ಬೆಂಗಳೂರು: ರಾಜಕೀಯ ಜಂಜಾಟಗಳಿಂದ ಕೊಂಚ ಬ್ರೇಕ್ ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಬೆಳಗ್ಗೆ ಪಕ್ಕಾ ಶಾಪಿಂಗ್ ಮೂಡ್ನಲ್ಲಿ ಕಾಣಿಸಿಕೊಂಡರು. ದೆಹಲಿ ಪ್ರವಾಸ ಮುಗಿಸಿ ನಿನ್ನೆ ತಡರಾತ್ರಿಯಷ್ಟೇ ಬೆಂಗಳೂರಿಗೆ ಹಿಂತಿರುಗಿದ ಅವರು, ಇಂದು ಮುಂಜಾನೆ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಪ್ರಸಿದ್ಧ ಮಂತ್ರಿ ಮಾಲ್ಗೆ ದಿಢೀರ್ ಭೇಟಿ ನೀಡಿದರು. ಬೆಳಗಿನ ಜಾವದ ವಾಯು ವಿಹಾರಕ್ಕೆ (ಮಾರ್ನಿಂಗ್ ವಾಕ್) ಬೇಕಾದ ಟ್ರ್ಯಾಕ್ ಸೂಟ್ ಸೇರಿದಂತೆ ಕೆಲವು ಉಡುಪುಗಳನ್ನು ಖರೀದಿಸಲು ಅವರು ಮಾಲ್ಗೆ ಆಗಮಿಸಿದ್ದರು.
ಸೆಲ್ಫಿಗೆ ಪೋಸ್ ನೀಡಿದ ಮಾಜಿ ಸಿಎಂ
ಯಾವಾಗಲೂ ಬಿಗಿ ಭದ್ರತೆ ಹಾಗೂ ರಾಜಕೀಯ ಸಭೆ-ಸಮಾರಂಭಗಳಲ್ಲಿ ಬ್ಯುಸಿಯಾಗಿರುತ್ತಿದ್ದ ಸಿದ್ದರಾಮಯ್ಯ ಅವರನ್ನು ಯಾವುದೇ ಹಮ್ಮು-ಬಿಮ್ಮಿಲ್ಲದೆ ಮಾಲ್ನಲ್ಲಿ ಸಾಮಾನ್ಯರಂತೆ ಬಟ್ಟೆ ಆರಿಸುತ್ತಿದ್ದನ್ನು ಕಂಡು ಅಲ್ಲಿದ್ದ ಸಾರ್ವಜನಿಕರು ಆಶ್ಚರ್ಯಚಕಿತರಾದರು. ಮುಂಜಾನೆ ವೇಳೆ ಮಾಲ್ಗೆ ಬಂದಿದ್ದ ನೂರಾರು ಗ್ರಾಹಕರು ಹಾಗೂ ಸಾರ್ವಜನಿಕರು ಸಿದ್ದರಾಮಯ್ಯ ಅವರನ್ನು ಸುತ್ತುವರೆದರು. ನೆಚ್ಚಿನ ನಾಯಕನನ್ನು ಅನಿರೀಕ್ಷಿತವಾಗಿ ಹತ್ತಿರದಿಂದ ಕಂಡ ಜನರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಸಿದ್ದರಾಮಯ್ಯ ಅವರು ಕೂಡ ಯಾರಿಗೂ ನಿರಾಕರಿಸದೆ ನಗುಮುಖದಿಂದಲೇ ಎಲ್ಲರೊಂದಿಗೂ ಸೆಲ್ಫಿಗೆ ಫೋಸ್ ನೀಡಿ ಅಭಿಮಾನಿಗಳನ್ನು ಸಂಭ್ರಮಗೊಳಿಸಿದರು. ಸದ್ಯ ಮಾಜಿ ಸಿಎಂ ಅವರ ಈ ಸರಳ ಶಾಪಿಂಗ್ ವಿಡಿಯೋ ಹಾಗೂ ಫೋಟೋಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಮಹಾರಾಷ್ಟ್ರದ ಜಲಾಶಯಗಳು ಭರ್ತಿ: ಕೃಷ್ಣಾ ನದಿಗೆ ಹರಿದುಬಂತು ಭಾರಿ ನೀರು, ಬೆಳಗಾವಿ ಗಡಿಯಲ್ಲಿ ಪ್ರವಾಹದ ಭೀತಿ!
