TOP NEWS

Cyber Crime: ಟೆಲಿಗ್ರಾಂ ಮೂಲಕ ಪ್ರಾಡಕ್ಟ್ ಸ್ಕ್ರೀನ್‌ಶಾಟ್ ಜಾಲ: ದಿನಕ್ಕೆ ₹1,500 ಆಸೆಗೆ ಬಿದ್ದು ₹13.78 ಲಕ್ಷ ಹಣ ಕಳೆದುಕೊಂಡ ರೈತ

Cyber crime Product Screenshot Scam Traps Davangere Farmer 13 78 Lakh Lost After Fake Tax Demand

ದಾವಣಗೆರೆ: ಆನ್‌ಲೈನ್ ಮೂಲಕ ಸಾರ್ವಜನಿಕರನ್ನು ವಂಚಿಸುವ ಸೈಬರ್ ಖದೀಮರು ಹಣ ದೋಚಲು ಹೊಸದೊಂದು ತಂತ್ರ ಹೆಣೆದಿದ್ದಾರೆ. ಕೆಲವು ಉತ್ಪನ್ನಗಳನ್ನು (ಪ್ರಾಡಕ್ಟ್‌ಗಳನ್ನು) ವಿಶ್‌ಲಿಸ್ಟ್‌ನಲ್ಲಿ (Cyber Crime) ಸೇರಿಸಿ, ಅದರ ಸ್ಕ್ರೀನ್‌ಶಾಟ್ ತೆಗೆದು ಕಳುಹಿಸಿದರೆ ಸುಲಭವಾಗಿ ಹಣ ಗಳಿಸಬಹುದು ಎಂಬ ಆಮಿಷವೊಡ್ಡಿ ಜಾಲ ಬೀಸಿದ್ದಾರೆ. ಈ ವಂಚನೆಯ ಬಲೆಗೆ ಬಿದ್ದ ದಾವಣಗೆರೆಯ ಗ್ರಾಮಾಂತರ ಪ್ರದೇಶದ ರೈತರೊಬ್ಬರು ಬರೋಬ್ಬರಿ 13.78 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಟೆಲಿಗ್ರಾಂ ಸಂದೇಶ ಮತ್ತು ಸ್ಕ್ರೀನ್‌ಶಾಟ್ ಆಮಿಷ

ಅಕ್ಟೋಬರ್ 10ರಂದು ರೈತನ ಟೆಲಿಗ್ರಾಂ ಖಾತೆಗೆ ನೇಹಾ ಅಗರ್‌ವಾಲ್ ಎಂಬ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದ ವಂಚಕರು, ವಿಶ್‌ಲಿಸ್ಟ್ ಸ್ಕ್ರೀನ್‌ಶಾಟ್ ಹಂಚಿಕೊಳ್ಳುವ ಮೂಲಕ ಹಣ ಸಂಪಾದಿಸಬಹುದೆಂದು ತಿಳಿಸಿದ್ದರು. ಇದನ್ನು ನಂಬಿದ ರೈತ, ತಮಗೆ ಕಳುಹಿಸಲಾಗಿದ್ದ ಉತ್ಪನ್ನಗಳನ್ನು ವಿಶ್‌ಲಿಸ್ಟ್‌ನಲ್ಲಿ ಹಾಕಿ ಸ್ಕ್ರೀನ್‌ಶಾಟ್ ತೆಗೆದು ರವಾನಿಸಿದ್ದರು. ಪ್ರತಿದಿನ 30 ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಬೇಕು ಹಾಗೂ ಪ್ರತಿ ಸ್ಕ್ರೀನ್‌ಶಾಟ್‌ಗೆ 50 ರೂಪಾಯಿಯಂತೆ ದಿನಕ್ಕೆ 1,500 ರೂಪಾಯಿ ಸಂಭಾವನೆ ನೀಡುವುದಾಗಿ ವಂಚಕರು ಭರವಸೆ ನೀಡಿದ್ದರು.

ಲಿಂಕ್ ಮೂಲಕ ಮಾಹಿತಿ ಸಂಗ್ರಹ ಹಾಗೂ ನಂಬಿಕೆ ಗಿಟ್ಟಿಸಿದ ಖದೀಮರು

ರೈತ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ಬೆನ್ನಲ್ಲೇ, ನೇಹಾ ಅಗರ್‌ವಾಲ್ ಎಂಬಾಕೆಯಿಂದ ಒಂದು ಲಿಂಕ್ ಕಳುಹಿಸಿ ಅದನ್ನು ತೆರೆಯುವಂತೆ ಸೂಚಿಸಲಾಯಿತು. ಆ ಲಿಂಕ್ ಕ್ಲಿಕ್ ಮಾಡಿದಾಗ ಕೇಳಲಾದ ಎಲ್ಲಾ ವೈಯಕ್ತಿಕ ಹಾಗೂ ಅಗತ್ಯ ಮಾಹಿತಿಗಳನ್ನು ರೈತ ಅಪ್‌ಲೋಡ್ ಮಾಡಿದ್ದಾರೆ. ಆರಂಭದಲ್ಲಿ ರೈತನ ವಿಶ್ವಾಸ ಗಳಿಸುವ ಸಲುವಾಗಿ, ಸ್ಕ್ರೀನ್‌ಶಾಟ್ ಕಳುಹಿಸಿದ ಪ್ರತಿಫಲವಾಗಿ ಅವರ ಬ್ಯಾಂಕ್ ಖಾತೆಗೆ 5,146 ರೂಪಾಯಿಗಳನ್ನು ಜಮೆ ಮಾಡಿದ್ದಾರೆ. ಈ ಮೂಲಕ ತಾವು ನಿಜವಾಗಿಯೂ ಹಣ ನೀಡುತ್ತೇವೆ ಎಂದು ನಂಬಿಸಿ, ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಇನ್ನಷ್ಟು ದೊಡ್ಡ ಲಾಭ ಸಿಗುತ್ತದೆ ಎಂದು ಆಸೆ ತೋರಿಸಿದ್ದಾರೆ.

ಲಕ್ಷಾಂತರ ರೂಪಾಯಿ ಹೂಡಿಕೆ ಮತ್ತು ತೆರಿಗೆ ನೆಪದ ವಂಚನೆ

ವಂಚಕರ ಮಾತುಗಳಿಗೆ ಮರುಳಾದ ರೈತ, ಜುಲೈ 19ರಿಂದ ಸೆಪ್ಟೆಂಬರ್ 26ರ ಅವಧಿಯಲ್ಲಿ ಹಂತ-ಹಂತವಾಗಿ ಒಟ್ಟು 13.78 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ವಂಚಕರು ನೀಡಿದ್ದ ಲಿಂಕ್‌ನಲ್ಲಿ ರೈತನ ಒಟ್ಟು ಹೂಡಿಕೆಯ ಮೊತ್ತ 15 ಲಕ್ಷ ರೂಪಾಯಿ ಎಂದು ತೋರಿಸಲಾಗಿತ್ತು. ಆ ಹಣವನ್ನು ಹಿಂಪಡೆಯಲು ರೈತ ಮುಂದಾದಾಗ, 1.75 ಲಕ್ಷ ರೂಪಾಯಿ ತೆರಿಗೆ ಪಾವತಿಸಬೇಕು ಎಂದು ವಂಚಕರು ಬೇಡಿಕೆ ಇಟ್ಟಿದ್ದಾರೆ.

ಅಷ್ಟು ದೊಡ್ಡ ಮೊತ್ತದ ತೆರಿಗೆ ಕಟ್ಟಲು ತಮ್ಮಿಂದ ಸಾಧ್ಯವಿಲ್ಲ ಎಂದು ರೈತ ತಿಳಿಸಿದ ತಕ್ಷಣ, ವಂಚಕರು ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಆಗಲೇ ತಾವು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿರುವುದು ರೈತನಿಗೆ ಅರಿವಾಗಿದೆ. ತಕ್ಷಣವೇ ಎಚ್ಚೆತ್ತ ರೈತ, ದಾವಣಗೆರೆಯ ಸಿಇಎನ್ (CEN) ಪೊಲೀಸ್ ಠಾಣೆಗೆ ತೆರಳಿ ವಂಚಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು: ಮಹಜರು ವೇಳೆ ಹಲ್ಲೆಗೆ ಯತ್ನಿಸಿದ ಆರೋಪಿ ಪೆಟ್ಟಂ ಸುರೇಶ ಕಾಲಿಗೆ ಫೈರಿಂಗ್

Leave a Reply

Your email address will not be published. Required fields are marked *