TOP NEWS

Actor Dhanveer: ವಿಜಯಲಕ್ಷ್ಮಿ ಪಿಎ ನಿಂದನೆ ಪ್ರಕರಣ: ಆರ್‌ಆರ್ ನಗರ ಪೊಲೀಸ್ ಠಾಣೆಗೆ ನಟ ಧನ್ವೀರ್ ಹಾಜರು

Actor Dhanveer Gowda Appears Before RR Nagar Police for Questioning in Case Linked to Vijayalakshmi PA

ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಆಪ್ತ ಸಹಾಯಕ ನಾಗರಾಜ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ (Actor Dhanveer) ಕೊನೆಗೂ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್‌ಆರ್ ನಗರ) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಧನ್ವೀರ್ ಠಾಣೆಗೆ ಆಗಮಿಸಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

ಈ ಪ್ರಕರಣ ದಾಖಲಾದಾಗಿನಿಂದ ವಿಚಾರಣೆಗೆ ಹಾಜರಾಗದೆ ನಟ ಧನ್ವೀರ್ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ವಿಜಯಲಕ್ಷ್ಮಿ ಅವರೊಂದಿಗಿನ ವಿವಾದ ಮತ್ತು ಜಟಾಪಟಿಯ ಬಳಿಕ ಇದೇ ಮೊದಲ ಬಾರಿಗೆ ಧನ್ವೀರ್ ಬಹಿರಂಗವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಹೈಕೋರ್ಟ್‌ನಲ್ಲಿ ಹಿನ್ನಡೆ (Actor Dhanveer) ಬೆನ್ನಲ್ಲೇ ವಿಚಾರಣೆಗೆ ಹಾಜರು

ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಗಳಿಂದ ಪಾರಾಗಲು ಧನ್ವೀರ್ ಈ ಹಿಂದೆ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ತಮ್ಮ ಮೇಲಿದ್ದ ಮೂರು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯವು ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿ ಅರ್ಜಿಯನ್ನು ತಿರಸ್ಕರಿಸಿತ್ತು. ಹೈಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾದ ಕಾರಣ ಬೇರೆ ದಾರಿಯಿಲ್ಲದೆ ಧನ್ವೀರ್ ಪೊಲೀಸರ ನೋಟಿಸ್‌ಗೆ ಸ್ಪಂದಿಸಿ ವಿಚಾರಣೆಗೆ ಹಾಜರಾಗಿದ್ದಾರೆ. ಬುಧವಾರ ರಾತ್ರಿ ಆರ್‌ಆರ್ ನಗರ ಠಾಣೆಗೆ ಆಗಮಿಸಿದ ಅವರನ್ನು ಪೊಲೀಸರು ಬರೋಬ್ಬರಿ ಮೂರು ಗಂಟೆಗಳ ಕಾಲ ಸುದೀರ್ಘವಾಗಿ ವಿಚಾರಣೆ ನಡೆಸಿದ್ದು, ಬಳಿಕ ತಡರಾತ್ರಿ ಠಾಣೆಯಿಂದ ಹೊರಬಂದಿದ್ದಾರೆ.

ಉಳಿದ ಎರಡು ಠಾಣೆಗಳಲ್ಲೂ ವಿಚಾರಣೆ ಬಾಕಿ

ನಟ ಧನ್ವೀರ್ ವಿರುದ್ಧ ಕೇವಲ ಆರ್‌ಆರ್ ನಗರ ಮಾತ್ರವಲ್ಲದೆ, ಚಾಮರಾಜಪೇಟೆ ಹಾಗೂ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗಳಲ್ಲೂ ಪ್ರತ್ಯೇಕ ದೂರುಗಳು ದಾಖಲಾಗಿವೆ. ಸದ್ಯ ರಾಜರಾಜೇಶ್ವರಿ ನಗರ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಹಂತದ ವಿಚಾರಣೆಯನ್ನು ಪೂರ್ಣಗೊಳಿಸಿರುವ ಧನ್ವೀರ್, ಮುಂದಿನ ದಿನಗಳಲ್ಲಿ ಚಾಮರಾಜಪೇಟೆ ಮತ್ತು ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರ ಮುಂದೆಯೂ ವಿಚಾರಣೆಗೆ ಹಾಜರಾಗಬೇಕಿದೆ. ಒಟ್ಟಾರೆ ಹೈಕೋರ್ಟ್ ಆದೇಶದ ನಂತರ ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಕ್ಕಂತಾಗಿದೆ.

ಇದನ್ನೂ ಓದಿ: ಲಕ್ಷ್ಮೀ ಪೂಜೆ ಹೆಸರಿನಲ್ಲಿ ಯುವತಿಯರಿಗೆ ವಂಚನೆ ಕೇಸ್: ಕಿಂಗ್‌ಪಿನ್ ಅರ್ಚಕ ಬಂಧನ

Leave a Reply

Your email address will not be published. Required fields are marked *