TOP NEWS

Rain: ಮಹಾರಾಷ್ಟ್ರದ ಜಲಾಶಯಗಳು ಭರ್ತಿ: ಕೃಷ್ಣಾ ನದಿಗೆ ಹರಿದುಬಂತು ಭಾರಿ ನೀರು, ಬೆಳಗಾವಿ ಗಡಿಯಲ್ಲಿ ಪ್ರವಾಹದ ಭೀತಿ!

Maharashtra rain Dams Full Heavy Inflow Into Krishna River Sparks Flood Threat on Belagavi Border

ಚಿಕ್ಕೋಡಿ (ಬೆಳಗಾವಿ): ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅಲ್ಲಿನ ಪ್ರಮುಖ ಜಲಾಶಯಗಳು ಸಂಪೂರ್ಣ (Rain) ಭರ್ತಿಯಾಗಿವೆ. ಕೊಯ್ನಾ ಮತ್ತು ರಾಧಾನಗರಿ ಡ್ಯಾಂಗಳಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ಇದರ ಪರಿಣಾಮವಾಗಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೃಷ್ಣಾ ಹಾಗೂ ದೂಧಗಂಗಾ ನದಿಗಳು ಭೋರ್ಗರೆದು ಹರಿಯುತ್ತಿವೆ. ಸದ್ಯ ನದಿಗಳ ನೀರಿನ ಮಟ್ಟ ಅಪಾಯದ ಗೆರೆಯನ್ನು ತಲುಪಿದ್ದು, ನದೀತೀರದ ಜನರಲ್ಲಿ ಆತಂಕ ಮನೆಮಾಡಿದೆ.

ಲೋ ಲೆವೆಲ್ ಬ್ಯಾರೇಜ್‌ ಮುಳುಗಡೆಯಾಗುವ ಭೀತಿ

ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಸದ್ಯ 6,100 ಕ್ಯೂಸೆಕ್ ಹಾಗೂ ರಾಧಾನಗರಿ ಜಲಾಶಯದಿಂದ 2,800 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಮಳೆ ಬಿರುಸು ಪಡೆದುಕೊಂಡಿರುವುದರಿಂದ ಕೊಯ್ನಾ ಡ್ಯಾಂನಿಂದ ಹೊರಹರಿವಿನ ಪ್ರಮಾಣವನ್ನು ಯಾವ ಕ್ಷಣದಲ್ಲಾದರೂ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ಈ ನೀರಿನಿಂದಾಗಿ ಚಿಕ್ಕೋಡಿ ತಾಲೂಕಿನ ಮೂಲಕ ಹಾದುಹೋಗುವ ಕೃಷ್ಣಾ ನದಿಯ ಒಳಹರಿವು ಈಗ ಭರ್ಜರಿ 92 ಸಾವಿರ ಕ್ಯೂಸೆಕ್‌ಗೆ ತಲುಪಿದೆ. ಮಳೆಯ ಅಬ್ಬರ ಹೀಗೆಯೇ ಮುಂದುವರಿದರೆ ನಾಳೆಯ ವೇಳೆಗೆ ನೀರಿನ ಒಳಹರಿವು ಲಕ್ಷ ಕ್ಯೂಸೆಕ್ ದಾಟುವ ನಿರೀಕ್ಷೆಯಿದ್ದು, ಬೆಳಗಾವಿ ಜಿಲ್ಲೆಯ ಕೃಷ್ಣಾ ಹಾಗೂ ದೂಧಗಂಗಾ ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿರುವ ಹಲವು ಲೋ ಲೆವೆಲ್ ಬ್ಯಾರೇಜ್‌ಗಳು ಮುಳುಗಡೆಯಾಗುವ ಭೀತಿ ಎದುರಾಗಿದೆ.

ನರಸಿಂಹವಾಡಿಯ ಶ್ರೀ ದತ್ತ ಮಂದಿರ ಸಂಪೂರ್ಣ ಜಲಾವೃತ

ಇತ್ತ ಕೊಯ್ನಾ ಜಲಾಶಯದ ನೀರಿನ ಅಬ್ಬರಕ್ಕೆ ಪಂಚಗಂಗಾ ಮತ್ತು ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿದ್ದು, ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ನರಸಿಂಹವಾಡಿಯ ಶ್ರೀ ದತ್ತ ಮಂದಿರ ಸಂಪೂರ್ಣ ಜಲಾವೃತಗೊಂಡಿದೆ. ಕೃಷ್ಣಾ-ಪಂಚಗಂಗಾ ನದಿಗಳ ಪವಿತ್ರ ಸಂಗಮದಲ್ಲಿರುವ ಈ ಪುರಾತನ ದೇವಸ್ಥಾನದ ಗರ್ಭಗುಡಿಯವರೆಗೂ ನದಿ ನೀರು ನುಗ್ಗಿದೆ. ಮಂದಿರದ ಸುತ್ತಲೂ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ದತ್ತನ ದರ್ಶನಕ್ಕಾಗಿ ಬಂದಿರುವ ಭಕ್ತಾದಿಗಳು ಮೊಣಕಾಲುದ್ದ ನೀರಿನಲ್ಲೇ ನಿಂತು ದೇವರ ದರ್ಶನ ಪಡೆಯುತ್ತಿರುವ ದೃಶ್ಯಗಳು ಕಂಡುಬಂದಿವೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಗಡಿ ಭಾಗದ ಹಳ್ಳಿಗಳ ಜನರಿಗೆ ಮುಂಬರುವ ದಿನಗಳಲ್ಲಿ ಪ್ರವಾಹದ ಸಂಕಷ್ಟ ಎದುರಾಗುವ ಮುನ್ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಬಂದ್‌ನಿಂದ ಸಮಸ್ಯೆಗೆ ಪರಿಹಾರ ಸಿಗಲ್ಲ: ಭಾನುವಾರದ ಸರ್ವಪಕ್ಷ ಸಭೆಯವರೆಗೂ ತಮಿಳುನಾಡಿಗೆ ನೀರು ಬಿಡಲ್ಲ ಎಂದ ಡಿಕೆ ಶಿವಕುಮಾರ್

Leave a Reply

Your email address will not be published. Required fields are marked *