ಬೆಂಗಳೂರು: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮುಗಿಲುಮುಟ್ಟಿರುವ ಬೆನ್ನಲ್ಲೇ, ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ವಿವಾದವೊಂದು ಎದ್ದಿದೆ. ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಆರ್‌ಎಸ್‌ಎಸ್ (RSS) ಮಾದರಿಯಲ್ಲಿ ‘ಧ್ವಜ ಪ್ರಣಾಮ’ ಸಲ್ಲಿಸಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ವಿಧಾನ ಪರಿಷತ್ ಸದಸ್ಯ (ಎನ್‌ಆರ್) ಎನ್. ರವಿಕುಮಾರ್ (MLC Ravikumar) ವಿರುದ್ಧ ಕಾಂಗ್ರೆಸ್ (Congress) ನಾಯಕರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಏನಿದು ಆರ್‌ಎಸ್‌ಎಸ್ ಪ್ರಣಾಮ್?
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷರ ಹಾಗೂ ಪಕ್ಷದ ಪ್ರಧಾನ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಡಾ. ಉಮೇಶ್ ಜಾಧವ್ ಸೇರಿದಂತೆ ಹಲವು ಹಿರಿಯ ಮುಖಂಡರು ಉಪಸ್ಥಿತರಿದ್ದರು. ಧ್ವಜಾರೋಹಣ ನೆರವೇರಿದ ಬಳಿಕ ಎಲ್ಲ ನಾಯಕರು ರಾಷ್ಟ್ರಗೀತೆ ಗಾಯನಕ್ಕೆ ಶಿಸ್ತಿನಿಂದ ಸಾಕ್ಷಿಯಾದರು. ಆದರೆ, ಈ ಸಂದರ್ಭದಲ್ಲಿ ಎಂಎಲ್‌ಸಿ ಎನ್. ರವಿಕುಮಾರ್ ಅವರು ಸಾಮಾನ್ಯ ಶೈಲಿಯಲ್ಲಿ ನೇರವಾಗಿ ನಿಲ್ಲುವುದು ಅಥವಾ ಯೂನಿಫಾರ್ಮ್ ಶಿಷ್ಟಾಚಾರದ ಸಲ್ಯೂಟ್ ಮಾಡುವ ಬದಲಿಗೆ, ಆರ್‌ಎಸ್‌ಎಸ್ ಶಾಖೆಗಳಲ್ಲಿ ಮಾಡುವಂತೆ ಎದೆಯ ಭಾಗದಲ್ಲಿ ಕೈಯಿಟ್ಟು ಸಂಘಪರಿವಾರದ ‘ಧ್ವಜ ಪ್ರಣಾಮ’ ಭಂಗಿಯಲ್ಲಿ ಗೌರವ ಸಲ್ಲಿಸಿದರು ಎನ್ನಲಾದ ದೃಶ್ಯಾವಳಿಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಸಂದರ್ಭದಲ್ಲಿ RSS salute ಮಾಡಿದ ಬಿಜೆಪಿ MLC ರವಿಕುಮಾರ್ ಮೇಲೆ ಕಾಂಗ್ರೆಸ್ ನಾಯಕರು ಪೊಲೀಸ್ ಕಂಪ್ಲೆಂಟ್ ದಾಖಲಿಸಿದ್ದಾರೆ. pic.twitter.com/8S7uBxf81K
— 👑Che_ಕೃಷ್ಣ🇮🇳💛❤️ (@ChekrishnaCk) August 17, 2026
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹಬ್ಬ ಹಾಗೂ ಧ್ವಜಾರೋಹಣದ ವೇಳೆ ದೇಶದ ಧ್ವಜ ಸಂಹಿತೆ (Flag Code of India) ಮತ್ತು ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ರವಿಕುಮಾರ್ ಅವರು ರಾಷ್ಟ್ರಧ್ವಜಕ್ಕೆ ನೀಡಬೇಕಾದ ಗೌರವದ ನಿಯಮಗಳನ್ನು ಬದಿಗೊತ್ತಿ, ಸಂಘಪರಿವಾರದ ಶೈಲಿಯಲ್ಲಿ ಸಲ್ಯೂಟ್ ಮಾಡುವ ಮೂಲಕ ಧ್ವಜ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ನಿಯೋಗ ಆರೋಪಿಸಿದೆ.
ರಾಷ್ಟ್ರದ ಸಾಂವಿಧಾನಿಕ ಸಂಕೇತಗಳಿಗಿಂತಲೂ ಸಂಘದ ನೀತಿ-ನಿಯಮಗಳೇ ದೊಡ್ಡದು ಎಂಬಂತೆ ನಡೆದುಕೊಂಡಿರುವುದು ದೇಶಪ್ರೇಮಕ್ಕೆ ಮಾಡುವ ಅಪಮಾನ ಎಂದು ದೂರಿದ ಕಾಂಗ್ರೆಸ್ ನಾಯಕರು, ಎನ್. ರವಿಕುಮಾರ್ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ಮಲ್ಲೇಶ್ವರಂ ಪೊಲೀಸರು ದೂರನ್ನು ಸ್ವೀಕರಿಸಿದ್ದು, ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ರಾಜ್ಯ ರಾಜಕೀಯ ಅಂಗಳದಲ್ಲಿ ಧ್ವಜ ಸಂಹಿತೆ ಮತ್ತು ರಾಷ್ಟ್ರೀಯ ಶಿಷ್ಟಾಚಾರದ ಕುರಿತು ಹೊಸ ಬಿಸಿಯಾದ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಏಕವಚನ ಬಳಕೆ: ಬಿ.ಎಲ್. ಸಂತೋಷ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಕಿಡಿ
