ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ ರವಿ ಮೋಹನ್ (Jayam Ravi) ) ಹಾಗೂ ಅವರ ಪತ್ನಿ ಆರತಿ ನಡುವಿನ ವಿಚ್ಛೇದನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗ ಇಡೀ ವಿವಾದ ಭಾರಿ ಸ್ಫೋಟಕ ರೂಪ ಪಡೆದುಕೊಂಡಿದೆ. ತಮ್ಮ ಆಪ್ತ ಗೆಳತಿ, ಗಾಯಕಿ ಹಾಗೂ ಆಧ್ಯಾತ್ಮಿಕ ಚಿಕಿತ್ಸಕಿ ಕೆನೀಶಾ ಫ್ರಾನ್ಸಿಸ್ ಅವರು ತೀವ್ರ ಸೈಬರ್ ಬುಲ್ಲಿಂಗ್ ಅಂದರೆ ಸಾಮಾಜಿಕ ಜಾಲತಾಣಗಳ ಕಿರುಕುಳಕ್ಕೆ ಬೇಸತ್ತು ಚೆನ್ನೈ ನಗರ ಮತ್ತು ತಮ್ಮ ವೃತ್ತಿಜೀವನವನ್ನೇ ತೊರೆದು ಹೋಗಿರುವುದಾಗಿ ಪ್ರಕಟಿಸಿದ ಬೆನ್ನಲ್ಲೇ, ನಟ ರವಿ ಮೋಹನ್ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಜಾಲತಾಣಗಳಲ್ಲಿ ವಿನಾಕಾರಣ ನಿಂದಿಸುವವರ ವಿರುದ್ಧ ತೀವ್ರವಾಗಿ ಕಿಡಿಕಾರಿದ ಅವರು, ಪತ್ನಿ ಆರ್ತಿ ಅವರೊಂದಿಗಿನ ವಿಚ್ಛೇದನ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೂ ತಾನು ಇನ್ಮುಂದೆ ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಕಣ್ಣೀರು ಹಾಕುತ್ತಾ ಘೋಷಿಸಿದ್ದಾರೆ.
ನನ್ನ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ರವಿ ಮೋಹನ್, ಇಷ್ಟು ದಿನಗಳ ಕಾಲ ತಾವು ತಾಳ್ಮೆಯಿಂದ ಸುಮ್ಮನಿದ್ದನ್ನೇ ಬಂಡವಾಳ ಮಾಡಿಕೊಂಡು ಕೆಲವರು ತಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಾಧು ಮಿರಂಡಾ ಕಾಡು ಕೊಳ್ಳಾದು ಎಂಬ ತಮಿಳು ಗಾದೆಯನ್ನು ನೆನಪಿಸಿದ ಅವರು, ಸಾದು ಸ್ವಭಾವದವನು ಮುನಿಸಿಕೊಂಡರೆ ಜಗತ್ತೇ ತಾಳಲಾರದು, ಧೈರ್ಯವಿದ್ದರೆ ನನ್ನನ್ನು ನೇರವಾಗಿ ಎದುರಿಸಿ ಎಂದು ಸವಾಲು ಹಾಕಿದರು.
VIDEO | Chennai, Tamil Nadu: "I will not act in films until my divorce is sorted," says Actor Ravi Mohan, as he turns emotional during press meet.
— Press Trust of India (@PTI_News) May 16, 2026
(Full video available on PTI Videos – https://t.co/n147TvrpG7) pic.twitter.com/4YvlI2l3EO
ತಮ್ಮ ವೈವಾಹಿಕ ಜೀವನದ ಕರಾಳ ದಿನಗಳನ್ನು ನೆನಪಿಸಿಕೊಂಡ ಅವರು, ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ಈಗ ಭಾರಿ ಬೆಲೆ ತೆರುತ್ತಿದ್ದೇನೆ ಎಂದು ಆಘಾತಕಾರಿ ವಿಷಯಗಳನ್ನು ಹಂಚಿಕೊಂಡರು. ಒಂದು ಹಂತದಲ್ಲಿ ತೀವ್ರ ಮಾನಸಿಕ ನೊಂದಿದ್ದ ತಾವು ಕೈ ಮಣಿಕಟ್ಟನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರೂ, ಮರುದಿನವೇ ಚಿತ್ರೀಕರಣಕ್ಕೆ ಹಾಜರಾಗಿ ವೃತ್ತಿಬದ್ಧತೆ ಮೆರೆದಿದ್ದಾಗಿ ಬಹಿರಂಗಪಡಿಸಿದರು. ಇಷ್ಟೇ ಅಲ್ಲದೆ, ಪ್ರಸ್ತುತ ತಮ್ಮ ಇಬ್ಬರು ಗಂಡು ಮಕ್ಕಳನ್ನು ಭೇಟಿಯಾಗಲು ಬಿಡುತ್ತಿಲ್ಲ ಮತ್ತು ಪುಟ್ಟ ಮಕ್ಕಳ ಸುತ್ತ ಬಾಡಿಗಾರ್ಡ್ಗಳನ್ನು ಇರಿಸಿ ತಮ್ಮಿಂದ ದೂರ ಇಡಲಾಗುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಮಹಿಳಾವಾದದ ಹೆಸರಿನಲ್ಲಿ ಕೆಲವರು ಕಾನೂನಿನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಮೂರು ಅಕ್ಷರದ ಹೆಸರಿನ ಪ್ರಸಿದ್ಧ ನಟಿಯೊಬ್ಬರ ಸಂಸಾರ ಒಡೆಯುವ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದರು.
ರವಿ ಮೋಹನ್ ಸಂಸಾರ ಒಡೆಯಲು ಕಾರಣ ನಾನಲ್ಲ ಎಂದ ಪ್ರೇಯಸಿ
ಮತ್ತೊಂದೆಡೆ, ಶುಕ್ರವಾರವಷ್ಟೇ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪತ್ರ ಬರೆದಿದ್ದ ಕೆನೀಶಾ ಫ್ರಾನ್ಸಿಸ್, ತಾವು ಈ ಇಡೀ ವಿವಾದದಿಂದ ಸಂಪೂರ್ಣವಾಗಿ ದೂರ ಸರಿಯುತ್ತಿರುವುದಾಗಿ ತಿಳಿಸಿದ್ದರು. ಅಹಂಕಾರ, ತಪ್ಪು ತೀರ್ಪುಗಳು ಮತ್ತು ಸುಳ್ಳು ಕಥೆಗಳಿಂದ ತುಂಬಿರುವ ಈ ಜಾಗದಲ್ಲಿ ಒಳ್ಳೆಯತನಕ್ಕೆ ಬೆಲೆ ಇಲ್ಲದಂತಾಗಿದೆ. ಜಾಲತಾಣಗಳ ಕ್ರೂರ ಕಿರುಕುಳ ಹಾಗೂ ಕುತಂತ್ರಗಳಿಗೆ ಬೇಸತ್ತು ನಾನು ಚೆನ್ನೈ ನಗರವನ್ನು ತೊರೆದಿದ್ದೇನೆ ಮತ್ತು ನನ್ನ ಸಂಗೀತ ಹಾಗೂ ಥೆರಪಿ ವೃತ್ತಿಯನ್ನು ಇಲ್ಲಿಗೇ ನಿಲ್ಲಿಸುತ್ತಿದ್ದೇನೆ ಎಂದು ಅವರು ಘೋಷಿಸಿದ್ದರು. ರವಿ ಮೋಹನ್ ಅವರ ಸಂಸಾರ ಒಡೆಯಲು ತಾವು ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದ ಕೆನೀಶಾ, ರವಿ ಅವರು ಮಾನಸಿಕ ನೆಮ್ಮದಿಗಾಗಿ ಕೌನ್ಸಿಲರ್ ಆಗಿದ್ದ ತಮ್ಮನ್ನು ಸಂಪರ್ಕಿಸಿದ್ದರು ಮತ್ತು ಒಬ್ಬ ಒಳ್ಳೆಯ ಮನುಷ್ಯನನ್ನು ರಕ್ಷಿಸಲು ಹೋಗಿ ತಾವು ತೀವ್ರ ಅವಮಾನ ಎದುರಿಸಬೇಕಾಯಿತು ಎಂದು ಕಣ್ಣೀರು ಹಾಕಿದ್ದರು. ಈ ಬೆಳವಣಿಗೆಗಳ ನಂತರ ರವಿ ಮೋಹನ್ ಅವರು ಮಾಧ್ಯಮಗಳ ಮುಂದೆ ಬಂದು ಕೆನೀಶಾ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಲ್ಲದೆ, ತಮ್ಮ ಇಬ್ಬರು ಮಕ್ಕಳಿಗಾಗಿ ಸಂಸಾರ ಉಳಿಸಲು ಕೊನೆ ತನಕ ಹೋರಾಡಿದ್ದಾಗಿ ಮತ್ತು ಇನ್ನು ಮುಂದೆ ನ್ಯಾಯಾಲಯದಲ್ಲೇ ಎಲ್ಲವನ್ನೂ ತೀರ್ಮಾನಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ ಸರ್ವರ್ ಕ್ರಾಶ್ ಮಾಡಿದ ‘ಧುರಂಧರ್ 2’: ಪಾಕಿಸ್ತಾನದಲ್ಲೂ ನಂಬರ್ ಒನ್ ಟ್ರೆಂಡಿಂಗ್!
