ಬೆಂಗಳೂರು: ಮಾಸಿಕ ಗೌರವಧನವನ್ನು 15 ಸಾವಿರ ರೂಪಾಯಿಗೆ ಹೆಚ್ಚಿಸಬೇಕು (Big News) ಎಂದು ಒತ್ತಾಯಿಸಿ ಕಳೆದ 10 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಒತ್ತಾಯಕ್ಕೆ ಆರೋಗ್ಯ ಇಲಾಖೆ ಕೊನೆಗೂ ಸ್ಪಂದಿಸಿದೆ. ಕಾರ್ಯಕರ್ತೆಯರ ಇನ್ಸೆಂಟೀವ್ (ಪ್ರೋತ್ಸಾಹ ಧನ) ಹೆಚ್ಚಳ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಆರೋಗ್ಯ ಸಚಿವರ ನಿರ್ದೇಶನದ ಮೇರೆಗೆ ಈ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಆಶಾ ಕಾರ್ಯಕರ್ತೆಯರು ಮಾಡುವ ಕೆಲಸದ ಆಧಾರದ ಮೇಲೆ ಇನ್ಸೆಂಟೀವ್ ಹೆಚ್ಚಿಸುವ ಕುರಿತು ಚರ್ಚೆ ನಡೆದಿದೆ. ದುಡಿಮೆಗೆ ತಕ್ಕಂತೆ ಸೂಕ್ತ ವೇತನ ನೀಡಬೇಕು ಎಂಬ ತಜ್ಞರ ಸಲಹೆಯ ಹಿನ್ನೆಲೆಯಲ್ಲಿ, ಎಲ್ಲಾ ಆಶಾ ಕಾರ್ಯಕರ್ತೆಯರ ಇನ್ಸೆಂಟೀವ್ ಹೆಚ್ಚಿಸುವ ಅವಕಾಶಗಳ ಬಗ್ಗೆ ಸಮಿತಿ ವರದಿ ನೀಡಲಿದೆ.
ಸಿಎಂ ರಾಜಕೀಯ ಸಲಹೆಗಾರರೊಂದಿಗೆ ಮಹತ್ವದ ಸಭೆ
ಈ ಬೆಳವಣಿಗೆಗಳ ನಡುವೆ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪ್ರಧಾನ ಸಲಹೆಗಾರ ಜಿ.ಸಿ. ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ. ಸಭೆಯ ವೇಳೆ ಗೌರವಧನವನ್ನು 15 ಸಾವಿರ ರೂಪಾಯಿಗೆ ಏರಿಸುವಂತೆ ಲಿಖಿತ ಮನವಿ ಸಲ್ಲಿಸಿದ್ದಲ್ಲದೆ, ಇತರ ಪ್ರಮುಖ ಬೇಡಿಕೆಗಳ ಪಟ್ಟಿಯನ್ನೂ ನೀಡಲಾಗಿದೆ. ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಚಂದ್ರಶೇಖರ್ ಭರವಸೆ ನೀಡಿದ್ದು, ನಾಳೆ ಮುಖ್ಯಮಂತ್ರಿಗಳ ಜೊತೆ ಈ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ ಎಂದು ನಾಗಲಕ್ಷ್ಮಿ ವಿವರಿಸಿದ್ದಾರೆ.
ಲಿಖಿತ ಭರವಸೆ ಸಿಗುವವರೆಗೂ ಪ್ರತಿಭಟನೆ ಅಂತ್ಯವಿಲ್ಲ
ಆಶಾ ಕಾರ್ಯಕರ್ತೆಯರು ಸರ್ಕಾರವನ್ನು ಬ್ಲಾಕ್ಮೇಲ್ ಮಾಡಬಾರದು ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಡಿ. ನಾಗಲಕ್ಷ್ಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಸರ್ಕಾರವನ್ನು ಹೆದರಿಸುವುದಾಗಲಿ ಅಥವಾ ಬೆದರಿಸುವುದಾಗಲಿ ನಮ್ಮ ಉದ್ದೇಶವಲ್ಲ; ನಾವು ಸಂಪೂರ್ಣ ಶಾಂತಿಯುತವಾಗಿ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ಅವರ ಸಲಹೆಗಾರರು ಯಾವ ಮಾಹಿತಿ ತಲುಪಿಸಿದ್ದಾರೆ ಎಂಬುದು ನಮಗೆ ತಿಳಿದಿಲ್ಲ, ಆದರೆ ನಮ್ಮ ಹೋರಾಟ ಮಾತ್ರ ಮುಂದುವರಿಯುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಕೇವಲ ಮೌಖಿಕ ಭರವಸೆ ನೀಡದೆ, ನಮ್ಮ ಬೇಡಿಕೆಗಳ ಕುರಿತು ಲಿಖಿತವಾಗಿ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿರುವ ನಾಗಲಕ್ಷ್ಮಿ, ಅಧಿಕೃತ ಲಿಖಿತ ಆದೇಶ ಕೈಸೇರುವವರೆಗೂ ಧರಣಿಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಇಲಾಖೆ ಮತ್ತು ಕಾರ್ಯಕರ್ತರ ನಡುವೆ ಗೋಡೆ ಕಟ್ಟುವ ಯತ್ನ: ಆರೋಪ
ಪ್ರತಿಭಟನೆಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಯಾವುದೇ ತೊಂದರೆ ಅಥವಾ ಅನಾರೋಗ್ಯ ಎದುರಾದರೆ ಅದಕ್ಕೆ ಸಂಘಟನೆಯೇ ಹೊಣೆ ಎಂಬ ಸಚಿವರ ಹೇಳಿಕೆಗೂ ನಾಗಲಕ್ಷ್ಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಚಿವರು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ನಡುವೆ ಗೋಡೆ ನಿರ್ಮಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
“ನಾವು ಇಲಾಖೆಯ ಸೇವಕರು; ಪ್ರತಿಭಟನೆಯಲ್ಲಿದ್ದರೂ, ಮನೆಯಲ್ಲಿದ್ದರೂ ಅಥವಾ ಕರ್ತವ್ಯದಲ್ಲಿದ್ದರೂ ಇಲಾಖೆಯ ಸಿಬ್ಬಂದಿಯೇ ಆಗಿರುತ್ತೇವೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಕಾಲಕಾಲಕ್ಕೆ ಈಡೇರಿಸಿದ್ದರೆ ನಮಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಹೋರಾಟಕ್ಕೆ ಕಾರಣವಾದ ಸನ್ನಿವೇಶವನ್ನು ಸೃಷ್ಟಿಸಿದ್ದು ನೀವೇ. ನಾವು ಆಶಾ ಕಾರ್ಯಕರ್ತೆಯರ ಪರವಾಗಿ ಸರ್ಕಾರದ ಗಮನ ಸೆಳೆಯಲು ಬಂದಿದ್ದೇವೆಯೇ ಹೊರತು, ಬೆದರಿಕೆ ಹಾಕಲು ಅಲ್ಲ” ಎಂದು ಡಿ. ನಾಗಲಕ್ಷ್ಮಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ: ಯಶವಂತಪುರ ಠಾಣೆಯಲ್ಲಿ ಹೊಸ ಎಫ್ಐಆರ್
