ಧಾರ್ (ಮಧ್ಯಪ್ರದೇಶ): ವಿವಾದಿತ ಭೋಜಶಾಲಾ (Bhojshala) ಸಂಕೀರ್ಣವು ವಾಗ್ದೇವಿ ಅಂದರೆ ಸರಸ್ವತಿ ದೇವಿಯ ಮಂದಿರವಾಗಿದೆ ಎಂದು ಹೈಕೋರ್ಟ್ ಘೋಷಿಸಿದ ಮರುದಿನವೇ ಹಿಂದೂ ಸಮುದಾಯದ ನೂರಾರು ಭಕ್ತರು ಅಲ್ಲಿಗೆ ಧಾವಿಸಿ ದರ್ಶನ ಪಡೆದಿದ್ದಾರೆ. ದೀರ್ಘ ವರ್ಷಗಳ ಹೋರಾಟದ ನಂತರ ಯಾವುದೇ ಅಡೆತಡೆಗಳಿಲ್ಲದೆ ದೇವಿಯ ದರ್ಶನ ಭಾಗ್ಯ ಸಿಕ್ಕಿರುವುದು ಇಡೀ ಹಿಂದೂ ಸಮಾಜಕ್ಕೆ ಸಿಕ್ಕ ದೊಡ್ಡ ಜಯ ಎಂದು ಸಂತಸ ಹಂಚಿಕೊಂಡಿರುವ ಭಕ್ತರು, ಇನ್ಮುಂದೆ ದಿನಾಲೂ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದ್ದಾರೆ. ಭೋಜ ಉತ್ಸವ ಸಮಿತಿಯ ಸಂರಕ್ಷಕ ಅಶೋಕ್ ಕುಮಾರ್ ಜೈನ್ ಅವರು ಮಾತನಾಡಿ, “ನಮ್ಮ ಇತಿಹಾಸದಲ್ಲೇ ಇಷ್ಟು ದೊಡ್ಡ ಸಂತೋಷದ ದಿನ ಎದುರಾಗಿರಲಿಲ್ಲ. ನಮ್ಮ ಈ ದೀರ್ಘ ಹೋರಾಟದಲ್ಲಿ ಮೂವರು ಸನಾತನ ಬಂಧುಗಳು ಹುತಾತ್ಮರಾಗಿದ್ದರು. ಅವರ ತ್ಯಾಗ ಮತ್ತು ಅಸಂಖ್ಯಾತ ಜನರ ಶ್ರಮದ ಫಲವಾಗಿ ಇಂದು ಮಾತಾ ಸರಸ್ವತಿ ಮಂದಿರದ ಬೀಗ ತೆರೆದಂತಾಗಿದೆ” ಎಂದು ಭಾವುಕರಾಗಿ ನುಡಿದಿದ್ದಾರೆ.
ಇದೇ ವೇಳೆ ಭೋಜಶಾಲಾ ಮುಕ್ತಿ ಯಜ್ಞದ ಸಂಯೋಜಕ ಗೋಪಾಲ್ ಶರ್ಮಾ ಮಾತನಾಡಿ, ಇದು ಕೇವಲ ಒಬ್ಬ ವ್ಯಕ್ತಿಯ ಹೋರಾಟವಾಗಿರದೆ ಇಡೀ ಸನಾತನ ಸಂಸ್ಕೃತಿಗೆ ಸಂದ ಜಯವಾಗಿದೆ ಎಂದು ಬಣ್ಣಿಸಿದ್ದಾರೆ. ಕಳೆದ 720 ವರ್ಷಗಳಿಂದ ಇಲ್ಲಿನ ಹಿಂದೂ ಸಮುದಾಯವು ಅನುಭವಿಸಿದ ಅವಮಾನಗಳಿಗೆ ಈ ತೀರ್ಪು ಒಂದು ಮದ್ದಾಗಿದ್ದರೂ, ಇದು ಸುದೀರ್ಘ ಹೋರಾಟದ ಒಂದು ಘಟ್ಟವಷ್ಟೇ ಆಗಿದೆ. ರಾಜ ಭೋಜರ ಕಾಲದಲ್ಲಿ ಈ ಮಂದಿರವು ಯಾವ ವೈಭವದ ರೂಪವನ್ನು ಹೊಂದಿತ್ತೋ, ಆ ಮೂಲ ಸ್ವರೂಪ ಸಂಪೂರ್ಣವಾಗಿ ಮರುಸ್ಥಾಪನೆಯಾಗುವವರೆಗೂ ನಮ್ಮ ಪ್ರಯತ್ನಗಳು ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ಮುಂದೆ ಈ ಪುಣ್ಯಕ್ಷೇತ್ರವನ್ನು ‘ಮಾ ಸರಸ್ವತಿ-ಕಂಠಾಭರಣ’ ಎಂದೇ ಕರೆಯಲಾಗುವುದು ಎಂದು ತಿಳಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುವ ಮೂಲಕ ಮಂದಿರದ ಪೂರ್ಣ ಪುನರುತ್ಥಾನಕ್ಕೆ ಕೈಜೋಡಿಸಬೇಕಾಗಿ ಮನವಿ ಮಾಡಿದ್ದಾರೆ.
ಅಯೋಧ್ಯಾ ತೀರ್ಪಿನ ಆಧಾರದ ಮೇಲೆ ತೀರ್ಪು: ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ಈ ಮಹತ್ವದ ತೀರ್ಪನ್ನು ನೀಡುವಾಗ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ಅಯೋಧ್ಯಾ ತೀರ್ಪಿನ ತತ್ವಗಳನ್ನು ಹಾಗೂ ಪುರಾತತ್ವ ಇಲಾಖೆಯ (ASI) ವರದಿಯನ್ನು ಪ್ರಮುಖವಾಗಿ ಆಧಾರವಾಗಿಟ್ಟುಕೊಂಡಿದೆ. ಪ್ರಾಚೀನ ಇತಿಹಾಸ ಮತ್ತು ಸಾಹಿತ್ಯಿಕ ದಾಖಲೆಗಳ ಪ್ರಕಾರ, ಈ ಸ್ಥಳವು ಪರಮಾರ ರಾಜವಂಶದ ರಾಜ ಭೋಜನಿಗೆ ಸೇರಿದ್ದಾಗಿದ್ದು, ಇಲ್ಲಿ ಸರಸ್ವತಿ ದೇವಿಯ ಭವ್ಯ ಮಂದಿರ ಮತ್ತು ಸಂಸ್ಕೃತ ಪಾಠಶಾಲೆ ಇತ್ತು ಎಂಬುದನ್ನು ನ್ಯಾಯಾಲಯ ಎತ್ತಿಹಿಡಿದಿದೆ. 1904 ರ ಕಾಯ್ದೆಯಡಿ ಈ ತಾಣವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿರುವ ಕೋರ್ಟ್, ಇದರ ಸಂಪೂರ್ಣ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಮತ್ತು ಪುರಾತತ್ವ ಇಲಾಖೆಗೆ ವಹಿಸಿದೆ. ಅಷ್ಟೇ ಅಲ್ಲದೆ, ಮುಸ್ಲಿಮರಿಗೆ ಶುಕ್ರವಾರ ನಮಾಜ್ ಮಾಡಲು ಹಾಗೂ ಹಿಂದೂಗಳಿಗೆ ಕೇವಲ ಮಂಗಳವಾರ ಮಾತ್ರ ಪೂಜೆಗೆ ಅವಕಾಶ ನೀಡಿದ್ದ 2003 ರ ಹಳೆಯ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇನ್ನು ಮುಂದೆ ಇದನ್ನು ಅಧಿಕೃತವಾಗಿ ‘ಭೋಜಶಾಲಾ ದೇವಸ್ಥಾನ’ ಎಂದೇ ಪರಿಗಣಿಸಿ ಆಡಳಿತ ನಡೆಸಲು ಸೂಚಿಸಿರುವ ನ್ಯಾಯಾಲಯ, ಮುಸ್ಲಿಂ ಸಮುದಾಯದ ಪ್ರಾರ್ಥನೆಗಾಗಿ ಧಾರ್ ಜಿಲ್ಲೆಯಲ್ಲೇ ಪರ್ಯಾಯ ಭೂಮಿಯನ್ನು ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.
ಭೋಜಶಾಲಾ ಮಂದಿರ ಎಂದು ಘೋಷಿಸಿದ ಹೈಕೋರ್ಟ್; ತೀರ್ಪಿನ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಓವೈಸಿ ಸಜ್ಜು
ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಮೂಲತಃ ಸರಸ್ವತಿ ದೇವಿಯ ಮಂದಿರವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ. ಈ ಸಂಕೀರ್ಣವು ಪರಮಾರ ರಾಜವಂಶದ ರಾಜ ಭೋಜ ನಿರ್ಮಿಸಿದ ಸಂಸ್ಕೃತ ಕಲಿಕಾ ಕೇಂದ್ರ ಮತ್ತು ವಾಗ್ದೇವಿ ಮಂದಿರವಾಗಿದೆ ಎಂಬ ಹಿಂದೂ ಪರ ಅರ್ಜಿದಾರರ ವಾದವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಆದರೆ, ಈ ತೀರ್ಪನ್ನು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ (Asaduddin Owaisi) ತೀವ್ರವಾಗಿ ಟೀಕಿಸಿದ್ದು, ಸುಪ್ರೀಂ ಕೋರ್ಟ್ ಈ ಆದೇಶವನ್ನು ರದ್ದುಗೊಳಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಹೇಳಿದ್ದೇನು?
ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಸ್ಥಳದಲ್ಲಿ ಹಿಂದೂಗಳ ಆರಾಧನೆಯ ನಿರಂತರತೆ ಎಂದಿಗೂ ಸ್ಥಗಿತಗೊಂಡಿಲ್ಲ ಮತ್ತು ಭಾರತೀಯ ಪುರಾತತ್ವ ಇಲಾಖೆಯ (ASI) ಸಮೀಕ್ಷೆಯು ಈ ಕಟ್ಟಡವು ಮಂದಿರವಾಗಿತ್ತು ಎಂಬುದಕ್ಕೆ ಪೂರಕ ಸಾಕ್ಷ್ಯಗಳನ್ನು ಒದಗಿಸಿದೆ ಎಂದು ನ್ಯಾಯಾಲಯ ಹೇಳಿದೆ. ಇದರೊಂದಿಗೆ, 2003ರಲ್ಲಿ ಎಎಸ್‌ಐ ಮಾಡಿಕೊಂಡಿದ್ದ ವ್ಯವಸ್ಥೆಯನ್ನು ರದ್ದುಗೊಳಿಸಿದ ಕೋರ್ಟ್, ಮಂಗಳವಾರ ಹಿಂದೂಗಳಿಗೆ ಪೂಜೆ ಮತ್ತು ಶುಕ್ರವಾರ ಮುಸ್ಲಿಮರಿಗೆ ನಮಾಜ್ ಮಾಡಲು ನೀಡಿದ್ದ ಅನುಮತಿಯನ್ನು ತೆಗೆದುಹಾಕಿದೆ. ಮುಸ್ಲಿಂ ಸಮುದಾಯಕ್ಕೆ ಮಸೀದಿ ನಿರ್ಮಾಣಕ್ಕಾಗಿ ಧಾರ ಜಿಲ್ಲೆಯಲ್ಲೇ ಪರ್ಯಾಯ ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಹೋರಾಟ ಮುಗಿದಿಲ್ಲ ಎಂದ ಓವೈಸಿ
ಈ ತೀರ್ಪಿನ ಬಗ್ಗೆ ಎಕ್ಸ್ (X) ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅಸದುದ್ದೀನ್ ಓವೈಸಿ, ಭೋಜಶಾಲಾ ತೀರ್ಪು ಮತ್ತು ಬಾಬರಿ ಮಸೀದಿ ಪ್ರಕರಣದ ತೀರ್ಪಿನ ನಡುವೆ “ಹಲವು ಸಾಮ್ಯತೆಗಳಿವೆ” ಎಂದು ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್ ಈ ಆದೇಶವನ್ನು ಸರಿಪಡಿಸಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಪರ ವಕೀಲರು ಕೂಡ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದು, ತಮ್ಮ ಕಡೆಯ ಪುರಾವೆಗಳನ್ನು ನ್ಯಾಯಾಲಯ ಸರಿಯಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಮುಸ್ಲಿಂ ನಾಯಕರು, ಕಾನೂನು ಹೋರಾಟ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಈ ತೀರ್ಪನ್ನು ಸ್ವಾಗತಿಸಿದ್ದು, ಇದು ಸತ್ಯಕ್ಕೆ ಸಂದ ಜಯ ಎಂದಿದ್ದಾರೆ. ಲಂಡನ್‌ನಲ್ಲಿರುವ ವಾಗ್ದೇವಿ (ಸರಸ್ವತಿ) ವಿಗ್ರಹವನ್ನು ಮರಳಿ ತರಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಅವರು ತಿಳಿಸಿದ್ದಾರೆ. 2024ರ ಮಾರ್ಚ್‌ನಲ್ಲಿ ಎಎಸ್‌ಐ ನಡೆಸಿದ್ದ 98 ದಿನಗಳ ವೈಜ್ಞಾನಿಕ ಸಮೀಕ್ಷೆಯ ವರದಿಯೇ ಈ ತೀರ್ಪಿಗೆ ಮುಖ್ಯ ಆಧಾರವಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಧಾರ್ ಜಿಲ್ಲೆಯಾದ್ಯಂತ ಸುಮಾರು 1,200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಹೈಕೋರ್ಟ್ ಮಹತ್ವದ ಆದೇಶ: ಭೋಜಶಾಲಾ ಮಂದಿರಕ್ಕೆ ವಾಗ್ದೇವಿ ವಿಗ್ರಹ ಮರಳುವ ಕಾಲ ಹತ್ತಿರ?
