ಬಳ್ಳಾರಿ: ಲಕ್ಷ್ಮೀ ಪೂಜೆಯ ನೆಪದಲ್ಲಿ ಅಮಾಯಕ ಯುವತಿಯರನ್ನು ನಂಬಿಸಿ ಲೈಂಗಿಕ (Assault) ದೌರ್ಜನ್ಯ ಮತ್ತು ವಂಚನೆ ಎಸಗುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಪೊಲೀಸರು, ಈ ಜಾಲದ ಕಿಂಗ್ಪಿನ್ ಎನ್ನಲಾದ ಅರ್ಚಕ ಕಮ್ಮಾರ ಕೃಷ್ಣಮಾಚಾರಿಯನ್ನು ವಶಕ್ಕೆ ಪಡೆದು ಬಳ್ಳಾರಿಗೆ ಕರೆತಂದಿದ್ದಾರೆ. ಈ ಹಿಂದೆ ಕಾರ್ಯಾಚರಣೆಗಿಳಿದಿದ್ದ ಅಕ್ಕಾ ಪಡೆ ಮತ್ತು ಪೊಲೀಸರ ತಂಡ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಪ್ರಮುಖ ಸೂತ್ರಧಾರನ ಬಂಧನದೊಂದಿಗೆ ತನಿಖೆಗೆ ಮಹತ್ವದ ತಿರುವು ಸಿಕ್ಕಿದೆ.
ಶ್ರೀಶೈಲಂನಲ್ಲಿ ಸೆರೆಸಿಕ್ಕ ಕಿಂಗ್ಪಿನ್ ಅರ್ಚಕ ಲಕ್ಷ್ಮೀ ಪೂಜೆಯ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ದೌರ್ಜನ್ಯ ಎಸಗುತ್ತಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಅರ್ಚಕನನ್ನು ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಬಂಧಿಸಿ ಬಳ್ಳಾರಿಗೆ ಕರೆತರಲಾಗಿದೆ. ಬಂಧಿತ ಆರೋಪಿಯನ್ನು ಆಂಧ್ರದ ಅನಂತಪುರ ಸಮೀಪದ ಆಕತೋಟಪಲ್ಲಿಯ ಮಹಾಕಾಳಿ ದೇವಸ್ಥಾನದ ಅರ್ಚಕ ಕಮ್ಮಾರ ಕೃಷ್ಣಮಾಚಾರಿ (47) ಎಂದು ಗುರುತಿಸಲಾಗಿದೆ. ಪೂಜಾ ವಿಧಿವಿಧಾನಗಳ ಹೆಸರಿನಲ್ಲಿ ಯುವತಿಯರ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ಸಿದ್ಧಪಡಿಸಿ ವಂಚನೆ ಹಾಗೂ ಬ್ಲ್ಯಾಕ್ಮೇಲ್ ಜಾಲ ನಡೆಸುತ್ತಿದ್ದ ಆರೋಪ ಈತನ ಮೇಲಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹಣದ ಮಳೆಯ ಆಮಿಷ ಒಡ್ಡಿ ಟಾರ್ಗೆಟ್ ಮಾಡುತ್ತಿದ್ದ ವಂಚಕ ಕೈಕಾಲುಗಳ ಮೇಲೆ ಯಾವುದೇ ಕಲೆಗಳಿಲ್ಲದ ಕನ್ಯೆಯರು ಲಕ್ಷ್ಮೀ ಪೂಜೆ ನೆರವೇರಿಸಿದರೆ ಹಣದ ಮಳೆ ಸುರಿಯುತ್ತದೆ ಎಂದು ಆರೋಪಿ ಯುವತಿಯರನ್ನು ನಂಬಿಸುತ್ತಿದ್ದ ಎನ್ನಲಾಗಿದೆ. ಪೂಜೆ ಮಾಡಿದರೆ ಹಣದ ಮಳೆ ಬರುತ್ತದೆ ಎಂಬ ವಿಡಿಯೋಗಳನ್ನು ತೋರಿಸಿ ಮುಗ್ಧ ಯುವತಿಯರನ್ನು ಆಕರ್ಷಿಸುತ್ತಿದ್ದ ಈತ, ಮಧ್ಯವರ್ತಿಗಳ ಮೂಲಕ ಟಾರ್ಗೆಟ್ ಆಯ್ಕೆ ಮಾಡಿಕೊಳ್ಳುತ್ತಿದ್ದ. ತದನಂತರ ಯುವತಿಯರ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡು, ಪೂಜೆಯ ನೆಪದಲ್ಲಿ ಆಂಧ್ರಪ್ರದೇಶಕ್ಕೆ ಕರೆಸಿಕೊಂಡು ಬೆದರಿಕೆ ಹಾಗೂ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪ ಕೇಳಿಬಂದಿದೆ.
ಅಕ್ಕಾ ಪಡೆಯ ಕಾರ್ಯಾಚರಣೆ ಮತ್ತು ತನಿಖೆಯ ಪ್ರಗತಿ ವಿಡಿಯೋಗಳನ್ನು ಕಳುಹಿಸಿದ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಆರೋಪದ ಕುರಿತು ಮಾಹಿತಿ ಲಭ್ಯವಾದ ತಕ್ಷಣ ಬಳ್ಳಾರಿ ಪೊಲೀಸರು ಮತ್ತು ಅಕ್ಕಾ ಪಡೆ ಕಾರ್ಯಪ್ರವೃತ್ತವಾಯಿತು. ಬಳ್ಳಾರಿ ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್ ಅವರ ಮಾರ್ಗದರ್ಶನದಲ್ಲಿ ಅಕ್ಕಾ ಪಡೆಯ ಮಹಿಳಾ ಪೊಲೀಸ್ ಸಿಬ್ಬಂದಿ ಯುವತಿಯರ ವೇಷದಲ್ಲಿ ಕಾರ್ಯಾಚರಣೆ ನಡೆಸಿ ಈ ಜಾಲದ ಗುಟ್ಟು ರಟ್ಟು ಮಾಡಿದ್ದಾರೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಪ್ರಕರಣದ ಪ್ರಮುಖ ಆರೋಪಿ ಅರ್ಚಕನನ್ನೂ ಬಂಧಿಸಲಾಗಿದೆ. ಆರೋಪಿಯನ್ನು ಬಳ್ಳಾರಿಗೆ ಕರೆತರಲಾಗಿದ್ದು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆ ಮುಂದುವರಿಸಲಾಗಿದೆ.
ಇದನ್ನೂ ಓದಿ: ಪೈಶಾಚಿಕ ಕೃತ್ಯ: ಶೌಚಾಲಯ ಬಳಕೆ ಜಗಳಕ್ಕೆ ಯುವಕನ ದೇಹದೊಳಗೆ 4 ಅಡಿ ಶವರ್ ಪೈಪ್ ತೂರಿಸಿದ ದುರುಳರು!
