TOP NEWS

Yash: ಕೆಬಿಸಿ 18ರಲ್ಲೂ ಮೊಳಗಿತು ಕನ್ನಡಿಗ ಯಶ್ ಹೆಸರು: ಅಮಿತಾಭ್ ಬಚ್ಚನ್ ಕೇಳಿದ ಆ 20 ಸಾವಿರದ ಪ್ರಶ್ನೆಗೆ ನೆಟ್ಟಿಗರು ಫಿದಾ!

KBC 18 From Rajinikanth to Yash Amitabh Bachchan Question on South Superstars Goes Viral

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಿರೂಪಣೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ಯ (KBC 18) 18ನೇ ಸೀಸನ್ ಆಗಸ್ಟ್ 10 ರಿಂದ ಅದ್ಧೂರಿಯಾಗಿ ಆರಂಭಗೊಂಡಿದೆ. ಶೋ ಆರಂಭವಾದ ಕೆಲವೇ ದಿನಗಳಲ್ಲಿ ಇತ್ತೀಚಿನ ಎಪಿಸೋಡ್‌ನ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದಕ್ಕೆ ಪ್ರಮುಖ ಕಾರಣ, ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಮುಂಬರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಅವರ ಜನಪ್ರಿಯ ಬಿರುದಿನ ಬಗ್ಗೆ ಕೆಬಿಸಿ ವೇದಿಕೆಯಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿದೆ.

ಯಶ್ ಕುರಿತ ಆ 20 ಸಾವಿರ ರೂಪಾಯಿಯ ಪ್ರಶ್ನೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಅಮಿತಾಭ್ ಬಚ್ಚನ್ ಅವರು ಹಾಟ್ ಸೀಟ್‌ನಲ್ಲಿದ್ದ ಸ್ಪರ್ಧಿಗೆ ದಕ್ಷಿಣ ಭಾರತದ ಖ್ಯಾತ ನಟರ ಬಿರುದುಗಳನ್ನು ಉಲ್ಲೇಖಿಸಿ 20,000 ರೂಪಾಯಿಯ ಪ್ರಶ್ನೆಯೊಂದನ್ನು ಕೇಳಿದ್ದಾರೆ. “ರಜನಿಕಾಂತ್ ಅವರಿಗೆ ‘ಸೂಪರ್’ (ಸೂಪರ್ ಸ್ಟಾರ್), ಚಿರಂಜೀವಿ ಅವರಿಗೆ ‘ಮೆಗಾ’ (ಮೆಗಾ ಸ್ಟಾರ್) ಮತ್ತು ಪವನ್ ಕಲ್ಯಾಣ್ ಅವರಿಗೆ ‘ಪವರ್’ (ಪವರ್ ಸ್ಟಾರ್) ಎಂಬ ಬಿರುದುಗಳಿದ್ದರೆ, ಹಾಗಾದರೆ ಯಶ್ ಅವರಿಗೆ ಇರುವ ಬಿರುದು ಯಾವುದು?” ಎಂದು ಬಿಗ್ ಬಿ ಪ್ರಶ್ನಿಸಿದ್ದಾರೆ. ಇದಕ್ಕೆ ಡ್ಯಾನ್ಸಿಂಗ್, ಫ್ಲೇವಾಯಂಟ್, ರಾಕಿಂಗ್ ಮತ್ತು ಡೈನಾಮಿಕ್ ಎಂಬ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಸ್ಪರ್ಧಿ ತಕ್ಷಣವೇ ‘ರಾಕಿಂಗ್’ ಎಂಬ ಸರಿಯಾದ ಉತ್ತರವನ್ನು ಆರಿಸುವ ಮೂಲಕ 20,000 ರೂಪಾಯಿಗಳನ್ನು ಗೆದ್ದುಕೊಂಡಿದ್ದಾರೆ. ಸದ್ಯ ಕನ್ನಡಿಗರ ಹೆಮ್ಮೆಯ ನಟನ ಪ್ರಶ್ನೆ ಕೆಬಿಸಿಯಲ್ಲಿ ಬಂದಿದ್ದಕ್ಕೆ ಕನ್ನಡದ ಸಿನೆಮಾ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಖುಷಿ ಹಂಚಿಕೊಳ್ಳುತ್ತಿದ್ದಾರೆ.

25 ಲಕ್ಷದ ಪ್ರಶ್ನೆಗೆ ತಡಕಾಡಿದ ಆಮಿರ್ ಖಾನ್, ಸನ್ನಿ ಡಿಯೋಲ್ ಹಾಗೂ ಪ್ರೀತಿ ಜಿಂಟಾ: ಇದೇ ಸೀಸನ್‌ನ ಮೊದಲ ಎಪಿಸೋಡ್‌ನಲ್ಲಿ ಬಾಲಿವುಡ್ ದಿಗ್ಗಜರಾದ ಆಮಿರ್ ಖಾನ್, ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಅವರು ಅತಿಥಿಗಳಾಗಿ ಹಾಟ್ ಸೀಟ್ ಅಲಂಕರಿಸಿದ್ದರು. ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಾಣದ ತಮ್ಮ ಮುಂಬರುವ ‘ಬಟ್ವಾರಾ 1947’ ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದ ಈ ಮೂವರು ತಾರೆಗಳು ಆಟವನ್ನು ಅದ್ಭುತವಾಗಿ ಆಡುತ್ತಾ ಸಾಗಿದ್ದರು. ತಾವು ಗೆದ್ದ ಹಣವನ್ನು ಚಾರಿಟಬಲ್ ಸಂಸ್ಥೆಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದ ಈ ನಟರು, 25 ಲಕ್ಷ ರೂಪಾಯಿ ಮೌಲ್ಯದ 13ನೇ ಪ್ರಶ್ನೆಯಲ್ಲಿ ಭಾರಿ ಗೊಂದಲಕ್ಕೆ ಒಳಗಾದರು. ಹಿಂದಿ ಚಿತ್ರರಂಗ ಹಾಗೂ ಸ್ವತಃ ಅಮಿತಾಭ್ ಬಚ್ಚನ್ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದ ಉರ್ದು ಕವಿಯೊಬ್ಬರ ಸಾಲುಗಳ ಬಗ್ಗೆ ಆ ಪ್ರಶ್ನೆ ಇತ್ತು.

“ಕಭಿ ಕಿಸಿ ಕೊ ಮುಕಮ್ಮಲ್ ಜಹಾನ್ ನಹಿ ಮಿಲ್ತಾ, ಕಹಿ ಜಮೀನ್ ಕಹಿ ಆಸ್ಮಾನ್ ನಹಿ ಮಿಲ್ತಾ” ಎಂಬ ಪ್ರಸಿದ್ಧ ಸಾಲುಗಳನ್ನು ಬರೆದ ಉರ್ದು ಕವಿ ಯಾರು? ಎಂಬುದು ಪ್ರಶ್ನೆಯಾಗಿತ್ತು. ಇದಕ್ಕೆ ಅಕ್ಬರ್ ಅಲ್ಲಾಹಬಾದಿ, ಜಾನ್ ಎಲಿಯಾ, ನಿದಾ ಫಾಜ್ಲಿ ಮತ್ತು ಫೈಜ್ ಅಹಮದ್ ಫೈಜ್ ಎಂಬ ನಾಲ್ಕು ಆಪ್ಷನ್ಸ್‌ಗಳನ್ನು ನೀಡಲಾಗಿತ್ತು. ಆಯ್ಕೆಗಳನ್ನು ನೋಡುವ ಮುನ್ನವೇ ಪ್ರೀತಿ ಜಿಂಟಾ ಹಾಗೂ ಆಮಿರ್ ಖಾನ್ ಇದು ಮಿರ್ಜಾ ಗಾಲಿಬ್ ಅವರ ಸಾಲುಗಳಿರಬಹುದು ಎಂದು ಅಂದಾಜಿಸಿದ್ದರು. ಆದರೆ ಆಪ್ಷನ್‌ನಲ್ಲಿ ಗಾಲಿಬ್ ಹೆಸರು ಇಲ್ಲದಿದ್ದಾಗ ಗೊಂದಲಕ್ಕೀಡಾದ ಅವರು, ತಮ್ಮ ಬಳಿ ಇದ್ದ ಕೊನೆಯ ಲೈಫ್‌ಲೈನ್ ಆದ ‘ಮಹಾ ಫ್ಲಿಪ್’ ಅನ್ನು ಬಳಸಿಕೊಂಡು ಪ್ರಶ್ನೆಯನ್ನು ಬದಲಾಯಿಸಲು ನಿರ್ಧರಿಸಿದರು. ಪ್ರಶ್ನೆ ಸ್ಕಿಪ್ ಮಾಡಿದ ನಂತರ ಕುತೂಹಲಕ್ಕಾಗಿ ಅಮಿತಾಭ್ ಅವರು ಸರಿಯಾದ ಉತ್ತರವನ್ನು ಊಹಿಸಲು ಹೇಳಿದಾಗ, ಈ ಮೂವರು ನಟರು ಫೈಜ್ ಅಹಮದ್ ಫೈಜ್ ಹೆಸರನ್ನು ಆರಿಸಿದರು. ಆದರೆ ಅದರ ನಿಜವಾದ ಸರಿಯಾದ ಉತ್ತರ ಪ್ರಸಿದ್ಧ ಕವಿ ನಿದಾ ಫಾಜ್ಲಿ ಆಗಿತ್ತು. ಹೀಗೆ ಒಂದೆಡೆ ಸ್ಟಾರ್ ನಟರ ಜ್ಞಾನದ ಪರೀಕ್ಷೆ, ಮತ್ತೊಂದೆಡೆ ಯಶ್ ಅವರ ಜನಪ್ರಿಯತೆಯ ಝಲಕ್‌ನೊಂದಿಗೆ ಕೆಬಿಸಿ 18 ಭರ್ಜರಿಯಾಗಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: ಅಗ್ನಿಪರೀಕ್ಷೆಯಲ್ಲಿ ಗೆದ್ದು ಲಕ್ಕಿ ಚಾನ್ಸ್ ಪಡೆದ ಇಬ್ಬರು ಸಾಮಾನ್ಯ ಸ್ಪರ್ಧಿಗಳು ಯಾರು ಗೊತ್ತಾ?

Leave a Reply

Your email address will not be published. Required fields are marked *