TOP NEWS

Actor Yash: ರಶ್ಮಿಕಾ ಮಂದಣ್ಣ ‘ಶೋ ಆಫ್’ ಹೇಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ

Actor yash Breaks Silence On Rashmika Mandanna Old Mr Showoff Comment

ಬೆಂಗಳೂರು: ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಇಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಖತ್ ಸೌಂಡು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ, ತಮ್ಮ ವೃತ್ತಿಜೀವನದ ಆರಂಭದಲ್ಲಿ ನೀಡಿದ್ದ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. 2017ರ ಸಂದರ್ಶನವೊಂದರಲ್ಲಿ ರಶ್ಮಿಕಾ, ಸ್ಯಾಂಡಲ್‌ವುಡ್‌ನ ‘ಮಿಸ್ಟರ್ ಶೋ ಆಫ್’ ಯಾರು ಎಂಬ ಪ್ರಶ್ನೆಗೆ ಕೆಜಿಎಫ್ ನಟ ಯಶ್ (Actor Yash) ಅವರ ಹೆಸರನ್ನು ಹೇಳಿದ್ದರು. ಈ ಹೇಳಿಕೆ ಆ ಸಮಯದಲ್ಲಿ ರಶ್ಮಿಕಾ ಅವರಿಗೆ ಯಶ್ ಅಭಿಮಾನಿಗಳಿಂದ ತೀವ್ರ ತರಾಟೆಗೆ ಒಳಗಾಗುವಂತೆ ಮಾಡಿತ್ತು. ಆ ಬಳಿಕ ರಶ್ಮಿಕಾ ಕ್ಷಮೆಯಾಚಿಸಿ ಸ್ಪಷ್ಟನೆ ಕೂಡ ನೀಡಿದ್ದರು.

ಅದು ಅವರ ಅಭಿಪ್ರಾಯ ಎಂದ ಯಶ್

ಇದೀಗ ಹಲವು ವರ್ಷಗಳ ನಂತರ, ಖ್ಯಾತ ನಿರೂಪಕ ರಜತ್ ಶರ್ಮಾ ಅವರ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಕಿಂಗ್ ಸ್ಟಾರ್ ಯಶ್ ಈ ಕುರಿತು ಪ್ರಬುದ್ಧವಾಗಿ ಪ್ರತಿಕ್ರಿಯಿಸಿದ್ದಾರೆ. “ಆ ಸಮಯದಲ್ಲಿ ರಶ್ಮಿಕಾ ಯಾವ ಅರ್ಥದಲ್ಲಿ ಆ ರೀತಿ ಹೇಳಿದರು ಎಂಬುದು ನನಗೆ ತಿಳಿಯದು. ಅವರು ಚಿತ್ರರಂಗಕ್ಕೆ ಹೊಸಬರಾಗಿದ್ದರು. ಕೆಲವೊಮ್ಮೆ ಟಿವಿ ಶೋಗಳಲ್ಲಿ ಮೂರ್ನಾಲ್ಕು ಆಯ್ಕೆಗಳನ್ನು ನೀಡಿದಾಗ, ಅವರು ಅದನ್ನೇ ಆಯ್ಕೆ ಮಾಡಿರಬಹುದು. ಈ ಹೇಳಿಕೆಯಿಂದ ಹಲವು ನಿರ್ದೇಶಕರಿಗೆ ಕೋಪ ಬಂದಿತ್ತು. ಆದರೆ ನನಗೆ ವೈಯಕ್ತಿಕವಾಗಿ ಅದು ಸರಿ ಎನಿಸಿತು. ಏಕೆಂದರೆ ಅದು ಅವರ ಅಭಿಪ್ರಾಯ. ಬೇರೆಯವರ ಅಭಿಪ್ರಾಯ ನನ್ನ ನೈಜ ವ್ಯಕ್ತಿತ್ವವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಏನಾಗಿದ್ದೇನೆಯೋ ಅದೇ ಆಗಿರುತ್ತೇನೆ” ಎಂದು ಯಶ್ ಅತ್ಯಂತ ಮುಕ್ತವಾಗಿ ಹೇಳಿದ್ದಾರೆ. ಇದೇ ವೇಳೆ ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಯಶ್, “ನೀವು ಇನ್ನೊಬ್ಬ ನಟನಿಗೆ ಗೌರವ ನೀಡದಿದ್ದರೆ, ನೀವು ನನ್ನ ನಿಜವಾದ ಅಭಿಮಾನಿಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.‌

ಆಗಸ್ಟ್‌ 26ಕ್ಕೆ ರಿಲೀಸ್‌ ಆಗ್ತಿದೆ ಟಾಕ್ಸಿಕ್

ಇನ್ನು ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾಗಳ ವಿಷಯಕ್ಕೆ ಬಂದರೆ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಬಿಡುಗಡೆಗೆ ಅವರು ಸಜ್ಜಾಗುತ್ತಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಕುರೇಷಿ, రుಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ನಟಿಸಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದ್ದು, ಒಟ್ಟು 3 ಗಂಟೆ 14 ನಿಮಿಷಗಳ ಸುದೀರ್ಘ ಚಾಲನಾ ಸಮಯವನ್ನು ಹೊಂದಿದೆ. ಸ್ವಾತಂತ್ರ್ಯೋತ್ತರ ಗೋವಾದ ಹಿನ್ನೆಲೆಯಲ್ಲಿ ಗ್ಯಾಂಗ್‌ಸ್ಟರ್ ಕಥೆಯನ್ನು ಹೊಂದಿರುವ ಈ ಚಿತ್ರದ ಟ್ರೇಲರ್‌ನಲ್ಲಿನ ಕೆಲವು ರೋಮ್ಯಾಂಟಿಕ್ ದೃಶ್ಯಗಳ ಕುರಿತು ವ್ಯಕ್ತವಾದ ಟೀಕೆಗಳಿಗೆ ಉತ್ತರಿಸಿದ ಯಶ್, “ಸಿನಿಮಾದಲ್ಲಿ ಅಶ್ಲೀಲತೆ ಇರಬಾರದು. ನಾನು ಕನಿಷ್ಠ ಲಿಪ್‌ಲಾಕ್ ದೃಶ್ಯದಲ್ಲೂ ನಟಿಸಿಲ್ಲ ಎಂಬುದನ್ನು ನೀವು ಗಮನಿಸಬಹುದು. ದೃಶ್ಯಗಳನ್ನು ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ, ‘ಟಾಕ್ಸಿಕ್’ ಸಿನಿಮಾ ಇಂದಿನ ಜೆನ್ ಜೀ (Gen Z) ಯುವಜನತೆಗಾಗಿ ಮಾಡಲ್ಪಟ್ಟಿದೆ” ಎಂದಿದ್ದಾರೆ. ಇದರ ಜೊತೆಗೆ ನಿತೀಶ್ ತಿವಾರಿ ನಿರ್ದೇಶನದ ಬೃಹತ್ ‘ರಾಮಾಯಣ’ ಚಿತ್ರದಲ್ಲೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಲುಕ್ ಈಗಾಗಲೇ ಪ್ರೇಕ್ಷಕರಲ್ಲಿ ದೊಡ್ಡ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: 2 ವರ್ಷಗಳ ಕಾಲ ನಾರ್ಸಿಸಿಸ್ಟಿಕ್ ಕಿರುಕುಳ ಅನುಭವಿಸಿದೆ: ಮಾಜಿ ಪ್ರೇಮಿಯ ಕರಾಳ ಮುಖ ಬಿಚ್ಚಿಟ್ಟ ನಟಿ ಅನುಪಮಾ ಪರಮೇಶ್ವರನ್!

Leave a Reply

Your email address will not be published. Required fields are marked *