ನವದೆಹಲಿ: ಎನರ್ಜಿ ಡ್ರಿಂಕ್ಸ್ (ಶಕ್ತಿ ವರ್ಧಕ ಪಾನೀಯ) ವಿಭಾಗದಲ್ಲಿ ಹೆಸರಾಂತ ಸಂಸ್ಥೆಯಾಗಿರುವ ಪೆಪ್ಸಿಕೋ ಸಂಸ್ಥೆಗೆ ದೆಹಲಿ ಹೈಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಪಾನೀಯಗಳ ಮೇಲೆ ‘ಎನರ್ಜಿ ಡ್ರಿಂಕ್’ (Energy Drink) ಎಂದು ಲೇಬಲ್ ಬಳಸಿ ಮಾರಾಟ ಮಾಡಲು ವಿಧಿಸಲಾಗಿರುವ ನಿಷೇಧವನ್ನು ತೆರವುಗೊಳಿಸಲು ನ್ಯಾಯಾಲಯ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮುಂದಿನ ಎರಡು ತಿಂಗಳಲ್ಲಿ ಕಂಪನಿಯ ಪ್ರಮುಖ ಪಾನೀಯಗಳ ಪೂರೈಕೆಯಲ್ಲಿ ತೀವ್ರ ಕೊರತೆ ಎದುರಾಗುವ ಭೀತಿ ಎದುರಾಗಿದೆ.
ಏನಿದು ಪ್ರಕರಣ?
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಜೂನ್ ತಿಂಗಳಲ್ಲಿ ಹೆಚ್ಚು ಕೆಫೀನ್ ಹೊಂದಿರುವ ಪಾನೀಯಗಳ ಮೇಲೆ ‘ಎನರ್ಜಿ ಡ್ರಿಂಕ್’ ಎಂಬ ಶೀರ್ಷಿಕೆ ಅಥವಾ ಲೇಬಲ್ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಕೆಫೀನ್ಯುಕ್ತ ಪಾನೀಯಗಳು ಆರೋಗ್ಯದ ಮೇಲೆ ಉಂಟುಮಾಡಬಹುದಾದ ದುಷ್ಪರಿಣಾಮಗಳ ಕುರಿತು ವ್ಯಕ್ತವಾದ ತೀವ್ರ ಕಳವಳಗಳ ಹಿನ್ನೆಲೆಯಲ್ಲಿ ಆಹಾರ ನಿಯಂತ್ರಣ ಮಂಡಳಿಯು ಈ ಪ್ರಮುಖ ತೀರ್ಮಾನವನ್ನು ಕೈಗೊಂಡಿತ್ತು. ಈ ಆದೇಶದ ವಿರುದ್ಧ ಪೆಪ್ಸಿಕೋ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿ, ಈ ಲೇಬಲ್ ಅಡಿಯಲ್ಲಿ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟ ಪುನರಾರಂಭಿಸಲು ಅನುಮತಿ ಕೋರಿತ್ತು. ಆದರೆ ನ್ಯಾಯಾಲಯವು ಕಂಪನಿಯ ಮನವಿಗೆ ಸದ್ಯಕ್ಕೆ ಯಾವುದೇ ಮಧ್ಯಂತರ ಉಪಶಮನ ನೀಡಲು ನಿರಾಕರಿಸಿದೆ.
ಕೋರ್ಟ್ನಲ್ಲಿ ಪೆಪ್ಸಿಕೋ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ ಅವರು, ನಿಯಂತ್ರಕರ ಈ ನಿರ್ಧಾರದಿಂದ ಕಂಪನಿಯ ವಿತರಣಾ ವ್ಯವಸ್ಥೆಗೆ ಭಾರಿ ಪೆಟ್ಟು ಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು. “ಇನ್ನೂ ಕೆಲವೇ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ನಮ್ಮ ಪಾನೀಯಗಳ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗಲಿದೆ. ನಮಗೆ ಹೊಸದಾಗಿ ಉತ್ಪಾದಿಸಲು ಅನುಮತಿ ಇಲ್ಲದಿದ್ದರೆ ದೇಶಾದ್ಯಂತ ನಮ್ಮ ಬ್ರ್ಯಾಂಡ್ಗಳು ಸಂಪೂರ್ಣವಾಗಿ ಸಿಗದಂತಾಗುತ್ತವೆ. ಆದರೆ, ಸ್ಪರ್ಧಿ ಸಂಸ್ಥೆಯಾದ ರೆಡ್ ಬುಲ್ಗೆ ಅನುಮತಿ ಸಿಕ್ಕಿದ್ದು, ಅವರು ಮಾರುಕಟ್ಟೆಯಲ್ಲಿ ಮುಕ್ತವಾಗಿ ಉತ್ಪಾದನೆ ಮತ್ತು ಮಾರಾಟ ಮುಂದುವರಿಸುತ್ತಿದ್ದಾರೆ. ನಮಗೆ ಮಾತ್ರ ಈ ನಿರ್ಬಂಧ ಮುಂದುವರಿದಿರುವುದು ಭಾರಿ ನಷ್ಟ ಉಂಟುಮಾಡುತ್ತಿದೆ” ಎಂದು ಕೋರ್ಟ್ ಗಮನಕ್ಕೆ ತಂದರು.
ಇನ್ನೊಂದೆಡೆ, ರೆಡ್ ಬುಲ್ ಸಂಸ್ಥೆಯು ಎಫ್ಎಸ್ಎಸ್ಎಐ ನೀಡಿರುವ ಈ ಆದೇಶದ ವಿರುದ್ಧ ಕಳೆದ ತಿಂಗಳು ನ್ಯಾಯಾಲಯದಿಂದ ಮಧ್ಯಂತರ ತಡೆಂಗಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಪೆಪ್ಸಿಕೋ, ಮಾನ್ಸ್ಟರ್ ಹಾಗೂ ರಿಲಯನ್ಸ್ ಕನ್ಸ್ಯೂಮರ್ನಂತಹ ಪ್ರಮುಖ ಸಂಸ್ಥೆಗಳು ಈಗಾಗಲೇ ತಯಾರಾಗಿರುವ ಹಾಗೂ ಹಳೆಯ ‘ಎನರ್ಜಿ ಡ್ರಿಂಕ್’ ಲೇಬಲ್ ಹೊಂದಿರುವ ದಾಸ್ತಾನನ್ನು ಮಾತ್ರ ಮಾರಾಟ ಮಾಡಲು ಸೀಮಿತಗೊಂಡಿವೆ. ಹೊಸದಾಗಿ ಅದೇ ಲೇಬಲ್ ಬಳಸಿ ಕ್ಯಾನ್ ಅಥವಾ ಬಾಟಲಿಗಳನ್ನು ಮುದ್ರಿಸಲು ಇವುಗಳಿಗೆ ಅವಕಾಶವಿಲ್ಲ. ಪೆಪ್ಸಿಕೋ ತನ್ನ ಕಂಪನಿಯ ಕ್ಯಾನ್ಗಳನ್ನು ಈಗಾಗಲೇ ಮುಂಚಿತವಾಗಿಯೇ ಮುದ್ರಿಸಿಕೊಂಡಿದ್ದು, ಹೊಸ ನಿಯಮಗಳಿಗೆ ತಕ್ಕಂತೆ ಲೇಬಲ್ ಬದಲಾಯಿಸಿ ಹೊಸದಾಗಿ ಪ್ರಕ್ರಿಯೆ ಆರಂಭಿಸುವುದು ಅತ್ಯಂತ ಸಂಕೀರ್ಣ ಹಾಗೂ ವೆಚ್ಚದಾಯಕ ಪ್ರಕ್ರಿಯೆಯಾಗಿದೆ ಎಂದು ಪೆಪ್ಸಿಕೋ ನ್ಯಾಯಪೀಠಕ್ಕೆ ತಿಳಿಸಿದೆ.
ಭಾರೀ ಕ್ರಾಂತಿ ಸೃಷ್ಟಿಸಿದ್ದ ಸ್ಟಿಂಗ್
ದೇಶದಲ್ಲಿ ‘ಎನರ್ಜಿ ಡ್ರಿಂಕ್ಸ್’ ಮಾರುಕಟ್ಟೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, 2017ರಲ್ಲಿ ಪೆಪ್ಸಿಕೋ ಸಂಸ್ಥೆಯು ಬಿಡುಗಡೆ ಮಾಡಿದ ‘ಸ್ಟಿಂಗ್’ ಪಾನೀಯವು ಈ ವಿಭಾಗದಲ್ಲಿ ಭಾರಿ ಕ್ರಾಂತಿಯನ್ನೇ ಸೃಷ್ಟಿಸಿತ್ತು. ಕೇವಲ 20 ರೂಪಾಯಿಯ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಿಗುತ್ತಿದ್ದ ಈ ಪಾನೀಯವು 15ರಿಂದ 19 ವರ್ಷದ ಯುವಜನತೆಯಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಅತಿಯಾದ ಜನಪ್ರಿಯತೆ ಗಳಿಸಿತ್ತು. ಇದರ ಜೊತೆಗೆ ಪೆಪ್ಸಿಕೋ ‘ಅಡ್ರಿನಲಿನ್ ರಶ್’ ಎಂಬ ಮತ್ತೊಂದು ಎನರ್ಜಿ ಡ್ರಿಂಕ್ ಕೂಡ ಮಾರಾಟ ಮಾಡುತ್ತಿದೆ. ಸದ್ಯ ಎಫ್ಎಸ್ಎಸ್ಎಐ ಮತ್ತು ಪೆಪ್ಸಿಕೋ ನಡುವಿನ ಈ ಕಾನೂನು ಸಮರವು, ದೇಶದ ಆಹಾರ ನಿಯಂತ್ರಣ ಸಂಸ್ಥೆಗೆ ಉತ್ಪನ್ನಗಳ ಲೇಬಲ್ ಹಾಗೂ ಗುಣಮಟ್ಟ ನಿಯಂತ್ರಿಸುವಲ್ಲಿ ಎಷ್ಟು ಪ್ರಮಾಣದ ಅಧಿಕಾರವಿದೆ ಎಂಬುದಕ್ಕೆ ಪ್ರಮುಖ ಪರೀಕ್ಷೆಯಾಗಿ ಪರಿಣಮಿಸಿದೆ. ನ್ಯಾಯಾಲಯವು ನಿಷೇಧದ ಕಾನೂನಾತ್ಮಕ ಅಂಶಗಳ ಕುರಿತು ಇನ್ನು ಸಂಪೂರ್ಣ ತೀರ್ಪು ನೀಡಬೇಕಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್ – ರಾಹುಲ್ ಗಾಂಧಿ ಪ್ರತಿಭಟನಾ ವೈಖರಿಗೆ ತೀವ್ರ ಅಸಮಾಧಾನ
