TOP NEWS

Actor Yash: ‘ಕಿರಾತಕ’ ಸೀಕ್ವೆಲ್ ಮಾಡುವ ಆಸೆ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್: ಸಂದರ್ಶನದಲ್ಲಿ ಹಳೆಯ ದಿನಗಳನ್ನು ನೆನೆದ ನಟ

Rocking Star actor Yash Expresses Desire to Make Sequel to His Hit Film Kirataka

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ಕಿರಾತಕ’ ಸಿನಿಮಾದ ಮೂಲಕ ಮಂಡ್ಯ ಭಾಷೆಯ ಸೊಗಡು ಮತ್ತು ಹಾಸ್ಯದ ಕಚಗುಳಿ ಇಟ್ಟು ಪ್ರೇಕ್ಷಕರ ಮನಗೆದ್ದಿದ್ದ ರಾಕಿಂಗ್ ಸ್ಟಾರ್ ಯಶ್, (Actor Yash) ಇದೀಗ ತಮ್ಮ ಈ ಸೂಪರ್ ಹಿಟ್ ಸಿನಿಮಾದ ಮುಂದುವರಿದ ಭಾಗದ ಬಗ್ಗೆ ಮನದಾಸೆ ಬಿಚ್ಚಿಟ್ಟಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಯಶ್, ‘ಕಿರಾತಕ’ ಚಿತ್ರದ ಸೀಕ್ವೆಲ್ ಮಾಡುವ ಆಸೆ ತಮಗೆ ಈಗಲೂ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಚಿತ್ರದ ಕಥೆ ಸಿದ್ಧವಾಗಿ ಶೂಟಿಂಗ್ ಕೂಡ ಶುರುವಾಗಿತ್ತಾದರೂ, ‘ಕೆಜಿಎಫ್’ ಚಿತ್ರದ ಐತಿಹಾಸಿಕ ಯಶಸ್ಸಿನ ಬಳಿಕ ಆ ಪ್ರಾಜೆಕ್ಟ್ ಅರ್ಧಕ್ಕೆ ನಿಂತುಹೋಗಿತ್ತು. ಇದೀಗ ಸ್ವತಃ ಯಶ್ ಅವರೇ ಸೀಕ್ವೆಲ್ ಕುರಿತು ಮಾತನಾಡಿರುವುದು ಸಿನಿಪ್ರಿಯರಲ್ಲಿ ಹಾಗೂ ಅಭಿಮಾನಿಗಳಲ್ಲಿ ‘ಕಿರಾತಕ 2’ ಯಾವಾಗ ಸೆಟ್ಟೇರಲಿದೆ ಎಂಬ ಹೊಸ ನಿರೀಕ್ಷೆ ಮೂಡಿಸಿದೆ.

ಸಂದರ್ಶನದಲ್ಲಿ ‘ಕಿರಾತಕ’ ನೆನಪಿಸಿಕೊಂಡ ಯಶ್

‘ರಾಮಾಯಣ’ ಸಿನಿಮಾದ ಪ್ರಚಾರದ ಸಂದರ್ಶನದಲ್ಲಿ ಭಾಗವಹಿಸಿದ್ದ ವೇಳೆ, ನಿರೂಪಕಿಯೊಬ್ಬರು ನಿಮ್ಮ ಯಾವ ಪಾತ್ರಕ್ಕೆ ಪ್ರಿಕ್ವೆಲ್ ಅಥವಾ ಸ್ಪಿನ್-ಆಫ್ ಬರಬೇಕು ಎಂದು ಬಯಸುತ್ತೀರಿ ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ನಟಿ ಸಾಯಿ ಪಲ್ಲವಿ ‘ಗಾರ್ಗಿ’ ಚಿತ್ರದ ಹೆಸರು ಹೇಳಿದರೆ, ರಾಕಿಂಗ್ ಸ್ಟಾರ್ ಯಶ್ ತಕ್ಷಣವೇ ‘ಕಿರಾತಕ’ ಚಿತ್ರವನ್ನು ಹೆಸರಿಸಿದ್ದಾರೆ.

ಈ ಬಗ್ಗೆ ವಿವರಿಸಿದ ಯಶ್, “ನಾನು ಈ ಹಿಂದೆ ಕಿರಾತಕ ಸಿನಿಮಾ ಮಾಡಿದ್ದೆ. ನಿಜ ಹೇಳಬೇಕೆಂದರೆ ಅದರ ಸೀಕ್ವೆಲ್ ಮಾಡಬೇಕು ಎಂದು ಯೋಜಿಸಿದ್ದೆವು. ಅದಕ್ಕಾಗಿ ಸ್ಕ್ರಿಪ್ಟ್ ಕೂಡ ಬರೆದು ಚಿತ್ರೀಕರಣವನ್ನೂ ಆರಂಭಿಸಿದ್ದೆವು. ಆ ಸಿನಿಮಾ ಮಾಡಲು ನನಗೆ ತುಂಬಾ ಇಷ್ಟವಿದೆ, ಏಕೆಂದರೆ ಅದು ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಚಿತ್ರ” ಎಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

2018ರಲ್ಲಿ ಆರಂಭವಾಗಿ ಅರ್ಧಕ್ಕೆ ನಿಂತಿದ್ದ ಸಿನಿಮಾ

2011ರಲ್ಲಿ ಬಿಡುಗಡೆಯಾಗಿದ್ದ ‘ಕಿರಾತಕ’ ಚಿತ್ರ ಯಶ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬ್ರೇಕ್ ಹಾಗೂ ಭದ್ರ ಬುನಾದಿ ಹಾಕಿಕೊಟ್ಟಿತ್ತು. ಈ ಯಶಸ್ಸಿನ ಹಿನ್ನೆಲೆಯಲ್ಲಿ, ‘ಕೆಜಿಎಫ್ ಚಾಪ್ಟರ್ 1’ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ 2018ರಲ್ಲಿ ‘ರಾಂಬೋ 2’ ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ಅವರ ನಿರ್ದೇಶನದಲ್ಲಿ ‘ಮೈ ನೇಮ್ ಇಸ್ ಕಿರಾತಕ’ ಹೆಸರಿನಲ್ಲಿ ಸಿನಿಮಾ ಸೆಟ್ಟೇರಿತ್ತು. ಈ ಚಿತ್ರಕ್ಕಾಗಿ ಯಶ್ ತಮ್ಮ ಉದ್ದನೆಯ ಗಡ್ಡವನ್ನು ತೆಗೆದು ಸುಮಾರು 20 ದಿನಗಳ ಕಾಲ ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದರು.

ಆದರೆ, ‘ಕೆಜಿಎಫ್ ಚಾಪ್ಟರ್ 1’ ದೇಶಾದ್ಯಂತ ಭರ್ಜರಿ ಯಶಸ್ಸು ಕಂಡು, ‘ಕೆಜಿಎಫ್ 2’ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದ್ದರಿಂದ ಯಶ್ ಈ ಚಿತ್ರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದರು. ಆದರೂ ಈ ಕಥೆಯನ್ನು ಬೇರೆ ಯಾರಿಗೂ ನೀಡದಂತೆ ನಿರ್ದೇಶಕರಿಗೆ ತಿಳಿಸಿರುವ ಯಶ್, ಮುಂದೊಂದು ದಿನ ಖಂಡಿತವಾಗಿಯೂ ಈ ಸಿನಿಮಾ ಮಾಡುವ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಚಿತ್ರದ ಚಿತ್ರೀಕರಣ ಯಾವಾಗ ಮತ್ತೆ ಶುರುವಾಗಲಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ದಿನಾಂಕ ಹೊರಬಿದ್ದಿಲ್ಲವಾದರೂ, ಯಶ್ ಮಾತುಗಳು ಅಭಿಮಾನಿಗಳಲ್ಲಿ ಭಾರಿ ಸಂತಸ ತಂದಿವೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ವರ್ತನೆಗೆ ನೆಟ್ಟಿಗರ ಆಕ್ರೋಶ: ಕ್ರಮಕ್ಕೆ ಒತ್ತಾಯ

Leave a Reply

Your email address will not be published. Required fields are marked *