TOP NEWS

NEET: ನೀಟ್ ಪತ್ರಿಕೆ ಲೀಕ್ ಹಗರಣ: ಎನ್‌ಟಿಎ (NTA) ಬಯಾಲಜಿ ತಜ್ಞೆ ಸಿಬಿಐ ವಶಕ್ಕೆ!

NEET CBI arrests mastermind who leaked Biology paper

ನವದೆಹಲಿ: ದೇಶಾದ್ಯಂತ ತಲ್ಲಣ ಮೂಡಿಸಿರುವ ‘ನೀಟ್-ಯುಜಿ 2026’ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಭಾರಿ ಬೇಟೆಯಾಡಿದೆ. ಹಗರಣದ ಪ್ರಮುಖ ಸೂತ್ರಧಾರಿಗಳಲ್ಲಿ ಒಬ್ಬರಾದ ಪುಣೆಯ ಹಿರಿಯ ಸಸ್ಯಶಾಸ್ತ್ರ (Botany) ಪ್ರೊಫೆಸರ್ ಮನಿಷಾ ಗುರುನಾಥ್ ಮಾಂಧರೆ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಜೀವಶಾಸ್ತ್ರ (Biology) ವಿಭಾಗದ ಪತ್ರಿಕೆ ಸೋರಿಕೆಯಾಗಲು ಇವರೇ ಮುಖ್ಯ ಕಾರಣ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಪ್ರಶ್ನೆಪತ್ರಿಕೆಯ ಸಂಪೂರ್ಣ ಪ್ರವೇಶ ಹೊಂದಿದ್ದ ಪ್ರೊಫೆಸರ್: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮನಿಷಾ ಮಾಂಧರೆ ಅವರನ್ನು ನೀಟ್ ಪರೀಕ್ಷಾ ಪ್ರಕ್ರಿಯೆಯ ವಿಷಯ ತಜ್ಞರನ್ನಾಗಿ ನೇಮಕ ಮಾಡಿತ್ತು. ಈ ಹುದ್ದೆಯ ಕಾರಣದಿಂದಾಗಿ ಅವರಿಗೆ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಪ್ರಶ್ನೆಪತ್ರಿಕೆಗಳನ್ನು ನೋಡುವ ಸಂಪೂರ್ಣ ಅವಕಾಶವಿತ್ತು. ಇದರ ದುರುಪಯೋಗ ಪಡಿಸಿಕೊಂಡ ಅವರು, ಏಪ್ರಿಲ್ ತಿಂಗಳಿನಲ್ಲೇ (ಈಗಾಗಲೇ ಜೈಲು ಸೇರಿರುವ) ಮನಿಷಾ ವಾಘ್ಮೋರೆ ಎಂಬಾಕೆಯ ನೆರವಿನಿಂದ ಹಲವು ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದರು. ವಿಶೇಷ ತರಗತಿ ನೆಪದಲ್ಲಿ ಪರೀಕ್ಷೆಗೆ ಬರುವ ಪ್ರಶ್ನೆಗಳನ್ನೇ ಟಿಪ್ಪಣಿ (ನೋಟ್ಸ್) ಮಾಡಿಸಿದ್ದರು. ಮೇ 3 ರಂದು ನಡೆದ ಪರೀಕ್ಷೆಯ ಪ್ರಶ್ನೆಗಳಿಗೂ, ಇವರು ಕೊಟ್ಟಿದ್ದ ಪ್ರಶ್ನೆಗಳಿಗೂ ನಿಕಟ ಹೋಲಿಕೆಯಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ದೇಶದ 6 ಕಡೆ ದಾಳಿ; ನಿವೃತ್ತ ಪ್ರಾಂಶುಪಾಲ ಸೇರಿ 9 ಮಂದಿ ಅರೆಸ್ಟ್: ಕಳೆದ 24 ಗಂಟೆಗಳಲ್ಲಿ ಸಿಬಿಐ ಅಧಿಕಾರಿಗಳು ದೇಶದ ಆರು ಪ್ರಮುಖ ನಗರಗಳಲ್ಲಿ ದಿಢೀರ್ ದಾಳಿ ನಡೆಸಿ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಬ್ಯಾಂಕ್ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ದೆಹಲಿ, ಜೈಪುರ, ಗುರುಗ್ರಾಮ, ನಾಸಿಕ್, ಪುಣೆ ಮತ್ತು ಅಹ್ಲಿಯಾನಗರದಿಂದ ಈವರೆಗೆ ಒಟ್ಟು 9 ಜನರನ್ನು ಜೈಲಿಗಟ್ಟಲಾಗಿದೆ. ಇವರಲ್ಲಿ ಕೆಮಿಸ್ಟ್ರಿ ಪೇಪರ್ ಲೀಕ್ ಮಾಡಿದ ಆರೋಪ ಹೊತ್ತಿರುವ ನಿವೃತ್ತ ಪ್ರಾಂಶುಪಾಲ ಪಿ.ವಿ. ಕುಲಕರ್ಣಿ ಕೂಡ ಸೇರಿದ್ದಾರೆ.

ಮಾಕ್ ಟೆಸ್ಟ್ ಹೆಸರಲ್ಲಿ ಅಕ್ರಮ ಎಸಗಿದ್ದ ಕುಲಕರ್ಣಿ: ದಯಾನಂದ ಕಾಲೇಜಿನಲ್ಲಿ 28 ವರ್ಷಗಳ ಕಾಲ ರಸಾಯನಶಾಸ್ತ್ರ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದ ಕುಲಕರ್ಣಿ, ಎನ್‌ಟಿಎ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ರಸಾಯನಶಾಸ್ತ್ರ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಬಾರಿ ನೀಟ್ ಕೆಮಿಸ್ಟ್ರಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ತಂಡದಲ್ಲಿದ್ದ ಇವರು, ಏಪ್ರಿಲ್ ಅಂತ್ಯದಲ್ಲಿ ‘ರಾಜ್ ಕೋಚಿಂಗ್ ಕ್ಲಾಸಸ್’ ಎಂಬ ಆನ್‌ಲೈನ್ ವೇದಿಕೆಯ ಮೂಲಕ ಅಸಲಿ ಪ್ರಶ್ನೆಗಳನ್ನೇ ‘ಮಾಕ್ ಟೆಸ್ಟ್’ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಹಂಚಿದ್ದರು ಎಂದು ಶಂಕಿಸಲಾಗಿದೆ.

ದೂರಿನ ಮೂಲಕ ಕಳಚಿದ ಮುಖವಾಡ: ಲಾತೂರ್‌ನ ಖಾಸಗಿ ಕೋಚಿಂಗ್ ಸೆಂಟರ್ ಒಂದು ನಡೆಸಿದ ಮಾಕ್ ಟೆಸ್ಟ್‌ನಲ್ಲಿದ್ದ ಬರೋಬ್ಬರಿ 42 ಪ್ರಶ್ನೆಗಳು, ಮೇ 3 ರಂದು ನಡೆದ ಅಸಲಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿದ್ದವು. ಇದನ್ನು ಗಮನಿಸಿದ ಪೋಷಕರು ಲಾತೂರ್ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು. ರಾಜ್ಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಭ್ರಷ್ಟಾಚಾರದ ಲಿಂಕ್‌ಗಳನ್ನು ಸಿಬಿಐಗೆ ಹಸ್ತಾಂತರಿಸಿದಾಗ ಇಡೀ ಹಗರಣದ ಕರಾಳ ಮುಖ ಬಯಲಾಗಿದೆ.

ನೀಟ್ ಹಗರಣಕ್ಕೆ ಸಿನಿಮೀಯ ತಿರುವು: ತಂದೆಯ ಬಂಧನದ ಬೆನ್ನಲ್ಲೇ ಎಂಬಿಬಿಎಸ್ ವಿದ್ಯಾರ್ಥಿನಿ ನಾಪತ್ತೆ

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಈಗ ಯಾವುದೋ ಕ್ರೈಂ ಸಿನಿಮಾದ ಕಥೆಯಂತೆ ಭಾಸವಾಗುತ್ತಿದೆ. ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಈ ಜಾಲದ ತನಿಖೆ ಈಗ ದೌಸಾದ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೆಟ್ಟಿಲೇರಿದ್ದು, ಅಲ್ಲಿ ಓದುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಗತಿ ಬಿವಾಲ್ ಎಂಬಾಕೆ ದಿಢೀರ್ ನಾಪತ್ತೆಯಾಗಿರುವುದು ಹೊಸ ಸಂಚಲನ ಮೂಡಿಸಿದೆ. ಈಕೆಯ ತಂದೆ ಮಾಂಗಿಲಾಲ್ ಬಿವಾಲ್ ಮತ್ತು ಚಿಕ್ಕಪ್ಪ ದಿನೇಶ್ ಬಿವಾಲ್ ಅವರನ್ನು ಪತ್ರಿಕೆ ಸೋರಿಕೆ ಹಗರಣದಲ್ಲಿ ಸಿಬಿಐ ಈಗಾಗಲೇ ಬಂಧಿಸಿದೆ. ಈ ಬಂಧನವಾದ ಬೆನ್ನಲ್ಲೇ ಪ್ರಗತಿ ಕಾಲೇಜಿಗೆ ರಜೆ ಅರ್ಜಿ ನೀಡಿ ಕಣ್ಮರೆಯಾಗಿದ್ದು, ತನಿಖಾಧಿಕಾರಿಗಳಲ್ಲಿ ತೀವ್ರ ಅನುಮಾನ ಮೂಡಿಸಿದೆ.

ದಾಖಲೆ ನೋಡಿ ಬೆಚ್ಚಿ ಬಿದ್ದ ಸಿಬಿಐ

ಬಿವಾಲ್ ಕುಟುಂಬದ ಸದಸ್ಯರ ಶೈಕ್ಷಣಿಕ ದಾಖಲೆಗಳನ್ನು ಗಮನಿಸಿದಾಗ ಸಿಬಿಐ ಬೆಚ್ಚಿಬಿದ್ದಿದೆ. ಒಂದೇ ಕುಟುಂಬದ ಅರ್ಧ ಡಜನ್‌ಗೂ ಹೆಚ್ಚು ಸದಸ್ಯರು ದೇಶದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಪ್ರಗತಿ ದೌಸಾದಲ್ಲಿ ಓದುತ್ತಿದ್ದರೆ, ಆಕೆಯ ಸಹೋದರ ವಿಕಾಸ್ ಸವಾಯಿ ಮಾಧೋಪುರದಲ್ಲಿ, ಸೋದರ ಸಂಬಂಧಿಗಳಾದ ಸಾನಿಯಾ ಜೈಪುರದಲ್ಲಿ, ಪಾಲಕ್ ಮುಂಬೈನಲ್ಲಿ ಹಾಗೂ ಗುಂಜನ್ ಬನಾರಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಒಂದೇ ಕುಟುಂಬದ ಇಷ್ಟು ಮಂದಿ ಸೀಟು ಪಡೆದಿರುವುದು ಕೇವಲ ಅವರ ಪ್ರತಿಭೆಯೋ ಅಥವಾ ತಂದೆ-ಚಿಕ್ಕಪ್ಪ ನಡೆಸುತ್ತಿದ್ದ ಪತ್ರಿಕೆ ಸೋರಿಕೆ ದಂಧೆಯ ಫಲವೋ ಎಂಬುದು ಈಗ ತನಿಖೆಯ ಮುಖ್ಯ ವಿಷಯವಾಗಿದೆ. ಇದೇ ಕಾರಣಕ್ಕೆ ಇಡೀ ಕುಟುಂಬದ ಶೈಕ್ಷಣಿಕ ಹಿನ್ನೆಲೆಯನ್ನು ಸಿಬಿಐ ಜಾಲಾಡುತ್ತಿದೆ.

ಆರೋಪಿಗಳ ಮನೆಯಲ್ಲಿ ಸಿಬಿಐ ಶೋಧ

ಇತ್ತೀಚೆಗೆ ಜೈಪುರದ ಜಮವಾರಮಗಢದಲ್ಲಿರುವ ಬಿವಾಲ್ ಸಹೋದರರ ಮನೆ ಮತ್ತು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ ಸಿಬಿಐಗೆ ಅಚ್ಚರಿ ಕಾದಿತ್ತು. ದಾಳಿಯ ವೇಳೆ ಮನೆಯಲ್ಲಿ ಯಾವುದೇ ಪುರುಷ ಸದಸ್ಯರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿನ ಮಹಿಳೆಯರನ್ನು ಅಧಿಕಾರಿಗಳು ಸುದೀರ್ಘ ಕಾಲ ವಿಚಾರಣೆಗೊಳಪಡಿಸಿದ್ದಾರೆ. ಶೋಧದ ವೇಳೆ ಕೆಲವು ಐಷಾರಾಮಿ ವಾಹನಗಳು ಮತ್ತು ಹಗರಣಕ್ಕೆ ಸಂಬಂಧಿಸಿದ ಎನ್ನಲಾದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಜನರನ್ನು ಬಂಧಿಸಲಾಗಿದ್ದು, ಈ ವರ್ಷ ನೀಟ್ ಬರೆದಿರುವ ದಿನೇಶ್ ಬಿವಾಲ್ ಮಗ ರಿಷಿ ಕೂಡ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.

ಈ ಹಗರಣದ ವ್ಯಾಪ್ತಿ ಈಗ ರಾಜಸ್ಥಾನವನ್ನೂ ಮೀರಿ ಮಹಾರಾಷ್ಟ್ರದವರೆಗೂ ಹಬ್ಬಿದೆ. ಅತ್ಯಂತ ಪೈಪೋಟಿಯಿಂದ ಕೂಡಿದ ನೀಟ್ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಮ್ಯಾನಿಪುಲೇಟ್ ಮಾಡಿರುವ ಬೃಹತ್ ಶಿಕ್ಷಣ ಮಾಫಿಯಾ ಇದರ ಹಿಂದೆ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಎಂಬಿಬಿಎಸ್ ವಿದ್ಯಾರ್ಥಿನಿಯ ನಾಪತ್ತೆಯೊಂದಿಗೆ ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇದು ರಾಜಸ್ಥಾನದ ಇತಿಹಾಸದಲ್ಲೇ ಅತಿದೊಡ್ಡ ಶಿಕ್ಷಣ ಹಗರಣವಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ತನಿಖೆ ತೀವ್ರಗೊಂಡಂತೆ ಇನ್ನೂ ಅನೇಕ ಪ್ರಭಾವಿಗಳ ಮತ್ತು ವಿದ್ಯಾರ್ಥಿಗಳ ಪಾತ್ರ ಹೊರಬರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ನಿಂದನೆ: ಆಜಂ ಖಾನ್‌ಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಕೋರ್ಟ್

Leave a Reply

Your email address will not be published. Required fields are marked *