ಚೆನ್ನೈ: ತಮಿಳು ಚಿತ್ರರಂಗದಲ್ಲಿ ದಶಕಗಳಿಗೂ ಹೆಚ್ಚು ಕಾಲ ಟಾಪ್ ನಟಿಯಾಗಿ ಮಿಂಚುತ್ತಿರುವ ತ್ರಿಷಾ ಕೃಷ್ಣನ್, (Trisha Krishnan) ರಾಜಕೀಯ ಮತ್ತು ಸಿನಿ ರಂಗದಲ್ಲಿ ಸದ್ಯ ತೀವ್ರ ಚರ್ಚೆಯಲ್ಲಿದ್ದಾರೆ. ನಟ ವಿಜಯ್ ಮತ್ತು ತ್ರಿಷಾ ನಡುವಿನ ರಿಲೇಶನ್‌ಶಿಪ್ ವದಂತಿಗಳು ಈಗಾಗಲೇ ಮಾಧ್ಯಮಗಳಲ್ಲಿ ಭಾರಿ ಆಕರ್ಷಣೆಯಾಗಿದ್ದು, ಇಬ್ಬರೂ ಈ ಬಗ್ಗೆ ಎಲ್ಲೂ ಬಹಿರಂಗವಾಗಿ ತುಟಿಬಿಚ್ಚದೆ ಮೌನ ಕಾಯ್ದುಕೊಂಡಿದ್ದಾರೆ. ಆದರೆ, ಇದೇ ಸಂಬಂಧದ ಹಿನ್ನೆಲೆಯಲ್ಲಿ ನಟಿ ತ್ರಿಷಾ ಇತ್ತೀಚೆಗೆ ತಮಗೆ ಬಂದಿದ್ದ ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆಯ ಬೃಹತ್ ಆಫರ್ ಒಂದನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ ಎಂಬ ವದಂತಿಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿವೆ.
ಉದಯನಿಧಿ ಆಫರ್ ರಿಜೆಕ್ಟ್ ಮಾಡಿದ ತ್ರಿಷಾ
ಲಬ್ಯವಿರುವ ಮಾಹಿತಿ ಪ್ರಕಾರ, ತಮಿಳುನಾಡಿನ ಪ್ರಮುಖ ನಟ, ನಿರ್ಮಾಪಕ ಹಾಗೂ ಹಾಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಉದಯನಿಧಿ ಸ್ಟಾಲಿನ್ ತಮ್ಮ ‘ರೆಡ್ ಜೈಂಟ್’ ಬ್ಯಾನರ್ ಅಡಿಯಲ್ಲಿ ಬಿಗ್ ಬಜೆಟ್ ಚಿತ್ರವೊಂದನ್ನು ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ. ನೆಲ್ಸನ್ ನಿರ್ದೇಶನದ ಈ ಮೆಗಾ ಪ್ರಾಜೆಕ್ಟ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಟ್ಟಿಗೆ ನಟಿಸಲಿದ್ದು, ಈ ಚಿತ್ರದ ನಾಯಕಿಯ ಪಾತ್ರಕ್ಕಾಗಿ ಮೊದಲು ತ್ರಿಷಾ ಅವರನ್ನು ಸಂಪರ್ಕಿಸಲಾಗಿತ್ತು. ಚಿತ್ರತಂಡವು ಅವರಿಗೆ 12 ಕೋಟಿ ರೂ. ಭಾರಿ ಸಂಭಾವನೆಯ ಆಫರ್ ನೀಡಿ ಮಾತುಕತೆಯನ್ನೂ ನಡೆಸಿತ್ತು. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕಾರಣದಿಂದ ತ್ರಿಷಾ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.
ವಿಜಯ್‌ಗಾಗಿ ಈ ನಿರ್ಧಾರ ಮಾಡಿದ್ರಾ ನಟಿ?
ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಜವಾಬ್ದಾರಿ ವಹಿಸಿಕೊಂಡ ನಂತರ, ಅವರ ರಾಜಕೀಯ ವಿರೋಧಿಯಾಗಿರುವ ಉದಯನಿಧಿ ಸ್ಟಾಲಿನ್ ಅವರ ಬ್ಯಾನರ್‌ನಲ್ಲಿ ನಟಿಸುವುದು ಸರಿಯಲ್ಲ ಎಂದು ಭಾವಿಸಿ ತ್ರಿಷಾ ಈ ತೀರ್ಮಾನ ಕೈಗೊಂಡಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವರದಿ ಭಾರಿ ವೈರಲ್ ಆಗುತ್ತಿದೆಯಾದರೂ, ನಟಿ ತ್ರಿಷಾ ಅಥವಾ ಉದಯನಿಧಿ ಸ್ಟಾಲಿನ್ ಈ ಬಗ್ಗೆ ಅಧಿಕೃತ ಸ್ಪಷ್ಟನೆ ನೀಡುವವರೆಗೆ ಇವೆಲ್ಲಾ ಕೇವಲ ಊಹಾಪೋಹಗಳಾಗಿಯೇ ಉಳಿಯಲಿವೆ.
ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ತ್ರಿಷಾ ಪ್ರಸ್ತುತ ಕಾಲಿವುಡ್‌ನ ‘ಲಕ್ಕಿ ಚಾರ್ಮ್’ ಆಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ ‘ಕರುಪ್ಪು’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಚಿತ್ರಕ್ಕಾಗಿ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಅವರು ನಟಿಸಿದ್ದ ಲಿಯೋ, ಪೊನ್ನಿಯಿನ್ ಸೆಲ್ವನ್ ಹಾಗೂ ಗುಡ್ ಬ್ಯಾಡ್ ಅಗ್ಲಿ ಚಿತ್ರಗಳು ಸಾಲು ಸಾಲು ಯಶಸ್ಸು ಕಂಡಿವೆ. ಸದ್ಯ ಅವರ ಕೈಯಲ್ಲಿ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಿದ್ದು, ಅಜಿತ್ ಜೊತೆ ‘ವಿದಾಮುಯಾರ್ಚಿ’, ಕಮಲ್ ಹಾಸನ್ ಜೊತೆ ‘ಥಗ್ ಲೈಫ್’, ಸೂರ್ಯ ಜೊತೆ ‘ಕರುಪ್ಪು’, ಚಿರಂಜೀವಿ ಜೊತೆ ತೆಲುಗಿನ ‘ವಿಶ್ವಂಭರ’ ಹಾಗೂ ಮೋಹನ್ ಲಾಲ್ ಜೊತೆ ಮಲಯಾಳಂನ ‘ರಾಮ್’ ಚಿತ್ರಗಳಲ್ಲಿ ತ್ರಿಷಾ ಬ್ಯುಸಿಯಾಗಿದ್ದಾರೆ.
ರಜನಿ-ಕಮಲ್ ಮೆಗಾ ಮೂವಿಗೆ ನಾಯಕಿ ಫಿಕ್ಸ್: ‘ದಳಪತಿ’ಯ ಗಿಲ್ಲಿ ಬೆಡಗಿ ತ್ರಿಶಾಗೆ ಲಕ್ಕಿ ಚಾನ್ಸ್!
ಕಾಲಿವುಡ್‌ನ ಇಬ್ಬರು ದಿಗ್ಗಜ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ದಶಕಗಳ ನಂತರ ಒಂದಾಗುತ್ತಿರುವ ‘KHxRK’ ಚಿತ್ರದ ಬಗ್ಗೆ ದಿನಕ್ಕೊಂದು ರೋಚಕ ಸುದ್ದಿಗಳು ಹೊರಬರುತ್ತಿವೆ. ಈಗ ಈ ಬೃಹತ್ ಸಿನಿಮಾಗೆ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ತ್ರಿಶಾ ಕೃಷ್ಣನ್ (Trisha Krishnan) ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ.
ತಾರಾಬಳಗಕ್ಕೆ ತ್ರಿಶಾ ಎಂಟ್ರಿ
ಸುಮಾರು ಎರಡು ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ತ್ರಿಶಾ, ಈ ಚಿತ್ರದಲ್ಲಿ ಮಹತ್ವದ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಸೂಪರ್‌ಸ್ಟಾರ್‌ಗಳ ಜೊತೆ ನಟಿಸಲು ತ್ರಿಶಾ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ಅವರಿಗೆ ಚಿತ್ರತಂಡ ಭಾರಿ ಮೊತ್ತದ ಸಂಭಾವನೆಯನ್ನು ನೀಡುತ್ತಿದೆ ಎನ್ನಲಾಗಿದೆ. ವಿಜಯ್ ಅವರ ‘ಗಿಲ್ಲಿ’ ಮತ್ತು ಇತ್ತೀಚಿನ ‘ಲಿಯೋ’ ನಂತರ ತ್ರಿಶಾ ಪಾಲಿಗೆ ಇದು ಮತ್ತೊಂದು ಸ್ಮರಣೀಯ ಸಿನಿಮಾವಾಗಲಿದೆ.
ದಿಗ್ಗಜರ ಜೊತೆ ಮತ್ತೆ ಸ್ಕ್ರೀನ್ ಶೇರ್
ತ್ರಿಶಾ ಈಗಾಗಲೇ ಕಮಲ್ ಹಾಸನ್ ಅವರ ಜೊತೆ ‘ಮನ್ಮದನ್ ಅಂಬು’ ಹಾಗೂ ‘ಥಗ್ ಲೈಫ್’ ಅಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಾಗೆಯೇ ರಜನಿಕಾಂತ್ ಅವರೊಂದಿಗೆ ‘ಪೇಟ್ಟಾ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಇದೇ ಮೊದಲ ಬಾರಿಗೆ ಈ ಇಬ್ಬರೂ ಮಾಸ್ ಹೀರೊಗಳಿರುವ ಒಂದೇ ಸಿನಿಮಾದಲ್ಲಿ ತ್ರಿಶಾ ಮಿಂಚುತ್ತಿರುವುದು ವಿಶೇಷ.
1000 ಕೋಟಿ ಕ್ಲಬ್ ಮೇಲೆ ಕಣ್ಣು
ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತದ ಬಲವಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟೀಸರ್‌ನಲ್ಲಿ ರಜನಿ ಮತ್ತು ಕಮಲ್ ಅವರ ರೆಟ್ರೋ ಸ್ಟೈಲ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾ ವಿಶ್ಲೇಷಕರ ಪ್ರಕಾರ, ಈ ಚಿತ್ರವು ತಮಿಳು ಚಿತ್ರರಂಗದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುವ ಮೊದಲ ಸಿನಿಮಾ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.
ಸದ್ಯ ತ್ರಿಶಾ ಅವರು ಸೂರ್ಯ ನಟನೆಯ ‘ಕರುಪ್ಪು’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ನೆಲ್ಸನ್ ಅವರ ಈ ಬಿಗ್ ಪ್ರಾಜೆಕ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಮೂಲಕ ಕಾಲಿವುಡ್ ಇತಿಹಾಸದ ಶ್ರೇಷ್ಠ ಕಾಂಬಿನೇಷನ್ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ದಳಪತಿ ಬಗ್ಗೆ ತ್ರಿಶಾಗೆ ಅಭಿಮಾನಿಗಳ ಪ್ರಶ್ನೆ, ನಾಚಿ ನೀರಾದ ನಟಿ
