ಚೆನ್ನೈ: ತಮಿಳುನಾಡಿನ (Tamil Nadu) ನೂತನ ಮುಖ್ಯಮಂತ್ರಿಯಾಗಿ ಮೇ 10ರಂದು ಪ್ರಮಾಣ ವಚನ ಸ್ವೀಕರಿಸಿದ ಸಿ. ಜೋಸೆಫ್ ವಿಜಯ್ ನೇತೃತ್ವದ ಸಚಿವ ಸಂಪುಟದ ಸದಸ್ಯರ ಖಾತೆ ಹಂಚಿಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಮುಖ್ಯಮಂತ್ರಿಯವರ ಶಿಫಾರಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಲೋಕಭವನದಿಂದ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಬಳಿಯೇ ಗೃಹ ಇಲಾಖೆ, ಪೊಲೀಸ್, ಐಎಎಸ್, ಐಪಿಎಸ್ ಮತ್ತು ಭಾರತೀಯ ಅರಣ್ಯ ಸೇವೆಯಂತಹ ಅತ್ಯಂತ ಪ್ರಮುಖ ಖಾತೆಗಳನ್ನು ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಜಿಲ್ಲಾ ಕಂದಾಯ ಅಧಿಕಾರಿಗಳು, ವಿಶೇಷ ಕಾರ್ಯಕ್ರಮ ಅನುಷ್ಠಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನ ಕಲ್ಯಾಣ, ವೃದ್ಧರು ಮತ್ತು ವಿಕಲಚೇತನರ ಕಲ್ಯಾಣ, ಪೌರಾಡಳಿತ ಹಾಗೂ ನಗರಾಭಿವೃದ್ಧಿ ಮತ್ತು ಜಲಮಂಡಳಿ ಖಾತೆಗಳ ಜವಾಬ್ದಾರಿಯನ್ನೂ ಮುಖ್ಯಮಂತ್ರಿಯವರೇ ನಿರ್ವಹಿಸಲಿದ್ದಾರೆ.
ಸಚಿವ ಸಂಪುಟದಲ್ಲಿ ದ್ವಿತೀಯ ಸ್ಥಾನದಲ್ಲಿರುವ ಹಿರಿಯ ನಾಯಕ ಎನ್. ಆನಂದ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಇಲಾಖೆಯನ್ನು ನೀಡಲಾಗಿದೆ. ಇನ್ನುಳಿದಂತೆ ಆಧವ್ ಅರ್ಜುನ ಅವರಿಗೆ ಲೋಕೋಪಯೋಗಿ ಇಲಾಖೆ (ಕಟ್ಟಡಗಳು, ಹೆದ್ದಾರಿಗಳು ಮತ್ತು ಸಣ್ಣ ಬಂದರುಗಳು) ಹಾಗೂ ಕ್ರೀಡಾ ಕ್ಷೇತ್ರದ ಜವಾಬ್ದಾರಿ ವಹಿಸಲಾಗಿದೆ. ಮಾಜಿ ಐಆರ್‌ಎಸ್ (IRS) ಅಧಿಕಾರಿ ಕೆ.ಜಿ. ಅರುಣ್‌ರಾಜ್ ಅವರಿಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ನೀಡಲಾಗಿದ್ದರೆ, ಕೆ.ಎ. ಸೆಂಗೊಟ್ಟೈಯನ್ ಅವರಿಗೆ ಹಣಕಾಸು ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ. ಮೈಲಾಪುರ ಕ್ಷೇತ್ರದ ಶಾಸಕ ಪಿ. ವೆಂಕಟರಮಣನ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ರಕ್ಷಣೆ ಹಾಗೂ ಬೆಲೆ ನಿಯಂತ್ರಣ ಇಲಾಖೆ ಸಿಕ್ಕಿದೆ. ಇನ್ನು ಆರ್. ನಿರ್ಮಲಕುಮಾರ್ ಅವರಿಗೆ ಇಂಧನ, ಕಾನೂನು, ನ್ಯಾಯಾಲಯಗಳು, ಕಾರಾಗೃಹಗಳು, ಭ್ರಷ್ಟಾಚಾರ ತಡೆ ಹಾಗೂ ವಿಧಾನಸಭಾ ವ್ಯವಹಾರಗಳ ಖಾತೆಗಳನ್ನು ನೀಡಲಾಗಿದ್ದು, ರಾಜ್‌ಮೋಹನ್ ಅವರಿಗೆ ಶಾಲಾ ಶಿಕ್ಷಣ, ತಮಿಳು ಅಭಿವೃದ್ಧಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಒಲಿದಿದೆ. ಟಿ.ಕೆ. ಪ್ರಭು ಅವರಿಗೆ ನೈಸರ್ಗಿಕ ಸಂಪನ್ಮೂಲ ಹಾಗೂ ಎಸ್. ಕೀರ್ತನಾ ಅವರಿಗೆ ಕೈಗಾರಿಕಾ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.
ಕಾಂಗ್ರೆಸ್ ಶಾಸಕರಿಗೂ ಅವಕಾಶ
ಇದೇ ವೇಳೆ ತಮಿಳುನಾಡು ರಾಜಕಾರಣದಲ್ಲಿ ಮತ್ತೊಂದು ಐತಿಹಾಸಿಕ ಬೆಳವಣಿಗೆಯೂ ನಡೆಯುತ್ತಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲಿದ್ದಾರೆ. ಈ ವಿಸ್ತರಣೆಯ ವೇಳೆ ತಮಿಳುನಾಡು ವೆಟ್ರಿ ಕಳಗಂ (TVK) ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಸಚಿವರಾಗಿ ಸೇರ್ಪಡೆಯಾಗಲಿದ್ದಾರೆ. ಇದರೊಂದಿಗೆ 1967ರ ನಂತರ, ಅಂದರೆ ಬರೋಬ್ಬರಿ 59 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷವು ತಮಿಳುನಾಡಿನಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಭಾಗಿಯಾಗುತ್ತಿದೆ. ಮೇ 10ರಂದು ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೇ ಕಾಂಗ್ರೆಸ್‌ಗೆ ಸಚಿವ ಸ್ಥಾನದ ಆಫರ್ ನೀಡಲಾಗಿತ್ತಾದರೂ, ನಿಗದಿತ ಸಮಯದಲ್ಲಿ ಹೆಸರುಗಳನ್ನು ಅಂತಿಮಗೊಳಿಸಲು ಸಾಧ್ಯವಾಗದ ಕಾರಣ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಅವಕಾಶವನ್ನು ಕಾಂಗ್ರೆಸ್ ಕೈತಪ್ಪಿಸಿಕೊಂಡಿತ್ತು.
ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ, ಸಾಮಾನ್ಯ ಕ್ಷೇತ್ರದಿಂದ ಗೆದ್ದಿರುವ ದಲಿತ ನಾಯಕ ಪಿ. ವಿಶ್ವನಾಥನ್ ಮತ್ತು ಶಾಸಕಾಂಗ ಪಕ್ಷದ ನಾಯಕ ರಾಜೇಶ್ ಕುಮಾರ್ ಅವರ ಹೆಸರುಗಳು ಸಚಿವ ಸ್ಥಾನದ ಮುಂಚೂಣಿಯಲ್ಲಿವೆ. ಒಂದು ವೇಳೆ ಟಿವಿಕೆ (TVK) ಪಕ್ಷವು ಮಹಿಳಾ ಪ್ರತಿನಿಧಿಗೆ ಆಗ್ರಹಿಸಿದರೆ, ಕಾಂಗ್ರೆಸ್‌ನಿಂದ ಗೆದ್ದಿರುವ ಏಕೈಕ ಮಹಿಳಾ ಶಾಸಕಿ ತಾರಹೈ ಕತ್ಬರ್ಟ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಹಿಂದೆ 2006ರಲ್ಲಿ ಡಿಎಂಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದರೂ ಅಧಿಕಾರ ಹಂಚಿಕೆ ಪಡೆಯಲು ವಿಫಲವಾಗಿದ್ದ ಕಾಂಗ್ರೆಸ್ ನಾಯಕರು, ಸದ್ಯ ವಿಜಯ್ ಅವರು ಸಮ್ಮಿಶ್ರ ಸರ್ಕಾರಕ್ಕೆ ಅಧಿಕಾರ ಹಂಚಿಕೆ ನೀಡುವ ಮೂಲಕ ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಇನ್ಮುಂದೆ ಕಮಿಷನ್ ರಾಜಕಾರಣದಿಂದ ಮುಕ್ತವಾಗಿ ಭ್ರಷ್ಟಾಚಾರ ರಹಿತ ಆಡಳಿತದತ್ತ ಸಾಗಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಭೋಜಶಾಲಾ ಮಂದಿರದಲ್ಲಿ ಮುಕ್ತವಾಗಿ ಪೂಜೆ ನೆರವೇರಿಸಿದ ಭಕ್ತರು!
