ಕೆನಡಾ: ಇಲ್ಲಿನ ಎಡ್ಮಂಟನ್‌ನಲ್ಲಿ ಪಂಜಾಬ್ ಮೂಲದ 23 ವರ್ಷದ ಯುವತಿ ದಮನ್‌ಪ್ರೀತ್ ಕೌರ್ ಅವರನ್ನು ಆಕೆಯ ಮನೆಯಲ್ಲೇ ಕತ್ತು ಹಿರಚಿ ಕೊಲೆ ಮಾಡಿರುವ (Crime) ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಭಾರತೀಯ ಮೂಲದ ಪ್ರೇಮಿ ರಿತಿಶ್ ಕುಮಾರ್ (22) ಎಂಬಾತನನ್ನು ಕೆನಡಾ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ದ್ವಿತೀಯ ಹಂತದ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮೃತ ಯುವತಿ ಪಂಜಾಬ್‌ನ ಲೂಧಿಯಾನ ಜಿಲ್ಲೆಯ ಸಮ್ರಾಲಾ ಮೂಲದವರಾಗಿದ್ದಾರೆ.
ಏನಿದು ಪ್ರಕರಣ?
ಜುಲೈ 9 ರಂದು ಸಂಜೆ ಎಡ್ಮಂಟನ್‌ನ ಸಿಲ್ವರ್‌ಬೆರ್ರಿ ಪ್ರದೇಶದ ನಿವಾಸವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯೊಬ್ಬರು ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿದ್ದಾರೆ ಎಂಬ ಕರೆ ಆಧರಿಸಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 12 ರಂದು ಆಕೆ ಮೃತಪಟ್ಟಿದ್ದರು. ಜುಲೈ 14 ರಂದು ನಡೆದ ಶವಪರೀಕ್ಷೆಯ ವರದಿಯಲ್ಲಿ ಇದು ಹತ್ಯೆ ಎಂದು ವೈದ್ಯಕೀಯ ತಪಾಸಕರು ದೃಢಪಡಿಸಿದ್ದರು. ತನಿಖೆಯ ಹಿತದೃಷ್ಟಿಯಿಂದ ಸಾವು ಹೇಗಾಯಿತು ಎಂಬುದನ್ನು ಗೌಪ್ಯವಾಗಿಟ್ಟಿದ್ದ ಪೊಲೀಸರು, ಜುಲೈ 23 ರಂದು ಆಕೆಯನ್ನು ಕತ್ತು ಹಿರಚಿ ಕೊಲೆ ಮಾಡಲಾಗಿದೆ ಎಂದು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 22 ರಂದು ಆರೋಪಿ ರಿತಿಶ್ ಕುಮಾರ್‌ನನ್ನು ಬಂಧಿಸಲಾಗಿದ್ದು, ಇದೊಂದು ಆಪ್ತ ಸಂಬಂಧದಲ್ಲಿದ್ದಾಗ ನಡೆದ ಹತ್ಯೆ (ಇಂಟಿಮೇಟ್ ಪಾರ್ಟ್ನರ್ ಹೊಮಿಸೈಡ್) ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯದಲ್ಲಿ ಬೇರೆ ಯಾವುದೇ ಶಂಕಿತರ ಪಾತ್ರವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ದೇಣಿಗೆ ಸಂಗ್ರಹ ಅಭಿಯಾನ ಆರಂಭ
ಇನ್ನೊಂದೆಡೆ, ಮೃತ ದಮನ್‌ಪ್ರೀತ್ ಕೌರ್ ಅವರ ಮೃತದೇಹವನ್ನು ಭಾರತದಲ್ಲಿರುವ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲು ಹಣಕಾಸಿನ ನೆರವಿಗಾಗಿ ‘ಗೋಫಂಡ್’ ವೆಬ್‌ಸೈಟ್ ಮೂಲಕ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. ವಿದೇಶದಿಂದ ಮೃತದೇಹ ತರಲು ಬೇಕಾಗುವ ಸಾರಿಗೆ ಹಾಗೂ ಅಗತ್ಯ ದಾಖಲೆಗಳ ವೆಚ್ಚ ಕುಟುಂಬಕ್ಕೆ ಕಷ್ಟವಾಗಿರುವುದರಿಂದ ನೆರವಿಗೆ ಮನವಿ ಮಾಡಲಾಗಿದ್ದು, ನಿಗದಿತ 20,000 ಡಾಲರ್ ಗುರಿಯಲ್ಲಿ ಈಗಾಗಲೇ ಸುಮಾರು 19,000 ಡಾಲರ್‌ಗಿಂತಲೂ ಹೆಚ್ಚು ಮೊತ್ತ ಸಂಗ್ರಹವಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಬಿಎಂಟಿಸಿ ಪ್ರಯಾಣಿಕರೇ ಟಾರ್ಗೆಟ್: ‘ವಾಂತಿ ಗ್ಯಾಂಗ್’ ಇಬ್ಬರು ಕಳ್ಳರು ಪೊಲೀಸರ ವಶಕ್ಕೆ!
