TOP NEWS

Mysuru: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಮೈಸೂರು ಕನ್ನಡ ವೇದಿಕೆ ಸಾಥ್: ಹಳೆಯ ಡಿಸಿ ಕಚೇರಿ ಎದುರು ಪ್ರತಿಭಟನೆ

Mysuru Kannada Vedike Stages Protest Outside Old DC Office Backing ASHA Workers Freedom Park Stir

ಮೈಸೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ (Mysuru) ಹೋರಾಟಕ್ಕೆ ಬೆಂಬಲ ಸೂಚಿಸಿ, ಮೈಸೂರು ಕನ್ನಡ ವೇದಿಕೆ ವತಿಯಿಂದ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ವೇದಿಕೆ ಅಧ್ಯಕ್ಷರಾದ ಎಸ್. ಬಾಲಕೃಷ್ಣ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನಾಕಾರರು ಹೇಳಿದ್ದೇನು?

ಆಶಾ ಕಾರ್ಯಕರ್ತೆಯರು ಕೋವಿಡ್ ಸಾಂಕ್ರಾಮಿಕ ಸಮಯದಿಂದ ಹಿಡಿದು ಇಂದಿನವರೆಗೂ ಹಳ್ಳಿ-ಹಳ್ಳಿಗೆ ಹೋಗಿ, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಲಸಿಕೆ, ಆರೋಗ್ಯ ತಪಾಸಣೆ, ಜನಜಾಗೃತಿ ಹೀಗೆ ಪ್ರತಿಯೊಂದು ಕೆಲಸದಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ. ತಮ್ಮ ಜೀವದ ಹಂಗು ತೊರೆದು ಜನರ ಸೇವೆ ಮಾಡುತ್ತಿರುವ ಅವರಿಗೆ ಇಂದಿಗೂ ಸರಿಯಾದ ಗೌರವಧನ ಹಾಗೂ ಸೌಲಭ್ಯಗಳು ಸಿಗುತ್ತಿಲ್ಲ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ಕಾಲದಲ್ಲಿ ಕಡಿಮೆ ಗೌರವಧನದಲ್ಲಿ ಕುಟುಂಬ ನಡೆಸುವುದು ಅಸಾಧ್ಯವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷರಾದ ಎಸ್. ಬಾಲಕೃಷ್ಣ ಅವರು, ಆಶಾ ಕಾರ್ಯಕರ್ತೆಯರು ನಮ್ಮ ಆರೋಗ್ಯದ ನಿಜವಾದ ಕಾವಲುಗಾರರು. ಅವರು ಇಲ್ಲದಿದ್ದರೆ ಗ್ರಾಮೀಣ ಆರೋಗ್ಯ ವ್ಯವಸ್ಥೆಯೇ ನಿಂತು ಹೋಗುತ್ತದೆ. ಸರ್ಕಾರ ಕೇವಲ ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದೆ. ಕೂಡಲೇ ಅವರಿಗೆ 15,000 ರೂ. ಗೌರವಧನ ನಿಗದಿ ಮಾಡಬೇಕು. ಅವರಿಗೆ ನಿವೃತ್ತಿ ಸೌಲಭ್ಯ, ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಚಿಮಾರಿ ಹಾಕಿದ ಎಸ್. ಬಾಲಕೃಷ್ಣ ಅವರು, ಚುನಾವಣೆ ಸಮಯದಲ್ಲಿ ಬಡವರ ಪರವಾಗಿ ಮಾತನಾಡುವ ಜನಪ್ರತಿನಿಧಿಗಳು ಈಗ ಆಶಾ ಅಕ್ಕಂದಿರ ಕಷ್ಟ ಕೇಳುತ್ತಿಲ್ಲ. ವಿಧಾನಸೌಧದಲ್ಲಿ ಕುಳಿತು ದೊಡ್ಡ ದೊಡ್ಡ ಮಾತನಾಡುವ ಬದಲು, ಒಮ್ಮೆ ಹಳ್ಳಿಗೆ ಬಂದು ಆಶಾ ಕಾರ್ಯಕರ್ತೆಯರ ಕಷ್ಟ ನೋಡಿ. ಅವರ ಬೆವರಿನ ದುಡಿಮೆಗೆ ಬೆಲೆ ಕೊಡಿ. ಇಲ್ಲದಿದ್ದರೆ ಜನರೇ ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಜನಪ್ರತಿನಿಧಿಗಳಿಗೂ ತೀವ್ರ ತರಾಟೆ ತೆಗೆದುಕೊಂಡ ಅವರು, ಮೈಸೂರಿನ ಸಂಸದರು, ಶಾಸಕರು, ಸಚಿವರು ಯಾರೂ ಈ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ. ಕೇವಲ ಕಚೇರಿಯಲ್ಲಿ ಕುಳಿತು ಫೋಟೋ ತೆಗೆಸಿಕೊಳ್ಳುವುದಲ್ಲ, ಜನರ ಸಮಸ್ಯೆಗೆ ಸ್ಪಂದಿಸಬೇಕು. ಆಶಾ ಅಕ್ಕಂದಿರ ಹೋರಾಟ ನ್ಯಾಯಯುತವಾದದ್ದು. ಅದಕ್ಕೆ ಎಲ್ಲಾ ಜನಪ್ರತಿನಿಧಿಗಳು ಬೆಂಬಲ ನೀಡಿ, ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಇನ್ನೂ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಮೈಸೂರು ಕನ್ನಡ ವೇದಿಕೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ಮಾಡಲಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಮೈಸೂರಿನಿಂದಲೇ ಬೃಹತ್ ಬೆಂಬಲ ನೀಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು. ಆಶಾ ಅಕ್ಕಂದಿರ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಸ್. ಬಾಲಕೃಷ್ಣ ಅವರು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಎಲ್.ಐ.ಸಿ ಸಿದ್ದಪ್ಪ, ಗೋವಿಂದರಾಜು, ಬೀಡ ಬಾಬು, ಹೊನಕೆರೆ ಸ್ವಾಮಿ, ಕಾವೇರಮ್ಮ, ಮಾಲಿನಿ, ರಮೇಶ್, ಗೋಪಿ, ಚಿನ್ನಪ್ಪ, ಶಿವೇಗೌಡ, ಹರೀಶ್, ಶಿವಕುಮಾರ್ ಸ್ವಾಮಿ, ಸಾಯಿ ಚಾಮರಾಜು, ಮಹದೇವ್, ಸುನಿಲ್, ಸ್ವಾಮಿ ಗೈಡ್, ಹರೀಶ್ ಕುಮಾರ್ ಮುಂತಾದವರಿದ್ದರು

ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ AIDSO ವಿದ್ಯಾರ್ಥಿಗಳು: ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ

Leave a Reply

Your email address will not be published. Required fields are marked *