TOP NEWS

Bigg Boss: ಅಗ್ನಿಪರೀಕ್ಷೆಯಲ್ಲಿ ಗೆದ್ದು ಲಕ್ಕಿ ಚಾನ್ಸ್ ಪಡೆದ ಇಬ್ಬರು ಸಾಮಾನ್ಯ ಸ್ಪರ್ಧಿಗಳು ಯಾರು ಗೊತ್ತಾ?

Bigg Boss Kannada 13 First Two Commoner Contestants Confirmed After Gruelling Audition Tasks

ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss 13) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಯಾರೆಲ್ಲಾ ಸೆಲೆಬ್ರಿಟಿಗಳು ಹಾಗೂ ಜನಸಾಮಾನ್ಯರು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ಇದರ ನಡುವೆಯೇ, ಸಾಮಾನ್ಯ ಜನರಿಂದ ಅರ್ಹ ಸ್ಪರ್ಧಿಗಳನ್ನು ಆರಿಸುವ ಕಠಿಣ ಪ್ರಕ್ರಿಯೆ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಈಗಾಗಲೇ ಆರಂಭವಾಗಿದ್ದು, ವೀಕ್ಷಕರಲ್ಲಿ ರೋಮಾಂಚನ ಮೂಡಿಸಿದೆ.

ಲಕ್ಷಾಂತರ ಜನರಲ್ಲಿ ಶಾರ್ಟ್‌ಲಿಸ್ಟ್ ಆಗಿದ್ದ 60 ಸ್ಪರ್ಧಿಗಳು: ಈ ಸೀಸನ್‌ನ ವಿಶೇಷತೆಯೆಂದರೆ ಜನಸಾಮಾನ್ಯರ ಆಯ್ಕೆಗಾಗಿ ನಡೆದ ಬೃಹತ್ ಆಡಿಷನ್. ಲಕ್ಷಾಂತರ ಅರ್ಜಿಗಳ ಪೈಕಿ ವಿಭಿನ್ನ ಪ್ರತಿಭೆ ಮತ್ತು ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ಕೇವಲ 60 ಜನರನ್ನು ಮಾತ್ರ ಮುಂದಿನ ಹಂತದ ‘ಅಗ್ನಿಪರೀಕ್ಷೆ’ಗೆ ಆಯ್ಕೆ ಮಾಡಲಾಗಿತ್ತು. ಚಿತ್ರ-ವಿಚಿತ್ರ ಹಾಗೂ ಕಠಿಣ ಟಾಸ್ಕ್‌ಗಳ ಮೂಲಕ ಈ 60 ಜನರಿಗೆ ಕಠಿಣ ಸವಾಲುಗಳನ್ನು ನೀಡಲಾಗಿದ್ದು, ಅರ್ಹರಲ್ಲದವರನ್ನು ಮನೆಗೆ ಕಳುಹಿಸಿ, ಅಂತಿಮವಾಗಿ ಇಬ್ಬರು ಅದೃಷ್ಟವಂತರು ಬಿಗ್ ಬಾಸ್‌ನ ‘ಸ್ಟಾರ್ ಕಂಟೆಸ್ಟಂಟ್’ಗಳಾಗಿ ನೇರ ಪ್ರವೇಶ ಪಡೆದುಕೊಂಡಿದ್ದಾರೆ. ಈ ಇಬ್ಬರು ಸ್ಪರ್ಧಿಗಳ ಪ್ರೋಮೋ ಕೂಡ ಸದ್ಯ ಬಿಡುಗಡೆಯಾಗಿದೆ.

ಆಯ್ಕೆಯಾದ ಇಬ್ಬರು ಸಾಮಾನ್ಯ ಸ್ಪರ್ಧಿಗಳು ಇವರೇ: ಆಯ್ಕೆಯಾಗಿರುವ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರು ಕೋಲಾರ ಜಿಲ್ಲೆಯ ಬಂಗಾರಪೇಟೆಯ 72 ವರ್ಷದ ಹಿರಿಯ ಜೀವ ರತ್ನಮ್ಮ (ರತ್ನ). ಇಳಿ ವಯಸ್ಸಿನಲ್ಲೂ ಇವರಲ್ಲಿರುವ ಅದ್ಭುತ ಚೈತನ್ಯ ಹಾಗೂ ಜಿದ್ದಿಗೆ ಬಿದ್ದವರಂತೆ ಟಾಸ್ಕ್ ಆಡುವ ಉತ್ಸಾಹವನ್ನು ಕಂಡು ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟ ವಿನಯ್ ಗೌಡ ಅವರು ಇವರಿಗೆ ‘ಬಂಗಾರಪೇಟೆ ಆನೆ’ ಎಂಬ ಬಿರುದು ನೀಡಿ ಗೌರವಿಸಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಆಯ್ಕೆಯಾಗಿರುವ ಮತ್ತೊಬ್ಬ ಸ್ಪರ್ಧಿ ಇಪ್ಪತ್ತು ವರ್ಷದ ಯುವತಿ ಕುಮಾರಿ. ಇಂದಿನ ಯುವ ಪೀಳಿಗೆಯನ್ನು (Gen Z) ಪ್ರತಿನಿಧಿಸುವ ಕುಮಾರಿ ಅವರ ಅಮೂಲ್ಯ ಮುಗ್ಧತೆ ಮತ್ತು ಸಹಜ ನಡವಳಿಕೆಯೇ ಅವರಿಗೆ ಬಿಗ್ ಬಾಸ್ ಮನೆಯ ಟಿಕೆಟ್ ಸಿಗುವಂತೆ ಮಾಡಿದೆ.

ಆಗಸ್ಟ್ 16 ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಅಗ್ನಿಪರೀಕ್ಷೆ’ಯು ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ, ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬ ಸಂದೇಶವನ್ನು ಸಾರುತ್ತಿದೆ. ಒಂದೆಡೆ 72 ವರ್ಷದ ರತ್ನಮ್ಮ ಅವರ ಜೀವನದ ಅನುಭವ, ಮತ್ತೊಂದೆಡೆ 20 ವರ್ಷದ ಕುಮಾರಿ ಅವರ ಯುವ ಚೈತನ್ಯದ ಜುಗಲ್‌ಬಂದಿ ಬಿಗ್ ಬಾಸ್ ವೇದಿಕೆಯಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವಿಲ್ಲ. ಮುಂದಿನ ದಿನಗಳಲ್ಲಿ ಇನ್ನುಳಿದ ಯಾವೆಲ್ಲಾ ರೋಚಕ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಲಗ್ಗೆ ಇಡಲಿದ್ದಾರೆ ಎಂಬುದು ಇಡೀ ರಾಜ್ಯದ ಕಣ್ಣು ನೆಟ್ಟಿದೆ.

ಇದನ್ನೂ ಓದಿ: ಜಾನ್ವಿ ಕಪೂರ್ ಪರ್ಸನಾಲಿಟಿ ರೈಟ್ಸ್ ಅರ್ಜಿ: ಎಲ್ಲ ಲಿಂಕ್‌ಗಳನ್ನು ಬ್ಲಾಕ್ ಮಾಡಲು ದೆಹಲಿ ಹೈಕೋರ್ಟ್ ನಿರಾಕರಣೆ

Leave a Reply

Your email address will not be published. Required fields are marked *