ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಇಲಾಖೆಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿರುವ ಭೀಕರ ಘಟನೆಯನ್ನು ಖಂಡಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ( R Ashok) ಪ್ರಕರಣದ ಸತ್ಯಾಸತ್ಯತೆ ಹೊರಬರಲು ತಕ್ಷಣವೇ ‘ನ್ಯಾಯಾಂಗ ತನಿಖೆ’ಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.
ಘಟನೆ ಕುರಿತು ಸರ್ಕಾರದ ನಾಯಕರ ಹೇಳಿಕೆಗಳಲ್ಲಿ ಯಾವುದೇ ಪರಸ್ಪರ ಸಾಮ್ಯತೆಯಿಲ್ಲ ಎಂದು ಟೀಕಿಸಿದ ಅಶೋಕ್, ಅರಣ್ಯ ಇಲಾಖೆ ಅಧಿಕಾರಿಗಳು ಒಂದು ಕಥೆ ಹೇಳಿದರೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಉಸ್ತುವಾರಿ ಸಚಿವರು ಮತ್ತೊಂದು ರೀತಿಯ ಹೇಳಿಕೆ ನೀಡುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.
ಪ್ರಕರಣದಲ್ಲಿ ನಡೆದಿರುವ ಅಕ್ರಮ ಹಾಗೂ ಅನುಮಾನಾಸ್ಪದ ನಡೆಗಳನ್ನು ಉಲ್ಲೇಖಿಸಿ ಅವರು ಈ ಕೆಳಗಿನ ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ:
- ಸ್ಥಳ ಮಹಜರಿಗೂ ಮುನ್ನ ಶವಗಳ ಸ್ಥಳಾಂತರ: ಪೊಲೀಸರು ಘಟನಾ ಸ್ಥಳದಲ್ಲಿ ಮಹಜರು ನಡೆಸುವ ಮುನ್ನವೇ ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಿದ್ದು ಏಕೆ? ಎಸ್‌ಪಿ ಜೊತೆ ಮಾತನಾಡಿದಾಗ ಇನ್ನೂ ಮಹಜರು ನಡೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ.
- ನಕಲಿ ಎನ್‌ಕೌಂಟರ್ ಆರೋಪ: ವನ್ಯಜೀವಿ ಶಿಕಾರಿ ಹಾಗೂ ಮಾಂಸ ಮಾರಾಟಕ್ಕೆ ಬಂದಿದ್ದರು ಎಂದು ಇಲಾಖೆ ಹೇಳುತ್ತಿದ್ದರೆ, ಇದು ‘ಸಂಚು ರೂಪಿಸಿ ನಡೆಸಿದ ನಕಲಿ ಎನ್‌ಕೌಂಟರ್’ ಎಂದು ಮೃತರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
- ನಿಯಮಗಳ ಉಲ್ಲಂಘನೆ: ಯಾವುದೇ ದಾಳಿ ಅಥವಾ ಅಪಾಯ ಎದುರಾದಾಗ ನಿಯಮದಂತೆ ಮೊದಲು ಕಾಲಿಗೆ ಗುಂಡು ಹಾರಿಸಬೇಕು. ಆದರೆ ಇಲ್ಲಿ ನೇರವಾಗಿ ಎದೆ ಭಾಗಕ್ಕೇ ಗುಂಡು ಹಾರಿಸಲಾಗಿದೆ. ಅಲ್ಲದೆ ಮೂವರನ್ನೂ ಸಾಲಾಗಿ ಹೊಡೆದುರುಳಿಸುವ ಅಗತ್ಯ ಏನಿತ್ತು?
- ಸಿಬ್ಬಂದಿ ನಾಪತ್ತೆ: ಘಟನೆಯಲ್ಲಿ ಭಾಗಿಯಾದ ಅರಣ್ಯ ಸಿಬ್ಬಂದಿ ತಾವಾಗಿಯೇ ಪೊಲೀಸರಿಗೆ ಶರಣಾಗದೆ ಪ್ರಸ್ತುತ ನಾಪತ್ತೆಯಾಗಿದ್ದಾರೆ.
- ಸಚಿವರ ನಿರ್ಲಕ್ಷ್ಯ: ಅರಣ್ಯ ಸಚಿವ ಈ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ, ಪ್ರತಿಭಟನೆ ನಡೆಸುತ್ತಿರುವ ಕುಟುಂಬಸ್ಥರ ಮತ್ತು ಸ್ಥಳೀಯರ ಮನವೊಲಿಸಿ ನ್ಯಾಯದ ಭರವಸೆ ನೀಡಬೇಕಿತ್ತು.
ಸರ್ಕಾರ ಈಗ ಘೋಷಿಸಿರುವ ಮ್ಯಾಜಿಸ್ಟ್ರೇಟ್ ತನಿಖೆಯಿಂದ ಸಂತ್ರಸ್ತರಿಗೆ ಸೂಕ್ತ ನ್ಯಾಯ ಸಿಗಲು ಸಾಧ್ಯವಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯಬೇಕಾದರೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲೇ ನ್ಯಾಯಾಂಗ ತನಿಖೆಯಾಗಬೇಕು ಹಾಗೂ ಘಟನೆಯಲ್ಲಿ ಭಾಗಿಯಾದ ಸಿಬ್ಬಂದಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಶರಾವತಿ ಸಂತ್ರಸ್ತರ ಶಾಪ ವಿಮೋಚನಾ ಸೇತುವೆ ಮೇಲೆ 80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 14ರ ಮಧ್ಯರಾತ್ರಿ ಧ್ವಜಾರೋಹಣ
