ಚೆನ್ನೈ: ದೇಶಾದ್ಯಂತ ನೀಟ್ ಪರೀಕ್ಷಾ ಅಕ್ರಮ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ತಮಿಳುನಾಡಿನ ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ನೀಟ್ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ನಟ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನೇತೃತ್ವದ ಟಿವಿ ಕೆ ಪಕ್ಷವು ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸುವುದು ಮಾತ್ರವಲ್ಲದೆ, ಈ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಮಂಗಳವಾರ ಪಟ್ಟು ಹಿಡಿದಿದೆ.
ಟಿವಿಕೆ ಹೇಳಿದ್ದೇನು?
ದೆಹಲಿಯಲ್ಲಿ ನೀಟ್ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಜೋರಾಗಿರುವ ಈ ಸಮಯದಲ್ಲಿ, ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೇ ನೀಡಬೇಕು ಎಂದು ಟಿವಿ ಕೆ ಆಗ್ರಹಿಸಿದೆ. ನೀಟ್ ಪರೀಕ್ಷೆಯನ್ನು ರದ್ದುಪಡಿಸುವುದು ತಮ್ಮ ಪಕ್ಷದ ಅಚಲ ಮತ್ತು ಸ್ಪಷ್ಟ ನಿಲುವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ವಿಪಕ್ಷ ಡಿಎಂಕೆ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಟಿವಿ ಕೆ, ಅಧಿಕಾರಕ್ಕೆ ಬಂದರೆ ನೀಟ್ ರದ್ದುಗೊಳಿಸುವುದಾಗಿ ಸುಳ್ಳು ಭರವಸೆ ನೀಡಿ ಮತ ಗಿಟ್ಟಿಸಿಕೊಳ್ಳುವ “ವಂಚನೆಯ ರಾಜಕೀಯ”ವನ್ನು ನಾವು ಎಂದಿಗೂ ಮಾಡುವುದಿಲ್ಲ ಎಂದು ತಿರುಗೇಟು ನೀಡಿದೆ. ೨೦೨೧ ರ ವಿಧಾನಸಭಾ ಚುನಾವಣೆಗೂ ಮುನ್ನ ಡಿಎಂಕೆ ಅಧಿಕಾರಕ್ಕೆ ಬಂದ ತಕ್ಷಣ ನೀಟ್ ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ರಾಜ್ಯಗಳಿಗೆ ಹಕ್ಕು ಕೊಡಿ
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶಿಕ್ಷಣ ವಿಷಯವನ್ನು ಸಂವಿಧಾನದ ‘ಸಮವರ್ತಿ ಪಟ್ಟಿ’ಯಿಂದ ‘ರಾಜ್ಯ ಪಟ್ಟಿ’ಗೆ ಸ್ಥಳಾಂತರಿಸಬೇಕು ಎಂದು ಟಿವಿ ಕೆ ಒತ್ತಾಯಿಸಿದೆ. ಒಂದು ವೇಳೆ ಇದಕ್ಕೆ ಕಾನೂನು ಅಥವಾ ತಾಂತ್ರಿಕ ತೊಡಕುಗಳಿದ್ದರೆ, ಮಧ್ಯಂತರ ಪರಿಹಾರವಾಗಿ ‘ವಿಶೇಷ ಸಮವರ್ತಿ ಪಟ್ಟಿ’ಯನ್ನು ರಚಿಸಿ ರಾಜ್ಯಗಳಿಗೆ ವೈದ್ಯಕೀಯ ಶಿಕ್ಷಣದ ಮೇಲೆ ಸಂಪೂರ್ಣ ಹಕ್ಕು ನೀಡಬೇಕು ಎಂದು ಪಕ್ಷ ಹೇಳಿದೆ.
ಇತ್ತೀಚೆಗೆ ನೀಟ್ ವಿರುದ್ಧ ದನಿಯೆತ್ತಿದ್ದ ರ‍್ಯಾಪ್ ಗಾಯಕ ‘ತೆರುಕ್ಕುರಲ್’ ಅರಿವು ಅವರು ಚೆನ್ನೈನ ತಮಿಳುನಾಡು ಸಚಿವಾಲಯದ ಮುಂದೆ ಪ್ರತಿಭಟನೆ ನಡೆಸಿ, ನೀಟ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಟಿವಿ ಕೆ ಈ ಕಠಿಣ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
