TOP NEWS

Mallikarjun Kharge: ಖರ್ಗೆ ಸಮಾವೇಶದ ಸ್ಥಳ ‘ಶುದ್ಧೀಕರಣ’ ವಿವಾದ: ಉತ್ತರಾಖಂಡಕ್ಕೆ ವರ್ಗಾವಣೆಯಾಯ್ತು ಬೆಂಗಳೂರಿನಲ್ಲಿ ದಾಖಲಾಗಿದ್ದ ಜೀರೋ ಎಫ್‌ಐಆರ್!

Mallikarjun Kharge Rally Controversy Bengaluru Zero FIR Transferred to Haldwani Police for Probe

ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಭಾಗವಹಿಸಿದ್ದ ಸಮಾವೇಶದ ಸ್ಥಳದಲ್ಲಿ ಬಿಜೆಪಿಯವರು ಶುದ್ಧೀಕರಣ ನಡೆಸಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಾಗಿದ್ದ ಎಫ್‌ಐಆರ್ ಇದೀಗ ಅಧಿಕೃತವಾಗಿ ಉತ್ತರಾಖಂಡಕ್ಕೆ ವರ್ಗಾವಣೆಯಾಗಿದೆ. ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಮಹೇಂದ್ರ ಭಟ್ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ಈ ಪ್ರಮುಖ ದೂರು ದಾಖಲಾಗಿತ್ತು.

ಏನಿದು ಪ್ರಕರಣ?

ವಿಚಾರದ ಹಿನ್ನೆಲೆಯನ್ನು ಗಮನಿಸುವುದಾದರೆ, ಅಖಿಲ ಭಾರತ ಆದಿವಾಸಿ ಕಾಂಗ್ರೆಸ್‌ನ ಮಾಜಿ ಉಪಾಧ್ಯಕ್ಷ ಟಿ.ಆರ್. ರಾಮಪ್ಪ ಅವರು ಸೆಪ್ಟೆಂಬರ್ 4ರಂದು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಗೆ ತೆರಳಿ ಸುದೀರ್ಘ ಲಿಖಿತ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ತಕ್ಷಣವೇ ‘ಜೀರೋ ಎಫ್‌ಐಆರ್’ ದಾಖಲಿಸಿಕೊಂಡಿದ್ದರು. ಆದರೆ, ಕೃತ್ಯ ನಡೆದ ಸ್ಥಳ ಮತ್ತು ವ್ಯಾಪ್ತಿಯನ್ನು ಆಧರಿಸಿ, ಈ ಎಫ್‌ಐಆರ್ ಅನ್ನು ಉತ್ತರಾಖಂಡದ ಹಲ್ದ್ವಾನಿ ಪೊಲೀಸ್ ಠಾಣೆಗೆ ಹೆಚ್ಚಿನ ತನಿಖೆಗಾಗಿ ವರ್ಗಾಯಿಸಲಾಗಿದೆ. ಈ ವಿವಾದಾತ್ಮಕ ಕೃತ್ಯದ ವಿರುದ್ಧ ಈಗಾಗಲೇ ದೇಶಾದ್ಯಂತ ಸುಮಾರು 8 ವಿವಿಧ ಕಡೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ ಎಂಬುದು ಗಮನಾರ್ಹ.

ಟಿ.ಆರ್. ರಾಮಪ್ಪ ನೀಡಿದ ದೂರಿನಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 196(1)(b), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಸೆಕ್ಷನ್ 3(1)(u), ಹಾಗೂ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ (PCR Act) 1955ರ ಸೆಕ್ಷನ್ 7(1)(d) ಮತ್ತು ಇತರ ಕಠಿಣ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳೆದ ಆಗಸ್ಟ್ 8ರಂದು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿ ಮುಖ್ಯ ಭಾಷಣ ಮಾಡಿದ್ದರು. ಆದರೆ, ಸಮಾವೇಶ ಮುಗಿದ ಎರಡು ದಿನಗಳ ನಂತರ ಅಂದರೆ ಆಗಸ್ಟ್ 10ರಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆ ಮೈದಾನದಲ್ಲಿ ಗೋಮೂತ್ರ ಪ್ರೋಕ್ಷಣೆ ಮತ್ತು ಶುದ್ಧೀಕರಣ ಪೂಜೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್‌

ಮಲ್ಲಿಕಾರ್ಜುನ ಖರ್ಗೆ ಅವರು ಪರಿಶಿಷ್ಟ ಜಾತಿಗೆ ಸೇರಿದ ಹಿರಿಯ ನಾಯಕರಾಗಿದ್ದು, ಅವರ ಉಪಸ್ಥಿತಿಯಿಂದಾಗಿಯೇ ಆ ಮೈದಾನ ಅಪವಿತ್ರಗೊಂಡಿದೆ ಎಂಬಂತೆ ಬಿಂಬಿಸಿ ಸಾರ್ವಜನಿಕವಾಗಿ ಅಪಮಾನ ಮಾಡುವ ಕುತಂತ್ರ ಇದರ ಹಿಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಷ್ಟೇ ಅಲ್ಲದೆ, ಈ ಅಸ್ಪೃಶ್ಯತೆ ಮತ್ತು ತಾರತಮ್ಯದ ಕೃತ್ಯವನ್ನು ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಸಮರ್ಥಿಸಿಕೊಳ್ಳುವ ಮೂಲಕ ಸಮಾಜದಲ್ಲಿ ದ್ವೇಷ ಹಾಗೂ ಜಾತಿ ತಾರತಮ್ಯವನ್ನು ಉತ್ತೇಜಿಸಿದ್ದಾರೆ ಎಂದು ದೂರಿನಲ್ಲಿ ಗಂಭೀರವಾಗಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಪ್ರಕರಣವು ಹಲ್ದ್ವಾನಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಮುಂದಿನ ತನಿಖೆಯನ್ನು ಅಲ್ಲಿನ ಪೊಲೀಸರು ಕೈಗೆತ್ತಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬೊಲಿವಿಯಾ ಸೇನಾ ಬ್ಯಾರಾಕ್ಸ್‌ನಲ್ಲಿ ಭೀಕರ ಸರಣಿ ಸ್ಪೋಟ: ಇಬ್ಬರು ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ!

Leave a Reply

Your email address will not be published. Required fields are marked *