ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಹಾಗೂ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ (Protest) ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ತೀವ್ರ ಹೋರಾಟಕ್ಕೆ ಕೇಂದ್ರ ಸರ್ಕಾರ ಕೊನೆಗೂ ಮಣಿದಿದೆ. ಈ ಗಂಭೀರ ವಿಷಯದ ಕುರಿತು ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆಸಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಮಹತ್ವದ ಪ್ರಕಟಣೆ ಹೊರಡಿಸಿದ್ದು, ವಿದ್ಯಾರ್ಥಿಗಳ ಭವಿಷ್ಯವೇ ನಮ್ಮ ಮೊದಲ ಆದ್ಯತೆಯಾಗಿದೆ. ಹೀಗಾಗಿ ನೀಟ್ ಅಕ್ರಮಗಳ ಕುರಿತು ಸದನದಲ್ಲಿ ವಿವರವಾದ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ಮೋದಿ ವಿರುದ್ಧ ವಿಪಕ್ಷಗಳ ಆರೋಪ
ಆದರೆ ಸರ್ಕಾರದ ಈ ಪ್ರಸ್ತಾವನೆಗೆ ಒಪ್ಪದ ವಿರೋಧ ಪಕ್ಷಗಳು, ದೆಹಲಿ ಬೀದಿಗಳಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿವೆ. ಈ ವಿಷಯದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸದನದಲ್ಲಿ ಬಂದು ಉತ್ತರಿಸಬೇಕು ಎಂದು ಪಟ್ಟು ಹಿಡಿದಿವೆ. ವಿರೋಧ ಪಕ್ಷಗಳ ಪರವಾಗಿ ಧ್ವನಿ ಎತ್ತಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪ್ರಧಾನಿ ಮೋದಿಯವರು ಸಂಸತ್ತಿನ ಹೊರಗೆ ಯುವಕರ ಬಗ್ಗೆ ಮಾತನಾಡುತ್ತಾರೆ, ಆದರೆ ಸಂಸತ್ತಿನ ಒಳಗಡೆ ಬಂದು ಜವಾಬ್ದಾರಿಯುತ ಹೇಳಿಕೆ ನೀಡಲು ಅವರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಸರ್ಕಾರದ ಆದೇಶದ ಮೇರೆಗೆ ದೆಹಲಿಯ ರಸ್ತೆಗಳಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರು ಅತ್ಯಂತ ಅಮಾನುಷವಾಗಿ ಥಳಿಸಿದ್ದಾರೆ, ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದರ ನಡುವೆ, ಸಂಸತ್ತಿನಲ್ಲಿ ಯಾವುದೇ ಚರ್ಚೆ ಆರಂಭವಾಗುವ ಮುನ್ನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ಇಡೀ ವಿರೋಧ ಪಕ್ಷಗಳ ಒಕ್ಕೂಟ ಹಠ ಹಿಡಿದಿದೆ. ಮೊದಲು ತಪ್ಪಿತಸ್ಥರ ಹೊಣೆಗಾರಿಕೆಯನ್ನು ನಿಗದಿಪಡಿಸಿ, ಸಚಿವರ ರಾಜೀನಾಮೆ ಪಡೆದ ಬಳಿಕವಷ್ಟೇ ಚರ್ಚೆ ನಡೆಸೋಣ ಎಂದು ಕಾಂಗ್ರೆಸ್ ನಾಯಕ ಪವನ್ ಖೇಡಾ ತಿಳಿಸಿದ್ದಾರೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಉಭಯ ಪಕ್ಷಗಳನ್ನು ಸಮಾಧಾನಪಡಿಸಿ ಚರ್ಚೆ ಆರಂಭಿಸಲು ಪ್ರಯತ್ನಿಸಿದರಾದರೂ, ವಿರೋಧ ಪಕ್ಷಗಳು ಸಚಿವರ ರಾಜೀನಾಮೆಗೆ ಪಟ್ಟು ಹಿಡಿದು ಗದ್ದಲ ಮುಂದುವರಿಸಿದ್ದರಿಂದ ಸದನವನ್ನು ಮುಂದೂಡಬೇಕಾಯಿತು. ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕಿರಣ್ ರಿಜಿಜು, ನಾವು ತಕ್ಷಣವೇ ಚರ್ಚೆಗೆ ಸಿದ್ಧವಿದ್ದರೂ ವಿರೋಧ ಪಕ್ಷಗಳೇ ಉದ್ದೇಶಪೂರ್ವಕವಾಗಿ ಕಲಾಪವನ್ನು ವಿಳಂಬ ಮಾಡುತ್ತಿವೆ ಎಂದು ಆರೋಪಿಸಿದರು.
ಯುವಕರ ಭವಿಷ್ಯದ ಜೊತೆ ಆಟವಾಡಲು ಯಾರಿಗೂ ಬಿಡುವುದಿಲ್ಲ
ಇದೇ ವೇಳೆ, ಪರೀಕ್ಷಾ ಅಕ್ರಮಗಳ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘೋರ ಪಾಪದ ಕೆಲಸದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಯುವಕರ ಭವಿಷ್ಯದ ಜೊತೆ ಆಟವಾಡಲು ಯಾರಿಗೂ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸೂಕ್ಷ್ಮ ವಿಷಯವು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದೆ ದೇಶದ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಜೊತೆಯಾಗಿ ಕೆಲಸ ಮಾಡಬೇಕು ಮತ್ತು ಯುವ ಪೀಳಿಗೆಯ ನಂಬಿಕೆಯನ್ನು ಗೆಲ್ಲಬೇಕು ಎಂದು ಅವರು ಎನ್ಡಿಎ ಸಂಸದರಿಗೆ ಕರೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸುವುದು ಸುಲಭ, ಆದರೆ ಅವರಿಗೆ ಸರಿಯಾದ ಮಾರ್ಗ ತೋರಿಸುವುದು ಕಷ್ಟಕರವಾಗಿದ್ದು, ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಮತ್ತೊಂದೆಡೆ, ಮಂಗಳವಾರದ ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರಿಂದ ವಶಕ್ಕೆ ಒಳಗಾಗಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಿದ್ಯಾರ್ಥಿಗಳನ್ನು ಶೋಷಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳ ಹೆಸರಿನಲ್ಲಿ ಕೇವಲ ರಾಜಕೀಯ ನಾಟಕ ಆಡುತ್ತಿದೆ. ಇವರಿಗೆ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಹುಡುಕುವ ಯಾವುದೇ ಆಸಕ್ತಿಯಿಲ್ಲ, ಕೇವಲ ರಾಜಕೀಯ ಹೆಡ್ಲೈನ್ಗಳಿಗಾಗಿ ಸಂಸತ್ತಿನ ಕಲಾಪವನ್ನು ಹಳ್ಳ ಹಿಡಿಸುತ್ತಿದ್ದಾರೆ ಎಂದು ಎಕ್ಸ್ (ಟ್ವಿಟರ್) ಮೂಲಕ ರಾಹುಲ್ ಗಾಂಧಿ ವಿರುದ್ಧ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ನೀಟ್ ಪರೀಕ್ಷೆ ರದ್ದತಿಗೆ ತಮಿಳುನಾಡಿನ ಟಿವಿ ಕೆ ಆಗ್ರಹ: ಕೇಂದ್ರ ಮತ್ತು ಡಿಎಂಕೆ ವಿರುದ್ಧ ನಟ ವಿಜಯ್ ಪಕ್ಷ ವಾಗ್ದಾಳಿ
