ಬೆಂಗಳೂರು: ‘ಬಿಗ್ ಬಾಸ್ ಕನ್ನಡ 13’ ರಿಯಾಲಿಟಿ ಶೋನಲ್ಲಿ ‘ಸೀತಾ ರಾಮ’ ಮತ್ತು ‘ಮಂಗಳಗೌರಿ ಮದುವೆ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಗಗನ್ ಚಿನ್ನಪ್ಪ (Gagan Chinnappa) ಭಾಗವಹಿಸಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ಗಗನ್ ಚಿನ್ನಪ್ಪ ಅವರ ಆಟಕ್ಕೆ ಮೆಚ್ಚುಗೆಯ ಚಪ್ಪಾಳೆ ತಟ್ಟಿ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಗಗನ್ ಚಿನ್ನಪ್ಪ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಬಹಳ ಆತ್ಮೀಯ ಒಡನಾಟವಿದೆ ಎಂಬ ವಿಚಾರ ಸದ್ಯ ಸುದ್ದಿಯಲ್ಲಿದೆ. ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗಗನ್, ಈ ಹಿಂದೆ ‘ರಾಜೇಶ್ ರಿವೀಲ್ಸ್’ ಯೂಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ಹಲವು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು.
ಮೊದಲ ಭೇಟಿ ಮತ್ತು ಗಿರಿನಗರದ ಡ್ರಾಪ್ ನೆನಪು
ಹೈಸ್ಕೂಲ್ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದುಳಿಯುತ್ತಿದ್ದ ಗಗನ್ ಅವರನ್ನು ತಾಯಿ ಏರೋಬಿಕ್ಸ್ ತರಗತಿಗೆ ಸೇರಿಸಿದ್ದರಂತೆ. ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಏರೋಬಿಕ್ಸ್ ಕ್ಲಾಸ್ಗೆ ಹೋದ ಸಮಯದಲ್ಲೇ ದರ್ಶನ್ ಅಲ್ಲಿಗೆ ಬಂದಿದ್ದರಂತೆ. ಆಗ ‘ಲಂಕೇಶ್ ಪತ್ರಿಕೆ’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತಾಗಿದ್ದು, ಗಗನ್ ಅವರನ್ನು ಕಂಡರೆ ದರ್ಶನ್ ಅವರಿಗೆ ತುಂಬಾ ಇಷ್ಟವಾಗುತ್ತಿತ್ತಂತೆ. ಆ ಹುಡುಗ ಎಲ್ಲಿ, ಇನ್ನೂ ಬಂದಿಲ್ವಾ ಎಂದು ವಿಚಾರಿಸುತ್ತಿದ್ದರಲ್ಲದೆ, ಕಾರ್ಡ್ ರೋಡ್ ಬಳಿ ಕ್ರಿಕೆಟ್ ಆಡಲು ಬಂದಾಗ ತಾವೇ ಗಗನ್ ಅವರನ್ನು ಗಿರಿನಗರಕ್ಕೆ ಡ್ರಾಪ್ ಮಾಡುತ್ತಿದ್ದರು ಎಂದು ಗಗನ್ ಸ್ಮರಿಸಿದ್ದಾರೆ.
‘ಆಲ್ವಿಸ್’ ಗಿಳಿ ಮತ್ತು ‘ಅಂಕಲ್’ ಎಂಬ ಕರೆ
ದರ್ಶನ್ ಅವರ ಬಳಿ ಆಗ ‘ಆಲ್ವಿಸ್’ ಹೆಸರಿನ ಗಿಳಿಯೊಂದು ಇತ್ತಂತೆ. ಸಿಂಗಾಪುರದಿಂದ ಸುಮಾರು 3.5 ಲಕ್ಷ ರೂಪಾಯಿ ನೀಡಿ ಆ ಗಿಳಿಯನ್ನು ತರಿಸಿದ್ದ ದರ್ಶನ್, ಸಿಯಾರಾ ಕಾರಿನಲ್ಲಿ ಗಿಳಿಯನ್ನು ಬಿಟ್ಟು ಗಗನ್ ಕಡೆಗೆ ಕಚ್ಚುವಂತೆ ಬಿಡುತ್ತಾ ತಮಾಷೆ ಮಾಡುತ್ತಿದ್ದರಂತೆ.
ತಮಗೆ ದರ್ಶನ್ ಬಹಳ ಆಪ್ತರು ಎಂದು ಸ್ನೇಹಿತರಲ್ಲಿ ಹೇಳಿಕೊಳ್ಳುತ್ತಿದ್ದ ಗಗನ್, ದರ್ಶನ್ ಅವರನ್ನು ‘ಅಂಕಲ್’ ಎಂದೇ ಕರೆಯುತ್ತಿದ್ದರಂತೆ. ಡ್ರಾಪ್ ಮಾಡಲು ಬಂದಾಗ ಗಗನ್ ಸ್ನೇಹಿತರೆಲ್ಲಾ ಸಾಲಾಗಿ ನಿಲ್ಲುತ್ತಿದ್ದರಂತೆ. ಆಗ ಗಗನ್ ಅವರು ದರ್ಶನ್ ಬಳಿ ತಮ್ಮ ಸ್ನೇಹಿತರಿಗೆ ಹಾಯ್ ಹೇಳುವಂತೆ ಕೇಳಿದಾಗ, ದರ್ಶನ್ ಅವರು ಖುಷಿಯಿಂದಲೇ ಕೈಬೀಸಿ ಹಾಯ್ ಹೇಳುತ್ತಿದ್ದರು ಎಂದು ಗಗನ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
‘ಮಂಡ್ಯ’ ಶೂಟಿಂಗ್ ವೇಳೆ ನಡೆದ ತಮಾಷೆಯ ಪ್ರಸಂಗ
ದರ್ಶನ್ ಅವರ ಸಿಗರೇಟ್ ಪ್ಯಾಕ್ ಎತ್ತಿಟ್ಟುಕೊಂಡು ಎಷ್ಟು ಸೇದುತ್ತೀರಾ ಅಂಕಲ್ ಎಂದು ಪ್ರಶ್ನಿಸಿದ್ದಾಗ, ದರ್ಶನ್ ಅವರು ನಗುತ್ತಲೇ ಇಪ್ಪತ್ತೈದು ವರ್ಷವಾಗಲಿ, ನೀನೂ ಸೇದುತ್ತೀಯಾ ಎಂದು ತಮಾಷೆ ಮಾಡಿದ್ದರಂತೆ. ದರ್ಶನ್ ಅವರು ತುಂಬಾ ಜೋವಿಯಲ್ ಸ್ವಭಾವದ ವ್ಯಕ್ತಿ ಎಂದು ಗಗನ್ ಬಣ್ಣಿಸಿದ್ದಾರೆ.
ಕಾಲೇಜು ದಿನಗಳಲ್ಲಿ ಬಸವನಗುಡಿಯಲ್ಲಿ ‘ಮಂಡ್ಯ’ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ, ದರ್ಶನ್ ತಮಗೆ ಚೆನ್ನಾಗಿ ಗೊತ್ತು ಎಂದು ಹೇಳಿದರೂ ಪ್ರದೀಪ್, ನವೀನ, ಶ್ರೀಕಾಂತ್ ಮತ್ತು ಶರತ್ ಸೇರಿದಂತೆ ಸ್ನೇಹಿತರು ನಂಬಿರಲಿಲ್ಲವಂತೆ. ಹಾಗಾಗಿ ಸ್ನೇಹಿತರನ್ನು ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಗಗನ್, ಅಲ್ಲಿ ಮೊದಲ ಬಾರಿಗೆ ನಟ ದಿಗಂತ್ ಅವರನ್ನು ನೋಡಿದ್ದರಂತೆ. ಜನರ ನಡುವೆ ನಿಂತಿದ್ದ ಗಗನ್ ಅವರನ್ನು ಕಂಡ ದರ್ಶನ್, ಇಲ್ಲಿ ಏನು ಮಾಡುತ್ತಿದ್ದೀಯಾ, ಕ್ಲಾಸ್ ಇಲ್ವಾ ಎಂದು ಕೇಳಿದರಂತೆ. ಸ್ನೇಹಿತರು ನಂಬುತ್ತಿಲ್ಲ ಎಂದು ಗಗನ್ ಹೇಳಿದಾಗ, ಇವನು ನಮ್ಮ ಹುಡುಗ ಎಂದು ಹೇಳಿ ಎಲ್ಲರನ್ನೂ ಕೂರಿಸಿ ದರ್ಶನ್ ಊಟ ಹಾಕಿಸಿದ್ದರಂತೆ.
ಆಗ ದರ್ಶನ್ ಅವರೇ ತಮಗೆ ರೋಲ್ ಮಾಡೆಲ್ ಆಗಿದ್ದರು ಮತ್ತು ಬೆಳೆಯುವುದಾದರೆ ಹೀಗೆ ಬೆಳೆಯಬೇಕು ಎಂಬ ಹುಮ್ಮಸ್ಸು ಬಂದಿದ್ದೇ ಅವರಿಂದ ಎಂದು ಗಗನ್ ಹೇಳಿದ್ದರು. ಈ ಹಳೆಯ ಸಂದರ್ಶನದ ತುಣುಕುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳು ಅವುಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ‘ಕಿರಾತಕ’ ಸೀಕ್ವೆಲ್ ಮಾಡುವ ಆಸೆ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್: ಸಂದರ್ಶನದಲ್ಲಿ ಹಳೆಯ ದಿನಗಳನ್ನು ನೆನೆದ ನಟ
