ಚೆನ್ನೈ: ಬಹುದಿನಗಳ ಕಾಯುವಿಕೆ ಮತ್ತು ಹಲವು ಹಣಕಾಸಿನ ಸಂಕಷ್ಟಗಳ ಬಳಿಕ ನಟ ಸೂರ್ಯ ಮತ್ತು ತ್ರಿಶಾ (Trisha) ಅಭಿನಯದ, ಆರ್.ಜೆ. ಬಾಲಾಜಿ ನಿರ್ದೇಶನದ ‘ಕರುಪ್ಪು’ ಸಿನಿಮಾ ಕೊನೆಗೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನವನ್ನು (FDFS) ವೀಕ್ಷಿಸಲು ನಟಿ ತ್ರಿಶಾ ಕೃಷ್ಣನ್ ಅವರು ಚಿತ್ರಮಂದಿರಕ್ಕೆ ಆಗಮಿಸಿದ್ದರು. ಸಿನಿಮಾ ಮುಗಿಸಿ ಅವರು ಹೊರಡುವಾಗ ಚಿತ್ರಮಂದಿರದ ಹೊರಗೆ ನೆರೆದಿದ್ದ ಅಭಿಮಾನಿಗಳು ತಮಿಳುನಾಡು ಸಿಎಂ ವಿಜಯ್ ಅವರ ಹೆಸರನ್ನು ಎತ್ತಿ ತ್ರಿಶಾ ಅವರ ಕಾಲೆಳೆದಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ವಿಜಯ್ ಬಗ್ಗೆ ಅಭಿಮಾನಿಗಳ ತಮಾಷೆ
ಚಿತ್ರಮಂದಿರದಿಂದ ಹೊರಬಂದು ತ್ರಿಶಾ ಅವರು ತಮ್ಮ ಕಾರು ಹತ್ತುತ್ತಿದ್ದಾಗ ಅಭಿಮಾನಿಗಳು ಫೋಟೋ ಮತ್ತು ವಿಡಿಯೋಗಳಿಗಾಗಿ ಮುಗಿಬಿದ್ದರು. ಈ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಅಭಿಮಾನಿಯೊಬ್ಬ, “ನಮ್ಮ ದಳಪತಿಯನ್ನ (ವಿಜಯ್) ಕೇಳಿದ್ದಾಗಿ ಹೇಳಿ” ಎಂದು ಕೂಗಿದಾಗ ಅಲ್ಲಿದ್ದವರೆಲ್ಲ ಜೋರಾಗಿ ನಗಲು ಪ್ರಾರಂಭಿಸಿದರು. ಇದಕ್ಕೆ ನಾಚಿ ನಕ್ಕ ನಟಿ ತ್ರಿಶಾ, “ಖಂಡಿತವಾಗಿಯೂ ಹೇಳುತ್ತೇನೆ” (ಕಂಡಿಪ) ಎಂದು ಉತ್ತರಿಸಿ ತಲೆತಗ್ಗಿಸಿ ಮೊಬೈಲ್ ನೋಡಲಾರಂಭಿಸಿದರು. ಈ ವಿಡಿಯೋ ಎಕ್ಸ್ (ಟ್ವಿಟರ್) ತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ನಡೆದ ವಿಜಯ್ ಅವರ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ತ್ರಿಶಾ ತಮ್ಮ ತಾಯಿಯೊಂದಿಗೆ ಹಾಜರಾಗಿದ್ದರು. ಆ ಸಮಾರಂಭದಲ್ಲಿ ವಿಜಯ್ ಭಾಷಣ ಮಾಡುವಾಗ ತ್ರಿಶಾ ಭಾವುಕರಾಗಿ ಕಣ್ಣೀರು ಹಾಕಿದ್ದು ಹಾಗೂ ವಿಜಯ್ ಅವರ ತಾಯಿ ಶೋಭಾ ಅವರನ್ನು ಅಪ್ಪಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಈ ಹೊಸ ವಿಡಿಯೋ ಬಂದಿರುವುದು ಗಾಸಿಪ್ಗಳಿಗೆ ಮತ್ತಷ್ಟು ತುಪ್ಪ ಸವರಿದಂತಾಗಿದೆ.
"Thalapathy ah kettenu sollunga"
— Deepu (@deepu_drops) May 15, 2026
Trisha replies, "Kandipa" 😅❤️ pic.twitter.com/CLZUTP3QIn
ಇನ್ನೊಂದೆಡೆ, ಭಾರಿ ನಿರೀಕ್ಷೆ ಮೂಡಿಸಿದ್ದ ‘ಕರುಪ್ಪು’ ಸಿನಿಮಾ ಬಿಡುಗಡೆಗೆ ಮುನ್ನ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ನಿರ್ಮಾಪಕರು ಮತ್ತು ಫೈನಾನ್ಸಿಯರ್ಗಳ ನಡುವಿನ ಹಣಕಾಸಿನ ವಿವಾದದಿಂದಾಗಿ ಗುರುವಾರದ ಎಲ್ಲಾ ಪ್ರದರ್ಶನಗಳು ರದ್ದಾಗಿದ್ದವು. ಸಿಎಂ ವಿಜಯ್ ಅವರು ಈ ಚಿತ್ರದ ಮುಂಜಾನೆಯ ಪ್ರದರ್ಶನಕ್ಕೆ ವಿಶೇಷ ಅನುಮತಿ ನೀಡಿದ್ದರೂ ಸಹ ಹಣಕಾಸಿನ ಸಮಸ್ಯೆಯಿಂದಾಗಿ ಪ್ರದರ್ಶನಗಳು ತಡವಾಗಿದ್ದವು. ಈ ಬಗ್ಗೆ ನಿರ್ದೇಶಕ ಆರ್.ಜೆ. ಬಾಲಾಜಿ ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದರು. 32 ತಿಂಗಳ ಸುದೀರ್ಘ ಹೋರಾಟದ ನಂತರ ಸಿನಿಮಾ ಬಿಡುಗಡೆಯಾಗಿದ್ದು, ಮುಂಗಡ ಬುಕಿಂಗ್ ಮೂಲಕವೇ ಮೊದಲ ದಿನ 7.2 ಕೋಟಿ ರೂಪಾಯಿ ಗಳಿಸಿದೆ. ಸೂರ್ಯ ಮತ್ತು ತ್ರಿಶಾ ಅವರ ‘ಆರು’ ಸಿನಿಮಾದ ನಂತರ ಈ ಜೋಡಿ ಮತ್ತೆ ಒಂದಾಗಿರುವುದು ಮತ್ತು ಆರ್.ಜೆ. ಬಾಲಾಜಿ ಇದರಲ್ಲಿ ಖಳನಾಯಕನಾಗಿ ನಟಿಸಿರುವುದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನ ಗೆದ್ದು ವಿಜಯ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದು, ಅವರ ‘ಜನನಾಯಕನ್’ ಸಿನಿಮಾ ಕೂಡ ಸೆನ್ಸಾರ್ ಮಂಡಳಿಯ ಸಮಸ್ಯೆಯಿಂದಾಗಿ ಬಿಡುಗಡೆ ತಡವಾಗಿದೆ.
ಸೂರ್ಯ-ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ಸಂಕಷ್ಟ, ಬೆಳಗಿನ ಶೋ ರದ್ದು
ಭಾರಿ ನಿರೀಕ್ಷೆ ಮೂಡಿಸಿದ್ದ ಸೂರ್ಯ ಮತ್ತು ತ್ರಿಶಾ ಅಭಿನಯದ ತಮಿಳು ಥ್ರಿಲ್ಲರ್ ಸಿನಿಮಾ ‘ಕರುಪ್ಪು’ ಇಂದು (ಮೇ 14) ಅದ್ದೂರಿಯಾಗಿ ಬಿಡುಗಡೆಯಾಗಿದೆ. ಆದರೆ ಸಿನಿಮಾ ನೋಡಲು ಬೆಳ್ಳಂಬೆಳಿಗ್ಗೆ ಚಿತ್ರಮಂದಿರಗಳ (Kollywood) ಮುಂದೆ ಸಾಲುಗಟ್ಟಿ ನಿಂತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಎದುರಾಗಿದೆ. ಚಿತ್ರದ ಮೊದಲ ದಿನದ ಬೆಳಗಿನ ಪ್ರದರ್ಶನಗಳನ್ನು ಯಾವುದೇ ಸ್ಪಷ್ಟ ಕಾರಣ ನೀಡದೆ ಚಿತ್ರತಂಡ ರದ್ದುಗೊಳಿಸಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿ ನೀಡಿದ ನಿರ್ಮಾಪಕರು
ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಎಸ್.ಆರ್. ಪ್ರಭು ಅವರು ಇಂದು ನಸುಕಿನ ಜಾವ 1 ಗಂಟೆಯ ಸುಮಾರಿಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಅನಿರೀಕ್ಷಿತ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಬೆಳಿಗ್ಗೆ 9 ಗಂಟೆಯ ಶೋಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಿ ಕ್ಷಮೆಯಾಚಿಸಿದ್ದಾರೆ. ಆದರೆ ಈ ಅಸ್ಪಷ್ಟ ಹೇಳಿಕೆಯಿಂದ ತೃಪ್ತರಾಗದ ಸೂರ್ಯ ಅಭಿಮಾನಿಗಳು, ನಿರ್ಮಾಪಕರ ವಿರುದ್ಧ ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ದೂರದ ಊರುಗಳಿಂದ ಮೊದಲ ಪ್ರದರ್ಶನ ನೋಡಲು ಬಂದಿದ್ದ ಜನರು, ಕೇವಲ ತಮಿಳುನಾಡು ಮಾತ್ರವೋ ಅಥವಾ ಕೇರಳದಲ್ಲೂ ಶೋ ರದ್ದಾಗಿದೆಯೇ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಹಲವರು ಕೆಲಸಕ್ಕೆ ರಜೆ ಹಾಕಿ ಬಂದಿದ್ದು, ಮಧ್ಯಾಹ್ನದ ಶೋಗಳಾದರೂ ನಡೆಯುತ್ತವೆಯೇ ಎಂದು ಸ್ಪಷ್ಟನೆ ನೀಡುವಂತೆ ನಿರ್ಮಾಪಕರನ್ನು ಒತ್ತಾಯಿಸಿದ್ದಾರೆ.
ಅನುಮತಿ ನೀಡಿದ್ದ ಸಿಎಂ
ವಿಶೇಷವೆಂದರೆ, ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರು ಈ ಚಿತ್ರದ 9 ಗಂಟೆಯ ಪ್ರದರ್ಶನಕ್ಕೆ ವಿಶೇಷ ಅನುಮತಿ ನೀಡಿದ್ದರು. ಇದಕ್ಕಾಗಿ ಎರಡು ದಿನಗಳ ಹಿಂದೆಯಷ್ಟೇ ಚಿತ್ರತಂಡವು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಹಾಕಿತ್ತು. ಸರ್ಕಾರದ ಅನುಮತಿ ಸಿಕ್ಕಿದ್ದರೂ ಸಹ ತಾಂತ್ರಿಕ ಅಥವಾ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೆ ಪ್ರದರ್ಶನ ಘೋಷಿಸಿದ್ದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರ್.ಜೆ. ಬಾಲಾಜಿ ನಿರ್ದೇಶನದ ಈ ಚಿತ್ರವನ್ನು ಡ್ರೀಮ್ ವಾರಿಯರ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಸದ್ಯ ಬಿಡುಗಡೆಯ ಮೊದಲ ದಿನವೇ ಎದುರಾದ ಈ ಗೊಂದಲಗಳು ಚಿತ್ರದ ಮೇಲೆ ತುಸು ಪರಿಣಾಮ ಬೀರುವ ಸಾಧ್ಯತೆ ಇದೆ. ಸಂಜೆಯ ಹೊತ್ತಿಗೆ ಪರಿಸ್ಥಿತಿ ಸುಧಾರಿಸಿ ಎಲ್ಲಾ ಕಡೆ ಪ್ರದರ್ಶನ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರಪ್ರೇಮಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: ಮತ್ತೆ ತೆರೆ ಮೇಲೆ ಬರಲಿದೆ ‘ಸ್ಕ್ಯಾಮ್ 3’, ಇಲ್ಲಿದೆ ಮಾಹಿತಿ
