ರೈತನಿಗೆ ಯೂರಿಯಾ ಹಾಗೂ ಡಿಎಪಿ (DAP) ಗೊಬ್ಬರ ಖರೀದಿಸುವಾಗಲೂ ಸಬ್ಸಿಡಿ ಸಿಗುತ್ತದೆ. ರಾಜಸ್ಥಾನದ ತೀವ್ರ ನೀರಿನ ಅಭಾವದ ನಡುವೆಯೂ ಕಷ್ಟಪಟ್ಟು ಮಳೆನೀರ್ ಕೊಯ್ಲು ಮಾಡಿ ಕೃಷಿ ಮಾಡುತ್ತಿರುವ ತಮಗೆ ಯೋಜನೆ ಆಧಾರದ ಮೇಲೆ ಈ ನೆರವು ಸಿಕ್ಕಿದೆ. ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಆರೋಪ ಮಾಡುವುದು ಸಹಜ, ಆದರೆ ತಾವು ಇತರ ರೈತರಿಗೆ ಪ್ರೇರಣೆಯಾಗಲು ಈ ಆಧುನಿಕ ಕೃಷಿ ಮಾಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
