ನವದೆಹಲಿ: ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ‘ರಾಷ್ಟ್ರಗೌರವಕ್ಕೆ ಅಪಮಾನ ತಡೆ ತಿದ್ದುಪಡಿ ಮಸೂದೆ-2026’ ಮಂಡನೆಯನ್ನು ವಿರೋಧಿಸಿ ವಿರೋಧ ಪಕ್ಷಗಳು ಸದನದ ಬಾವಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದರಿಂದ, ಸಂಸತ್ತಿನ ಮುಂಗಾರು ಅಧಿವೇಶನದ ಶುಕ್ರವಾರದ ರಾಜ್ಯಸಭಾ (Rajya Sabha) ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ. ಸೋಮವಾರ ಆರಂಭವಾದ ಮುಂಗಾರು ಅಧಿವೇಶನದ ಮೊದಲ ದಿನದಿಂದಲೂ ವಿರೋಧ ಪಕ್ಷಗಳ ಸರಣಿ ಆಕ್ರೋಶ ಮತ್ತು ಗದ್ದಲದಿಂದಾಗಿ ಮೇಲ್ಮನೆಯಲ್ಲಿ ಯಾವುದೇ ಮಹತ್ವದ ಕಲಾಪಗಳು ನಡೆಯದಂತಾಗಿದೆ.
ಎರಡು ಬಾರಿ ಮುಂದೂಡಲ್ಪಟ್ಟ ಕಲಾಪ
ಶುಕ್ರವಾರ ಬೆಳಗ್ಗೆಯಿಂದಲೇ ಎರಡು ಬಾರಿ ಮುಂದೂಡಲ್ಪಟ್ಟಿದ್ದ ರಾಜ್ಯಸಭೆಯು ಮಧ್ಯಾಹ್ನ 2 ಗಂಟೆಗೆ ಧರಣಿ ಮುಂದುವರಿದ ನಡುವೆಯೇ ಸಮಾವೇಶಗೊಂಡಿತು. ಈ ವೇಳೆ ಉಪಸಭಾಪತಿ ಹರಿವಂಶ್ ಅವರು ‘ರಾಷ್ಟ್ರಗೌರವಕ್ಕೆ ಅಪಮಾನ ತಡೆ ತಿದ್ದುಪಡಿ ಮಸೂದೆ’ಯನ್ನು ಮಂಡಿಸುವಂತೆ ಗೃಹ ಇಲಾಖೆ ರಾಜ್ಯ ಸಚಿವ ನಿತ್ಯಾನಂದ್ ರೈ ಅವರಿಗೆ ಸೂಚಿಸಿದರು. ಎಡಪಕ್ಷಗಳು ಸೇರಿದಂತೆ ಇಡೀ ವಿರೋಧ ಪಕ್ಷಗಳ ಸದಸ್ಯರು ಈ ಮಸೂದೆ ಮಂಡನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರಾದರೂ, ಗದ್ದಲದ ನಡುವೆಯೇ ಧ್ವನಿ ಮತದ ಮೂಲಕ ವಿಧೇಯಕವನ್ನು ಮಂಡಿಸಲಾಯಿತು. ಆದರೆ, ಈ ಬಿಲ್ ಮೇಲಿನ ಚರ್ಚೆಯನ್ನು ಆರಂಭಿಸಲು ಸಭಾಪತಿಗಳು ಯತ್ನಿಸುತ್ತಿದ್ದಂತೆ ಪ್ರತಿಪಕ್ಷಗಳ ಸಂಸದರು ಮತ್ತಷ್ಟು ಹಠಕ್ಕೆ ಬಿದ್ದು ಘೋಷಣೆಗಳನ್ನು ಕೂಗಲಾರಂಭಿಸಿದರು. ನಿಯಂತ್ರಣಕ್ಕೆ ಬಾರದ ಗದ್ದಲದ ವಾತಾವರಣದಿಂದಾಗಿ ಸಭಾಪತಿಗಳು ಸದನವನ್ನು ಮುಂದೂಡಿದ್ದು, ಮೇಲ್ಮನೆಯು ಮುಂದಿನ ಸೋಮವಾರ ಮತ್ತೆ ಸಮಾವೇಶಗೊಳ್ಳಲಿದೆ.
ನಿಲ್ಲದ ವಿಪಕ್ಷಗಳ ಹೋರಾಟ
ಇದಕ್ಕೂ ಮುನ್ನ ಬೆಳಗ್ಗಿನ ಕಲಾಪದಲ್ಲೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ವಿರೋಧ ಪಕ್ಷಗಳು ಭಾರಿ ಹಂಗಾಮಾ ಸೃಷ್ಟಿಸಿದ್ದವು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಇಡೀ ಹಗರಣದ ವೈಫಲ್ಯದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮತ್ತೊಮ್ಮೆ ಪಟ್ಟು ಹಿಡಿದರು. ಖರ್ಗೆ ಅವರ ಈ ಬೇಡಿಕೆಗೆ ಆಡಳಿತಾರೂಢ ಎನ್‌ಡಿಎ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದರಿಂದಾಗಿ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಬೇಕಾಯಿತು. ಬೆಳಗ್ಗೆ 11 ಗಂಟೆಗೆ ಶೂನ್ಯವೇಳೆಯ ಕಲಾಪ ಕೈಗೆತ್ತಿಕೊಂಡಾಗಲೂ ಇದೇ ವಿಷಯವಾಗಿ ಗದ್ದಲ ಉಂಟಾಗಿ ಮೊದಲು ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಲ್ಪಟ್ಟಿತ್ತು. ಒಟ್ಟಾರೆಯಾಗಿ, ನೀಟ್ ಅಕ್ರಮದ ಕುರಿತಾದ ಪ್ರತಿಪಕ್ಷಗಳ ಬಿಗಿ ನಿಲುವು ಇಡೀ ವಾರದ ಕಲಾಪವನ್ನು ಸಂಪೂರ್ಣವಾಗಿ ನುಂಗಿಹಾಕಿದೆ.
ಇದನ್ನೂ ಓದಿ: ಪೇಪರ್ ಲೀಕ್ ಮಾಡಿದ್ರೆ 10 ವರ್ಷ ಜೈಲು, ₹10 ಕೋಟಿ ದಂಡ!: ಮೋದಿ ಸರ್ಕಾರದ ಹೊಸ ಕಾನೂನಿಗೆ ಫಾಸ್ಟ್ ಟ್ರ್ಯಾಕ್ ಬಲ
