ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ರಿಯಾಲಿಟಿ ಶೋ ‘ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 13’ರ ಸುಂದರ ಪಯಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಕನ್ನಡಿಗರ ನೆಚ್ಚಿನ ನಿರೂಪಕ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಖಡಕ್ ನಿರೂಪಣೆಯಲ್ಲಿ ಸೆಪ್ಟೆಂಬರ್ 6ರ ಭಾನುವಾರದಂದು ಈ ಬಾರಿಯ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳಲಿದೆ. ಪ್ರತಿ ಋತುವಿನಲ್ಲೂ ಹೊಸತನವನ್ನು ಹೊತ್ತು ತರುವ ಈ ಪ್ರದರ್ಶನವು, ಈ ಬಾರಿಯೂ ಕಿರುತೆರೆ ವೀಕ್ಷಕರಿಗೆ ನಿರೀಕ್ಷೆಗೂ ಮೀರಿದ ಭರಪೂರ ಮನರಂಜನೆ ನೀಡಲು ಸಂಪೂರ್ಣವಾಗಿ ಸಜ್ಜಾಗಿದೆ.
ಈ ಬಾರಿ ಬಹಳ ವಿಶೇಷ ಬಿಗ್ಬಾಸ್
ಈ ಬಾರಿಯ ಸೀಸನ್ನಲ್ಲಿ ಪ್ರಸಾರ ಸಮಯ ಹಾಗೂ ಶೋ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ಸಂಜೆ 6 ಗಂಟೆಗೆ ಆರಂಭವಾಗುತ್ತಿದ್ದ ಈ ಅದ್ದೂರಿ ಕಾರ್ಯಕ್ರಮವು, ಈ ಬಾರಿ ಭಾನುವಾರ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋ ಹಾಟ್ಸ್ಟಾರ್ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಏಕಕಾಲಕ್ಕೆ ಪ್ರಸಾರವಾಗಲಿದೆ. ಒಟ್ಟು 16 ರಿಂದ 18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸುವ ಸಾಧ್ಯತೆಯಿದ್ದು, ಈ ಪೈಕಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಹಂತದಿಂದ ನಾಲ್ವರು ಸ್ಪರ್ಧಿಗಳು ನೇರವಾಗಿ ದೊಡ್ಮನೆಗೆ ಆಯ್ಕೆಯಾಗಲಿದ್ದಾರೆ. ಇದರಲ್ಲಿ ಮೂವರು ಸ್ಪರ್ಧಿಗಳನ್ನು ಸಾರ್ವಜನಿಕರ ವೋಟಿಂಗ್ ಆಧಾರದ ಮೇಲೆ ಮತ್ತು ಒಬ್ಬ ಸ್ಪರ್ಧಿಯನ್ನು ತೀರ್ಪುಗಾರರ ನಿರ್ಧಾರದ ಮೇರೆಗೆ ಆಯ್ಕೆ ಮಾಡಿ ಕಳುಹಿಸುವ ವಿಶಿಷ್ಟ ಯೋಜನೆಯನ್ನು ರೂಪಿಸಲಾಗಿದೆ.
ಹೇಗಿರಲಿದೆ ಮನೆಯ ವಿನ್ಯಾಸ?
ವಿವಿಧ ರಂಗಗಳ ಪ್ರಸಿದ್ಧ ವ್ಯಕ್ತಿಗಳು ಒಂದೇ ಸೂರಿನಡಿ ಸೇರುವುದು ಬಿಗ್ ಬಾಸ್ ಶೋದ ಪ್ರಮುಖ ಆಕರ್ಷಣೆಯಾಗಿದೆ. ನಟನೆ, ಮಾಡೆಲಿಂಗ್, ಸಾಮಾಜಿಕ ಜಾಲತಾಣಗಳ ಇನ್ಫ್ಲುಯೆನ್ಸರ್ಗಳು, ನಿರೂಪಕರು ಹಾಗೂ ಗಾಯಕರ ಜೊತೆಗೆ ಈ ಬಾರಿಯೂ ಜನಸಾಮಾನ್ಯರಿಗೂ ದೊಡ್ಮನೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಬಾರಿಯ ಮತ್ತೊಂದು ಪ್ರಮುಖ ಸಸ್ಪೆನ್ಸ್ ಎಂದರೆ ದೊಡ್ಮನೆಯ ವಿನ್ಯಾಸ. ‘ವರ್ಲ್ಡ್ ಟೂರ್’ ಅಥವಾ ಫ್ಲೈಟ್ ಥೀಮ್ ಆಧಾರದಲ್ಲಿ ಇಡೀ ಮನೆಯನ್ನು ಅದ್ಭುತವಾಗಿ ಅಲಂಕರಿಸಲಾಗಿದ್ದು, ವಿಶ್ವದ ನಾನಾ ಅದ್ಭುತಗಳ ಕಲ್ಪನೆಯನ್ನು ಬಿಗ್ ಬಾಸ್ ಸೆಟ್ನಲ್ಲಿ ಕಾಣಬಹುದಾಗಿದೆ. ಯಾರು ಫೇವರಿಟ್ ಆಗ್ತಾರೆ, ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ತೆಲುಗು ಮಾತನಾಡಿ ನೆಟ್ಟಿಗರ ಟ್ರೋಲ್ಗೆ ಗುರಿಯಾದ ನಟಿ ರಶ್ಮಿಕಾ ಮಂದಣ್ಣ
