ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (KIA) ತನ್ನ ಆರಂಭದಿಂದ ಇದುವರೆಗೆ ಬರೋಬ್ಬರಿ 400 ಮಿಲಿಯನ್ (40 ಕೋಟಿ) ಪ್ರಯಾಣಿಕರ ಸಂಚಾರದ ಐತಿಹಾಸಿಕ ಮೈಲಿಗಲ್ಲನ್ನು ದಾಟಿದೆ. ಕಳೆದ 2025-26ರ ಹಣಕಾಸು ವರ್ಷದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಣೆಯಲ್ಲಿ (ಕಾರ್ಗೋ) ಭಾರಿ ಪ್ರಗತಿ ಕಂಡುಬಂದಿದ್ದು, ವಿಮಾನ ನಿಲ್ದಾಣವು ಪ್ರಸ್ತುತ ದೊಡ್ಡ ಮಟ್ಟದ ಬೆಳವಣಿಗೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಸಂಸ್ಥೆಯ 134ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ವರ್ಷದ ಪ್ರಮುಖ ಕಾರ್ಯಾಚರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಪರಾಮರ್ಶೆ ನಡೆಸಲಾಗಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ
ಕಳೆದ ಹಣಕಾಸು ವರ್ಷದಲ್ಲಿ ಈ ವಿಮಾನ ನಿಲ್ದಾಣವು ಒಟ್ಟು 44.47 ಮಿಲಿಯನ್ (4.44 ಕೋಟಿಗೂ ಹೆಚ್ಚು) ಪ್ರಯಾಣಿಕರ ಸಂಚಾರವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಶೇಕಡಾ 6.2 ರಷ್ಟು ವಾರ್ಷಿಕ ಪ್ರಗತಿಯನ್ನು ತೋರಿಸುತ್ತದೆ. ಅದರಲ್ಲೂ ವಿಶೇಷವಾಗಿ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯು ಶೇಕಡಾ 23.9 ರಷ್ಟು ಭಾರಿ ಏರಿಕೆ ಕಂಡು 7.23 ಮಿಲಿಯನ್ಗೆ ತಲುಪಿದೆ. ಇನ್ನು ದೇಶೀಯ ಪ್ರಯಾಣಿಕರ ಸಂಖ್ಯೆಯು ಶೇಕಡಾ 3.3 ರಷ್ಟು ಹೆಚ್ಚಳದೊಂದಿಗೆ 37.24 ಮಿಲಿಯನ್ ತಲುಪಿದೆ. ಪ್ರಸ್ತುತ ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶದ 78 ಕ್ಕೂ ಹೆಚ್ಚು ಮತ್ತು ವಿದೇಶಗಳ 34 ಕ್ಕೂ ಹೆಚ್ಚು ನಗರಗಳಿಗೆ ನೇರ ವಿಮಾನ ಸಂಪರ್ಕವಿದ್ದು, ಇದು ದಕ್ಷಿಣ ಭಾರತದ ಪ್ರಮುಖ ವಾಯುಯಾನ ಹಬ್ ಆಗಿ ಹೊರಹೊಮ್ಮಿದೆ. ವಿಮಾನಗಳ ಸಂಚಾರದಲ್ಲೂ ಶೇಕಡಾ 4.5 ರಷ್ಟು ಹೆಚ್ಚಳವಾಗಿದ್ದು, ವರ್ಷದಲ್ಲಿ ಒಟ್ಟು 2,80,800 ವಿಮಾನಗಳು ಇಲ್ಲಿಂದ ಓಡಾಡಿವೆ. ನಿಲ್ದಾಣದಲ್ಲಿ ಪ್ರತಿದಿನ ಸರಾಸರಿ 769 ವಿಮಾನಗಳ ಓಡಾಟವಿದ್ದು, ಗರಿಷ್ಠವಾಗಿ ಒಂದೇ ದಿನದಲ್ಲಿ 837 ವಿಮಾನಗಳು ಹಾಗೂ 1.39 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಿದ ಹೊಸ ದಾಖಲೆಯೂ ನಿರ್ಮಾಣವಾಗಿದೆ.
ಪ್ರಯಾಣಿಕರ ಸಂಚಾರ ಮಾತ್ರವಲ್ಲದೆ, ಸರಕು ಸಾಗಣೆಯಲ್ಲೂ (ಕಾರ್ಗೋ) ಬೆಂಗಳೂರು ಏರ್ಪೋರ್ಟ್ ಶೇಕಡಾ 6 ರಷ್ಟು ಪ್ರಗತಿ ಸಾಧಿಸಿದ್ದು, ಒಟ್ಟು 5.32 lakh (5,32,000) ಮೆಟ್ರಿಕ್ ಟನ್ ಸರಕನ್ನು ನಿರ್ವಹಿಸಿದೆ. ಪ್ರಸ್ತುತ 15 ಕಾರ್ಗೋ ವಿಮಾನಯಾನ ಸಂಸ್ಥೆಗಳು ಇಲ್ಲಿಂದ 38 ಜಾಗತಿಕ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಬೆಂಗಳೂರನ್ನು ಚಿಕಾಗೋ, ಸಿಂಗಾಪುರ, ಲಂಡನ್, ಫ್ರಾಂಕ್ಫರ್ಟ್ ಮತ್ತು ಹಾಂಗ್ ಕಾಂಗ್ನಂತಹ ಪ್ರಮುಖ ಜಾಗತಿಕ ಹಬ್ಗಳಿಗೆ ಜೋಡಿಸಿವೆ. ಔಷಧಗಳು, ಎಲೆಕ್ಟ್ರಾನಿಕ್ಸ್, ಆಟೋ ಬಿಡಿಭಾಗಗಳು ಮತ್ತು ಇ-ಕಾಮರ್ಸ್ ಜೊತೆಗೆ ಬೇಗನೆ ಹಾಳಾಗುವ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ರಫ್ತು ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ದೇಶದಲ್ಲೇ ಅತಿ ಹೆಚ್ಚು ಪೆರಿಷಬಲ್ಸ್ ಅಂದರೆ ತರಕಾರಿ, ಹಣ್ಣು, ಹೂವುಗಳನ್ನು ವಿದೇಶಕ್ಕೆ ರಫ್ತು ಮಾಡುವ ನಂಬರ್ ಒನ್ ವಿಮಾನ ನಿಲ್ದಾಣ ಎಂಬ ಸ್ಥಾನವನ್ನು ಬೆಂಗಳೂರು ಸತತ ಐದನೇ ವರ್ಷವೂ ಕಾಯ್ದುಕೊಂಡಿದೆ. ಕಳೆದ ವರ್ಷದಲ್ಲಿ ಇಲ್ಲಿಂದ ಸುಮಾರು 6 ಕೋಟಿ ಗುಲಾಬಿ ಹೂವಿನ ಕಡ್ಡಿಗಳನ್ನು ವಿದೇಶಕ್ಕೆ ಕಳುಹಿಸಲಾಗಿದ್ದು, ಇದರ ರಫ್ತು ಪ್ರಮಾಣದಲ್ಲಿ ಶೇಕಡಾ 38 ರಷ್ಟು ಏರಿಕೆಯಾಗಿದೆ. ಇನ್ನು ಮಾವಿನ ಹಣ್ಣಿನ ರಫ್ತು ಶೇಕಡಾ 12 ರಷ್ಟು ಹಾಗೂ ಕೊತ್ತಂಬರಿ ಸೊಪ್ಪಿನ ರಫ್ತು ಶೇಕಡಾ 13 ರಷ್ಟು ಹೆಚ್ಚಳ ಕಂಡಿದೆ.
ಅನೇಕ ಪ್ರಶಸ್ತಿ ಪಡೆದುಕೊಂಡಿರುವ ವಿಮಾನ ನಿಲ್ದಾಣ
ಇದೇ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ಹಲವಾರು ಜಾಗತಿಕ ಪ್ರಶಸ್ತಿ ಮತ್ತು ಮನ್ನಣೆಗಳನ್ನು ಮುಡಿಗೇರಿಸಿಕೊಂಡಿದೆ. ಸ್ಕೈಟ್ರಾಕ್ಸ್ (Skytrax) ಸಂಸ್ಥೆಯು ಇದನ್ನು ಭಾರತ ಮತ್ತು ದಕ್ಷಿಣ ಏಷ್ಯಾದ ‘ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂದು ಗೌರವಿಸಿದೆ. ಹಾಗೆಯೇ ಎಸಿಐ ಎಎಸ್ಕ್ಯು (ACI ASQ) ಪ್ರಶಸ್ತಿಗಳಲ್ಲಿ ಜಾಗತಿಕ ಮಟ್ಟದ ‘ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ಸ್ಕೈಟ್ರಾಕ್ಸ್ನ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಶ್ರೇಯಾಂಕದಲ್ಲಿ ಬೆಂಗಳೂರು ಏರ್ಪೋರ್ಟ್ 48ನೇ ಸ್ಥಾನದಿಂದ 41ನೇ ಸ್ಥಾನಕ್ಕೆ ಜಿಗಿದು ಭಾರಿ ಸಾಧನೆ ಮಾಡಿದೆ. ಪ್ರಯಾಣಿಕರ ಸೌಕರ್ಯ, ಸುರಕ್ಷತೆ ಹಾಗೂ ದೀರ್ಘಕಾಲೀನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ಮೂಲಸೌಕರ್ಯ ಮತ್ತು ಸಾಮರ್ಥ್ಯ ವಿಸ್ತರಣಾ ಯೋಜನೆಗಳ ಬಗ್ಗೆಯೂ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಮುಂದುವರಿದ ಅಭಿವೃದ್ಧಿ ಕಾರ್ಯಗಳು ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ವಾಯುಯಾನ ಮತ್ತು ಲಾಜಿಸ್ಟಿಕ್ಸ್ ಶಕ್ತಿಯನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೃಷಿ ವಿಜ್ಞಾನ ಪರೀಕ್ಷಾ ಅಕ್ರಮದ ಸುದ್ದಿ ನಕಲಿ: ಕೆಇಎ ಅಧಿಕೃತ ಸ್ಪಷ್ಟನೆ
