ಮುಂಬೈ: ಶ್ರೀಲಂಕಾ ವಿರುದ್ಧ ಶೀಘ್ರದಲ್ಲೇ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಭಾರತ ತಂಡಕ್ಕೆ ಭರ್ಜರಿ ಪುನರಾಗಮನ ಮಾಡಿದ್ದರೆ, ಅನ್‌ಕ್ಯಾಪ್ಡ್ ಆಟಗಾರ ಸಾರಂಶ್ ಜೈನ್ ಚೊಚ್ಚಲ ಬಾರಿಗೆ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಆಲ್‌ರೌಂಡರ್ ಸಾರಂಶ್ ಜೈನ್ ಅವರಿಗೆ ಅವಕಾಶ
ಇತ್ತೀಚೆಗೆ ನಡೆದ ಐಪಿಎಲ್ ವೇಳೆ ಮೊಣಕೈ ಗಾಯಕ್ಕೆ ತಾರಗಾಗಿದ್ದ ರವೀಂದ್ರ ಜಡೇಜಾ, ಸಂಪೂರ್ಣ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದು ಭಾರತದ ಸ್ಪಿನ್ ವಿಭಾಗಕ್ಕೆ ಹೆಚ್ಚಿನ ಬಲ ತಂದಿದೆ. ಇನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ತೊಡೆಸಂದಿ ಗಾಯಕ್ಕೆ ಒಳಗಾಗಿದ್ದ ವಾಷಿಂಗ್ಟನ್ ಸುಂದರ್ ಲಭ್ಯವಿಲ್ಲದ ಕಾರಣ, ಅವರ ಜಾಗಕ್ಕೆ ಮಧ್ಯಪ್ರದೇಶದ ಆಲ್‌ರೌಂಡರ್ ಸಾರಂಶ್ ಜೈನ್ ಅವರಿಗೆ ಅವಕಾಶ ನೀಡಲಾಗಿದೆ
ಮಧ್ಯಪ್ರದೇಶ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಾರಂಶ್ ಜೈನ್, ಇತ್ತೀಚೆಗೆ ಶ್ರೀಲಂಕಾ ‘ಎ’ ವಿರುದ್ಧದ ಸರಣಿಯಲ್ಲಿ ಭಾರತ ‘ಎ’ ತಂಡದ ಪರ ಅತ್ಯುತ್ತಮ ಆಟ ಪ್ರದರ್ಶಿಸಿದ್ದರು. 54 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಇವರು 181 ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ, ಬ್ಯಾಟಿಂಗ್‌ನಲ್ಲೂ 2,223 ರನ್‌ಗಳನ್ನು ಕಲೆಹಾಕಿ ಉಪಯುಕ್ತ ಆಲ್‌ರೌಂಡರ್ ಎನಿಸಿಕೊಂಡಿದ್ದಾರೆ.
ನಾಲ್ಕು ದಿನಗಳ ಅಭ್ಯಾಸ ಪಂದ್ಯ
ಶ್ರೀಲಂಕಾ ವಿರುದ್ಧದ ಪ್ರಮುಖ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡ ಆಸ್ಟ್ 7 ರಿಂದ ಕೊಲಂಬೊದಲ್ಲಿ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ತಂಡದ ಪ್ರಮುಖ ಆಟಗಾರರಾದ ಜಸ್‌ಪ್ರೀತ್ ಬುಮ್ರಾ ಹಾಗೂ ಸಾಯಿ ಸುದರ್ಶನ್ ಅವರ ಆಯ್ಕೆಯು ಫಿಟ್‌ನೆಸ್ ಆಧಾರದ ಮೇಲೆ ನಿರ್ಧಾರವಾಗಲಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ಟೆಸ್ಟ್ ತಂಡ: ಶುಭಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ಸಾರಂಶ್ ಜೈನ್, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಸಾಯಿ ಸುದರ್ಶನ್, ಜಸ್‌ಪ್ರೀತ್ ಬುಮ್ರಾ.
ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್ 2026: ಜುಲೈ 26ರ ಭಾರತದ ಸ್ಪರ್ಧೆಗಳ ಸಂಪೂರ್ಣ ವಿವರ
