ನವದೆಹಲಿ: ಭಾರತ ಮತ್ತು ನೇಪಾಳ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮತ್ತೊಮ್ಮೆ ಒತ್ತಿ ಹೇಳಿದ್ದು, ಉಭಯ ದೇಶಗಳ ನಡುವಿನ ಸಂಬಂಧಕ್ಕೆ ರಾಮಾಯಣ ಮಹಾಕಾವ್ಯದ ಕೊಂಡಿಯನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಶ್ರೀರಾಮ ಮತ್ತು ಮಾತಾ ಸೀತೆಯವರು ನಮ್ಮ ಹಂಚಿಕೆಯ ನಾಗರಿಕತೆ ಹಾಗೂ ನಂಬಿಕೆಯ ಸಂಕೇತಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ಯುವ ಸೃಜನಶೀಲರಿಗೆ ಕರೆ ಮತ್ತು ಜನಕಪುರದ ನೆನಪು ಇತ್ತೀಚೆಗೆ ತೆರೆಕಂಡ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಸಿನಿಮಾ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ರಾಮಾಯಣದ ಕಥೆ ಯುವ ಪೀಳಿಗೆಯನ್ನು ತಲುಪುತ್ತಿದೆ ಎಂದರು. ಭಾರತ ಮತ್ತು ನೇಪಾಳದ ಯುವ ಕಲಾವಿದರು ಹಾಗೂ ಸೃಜನಶೀಲರು ಒಟ್ಟಾಗಿ ಕೆಲಸ ಮಾಡಿ, ಹೊಸ ಹಾಗೂ ಮುಂದುವರಿದ ಮಾಧ್ಯಮಗಳ ನೆರವಿನಿಂದ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಬೇಕು ಎಂದು ಅವರು ಕರೆ ನೀಡಿದರು. ಮುಂದಿನ ವೇವ್ (WAVE) ಶೃಂಗಸಭೆಯಲ್ಲಿ ನೇಪಾಳದ ಹೊಸ ನಿಯೋಗವನ್ನು ಸ್ವಾಗತಿಸುವುದಾಗಿಯೂ ಮೋದಿ ಹೇಳಿದರು. ಇದೇ ವೇಳೆ 2018ರಲ್ಲಿ ನೇಪಾಳದ ಜನಕಪುರಕ್ಕೆ ತಾವು ನೀಡಿದ್ದ ಭೇಟಿಯನ್ನು ನೆನಪಿಸಿಕೊಂಡ ಅವರು, ನೇಪಾಳವಿಲ್ಲದೆ ಭಾರತದ ಪವಿತ್ರ ತೀರ್ಥಕ್ಷೇತ್ರಗಳು ಮತ್ತು ಶ್ರೀರಾಮನ ಕಥೆ ಅಪೂರ್ಣವಾಗುತ್ತದೆ ಎಂದು ಹಿಂದೆ ಹೇಳಿದ್ದ ಮಾತುಗಳನ್ನು ಸ್ಮರಿಸಿದರು. ಇತಿಹಾಸ, ನಂಬಿಕೆ, ಸಂಸ್ಕೃತಿ ಮತ್ತು ಜನರ ನಡುವಿನ ಆಳವಾದ ಸಂಬಂಧದ ಎಳೆಗಳಿಂದ ಭಾರತ ಹಾಗೂ ನೇಪಾಳದ ಬಾಂಧವ್ಯ ಹೆಣೆದುಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಅಬ್ಬರ ಮತ್ತು ಜಾಗತಿಕ ಗಮನ ನಿರ್ದೇಶಕ ನಿತೇಶ್ ತಿವಾರಿ ಅವರ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರವು ನವೆಂಬರ್ 5, 2026ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಪ್ರಧಾನಿಯವರ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ. ಮಹರ್ಷಿ ವಾಲ್ಮೀಕಿಯವರ ಮಹಾಕಾವ್ಯವನ್ನು ಆಧರಿಸಿದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತಾಮಾತೆಯಾಗಿ, ರವಿ ದುಬೆ ಲಕ್ಷ್ಮಣನಾಗಿ ಮತ್ತು ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಶರಥನಾಗಿ ಅರುಣ್ ಗೋವಿಲ್, ಕೈಕೇಯಿಯಾಗಿ ಲಾರಾ ದತ್ತಾ ಹಾಗೂ ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಎರಡನೇ ಭಾಗವು 2028ರಲ್ಲಿ ಬಿಡುಗಡೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿರುವ ಈ ಚಿತ್ರವನ್ನು ಇತ್ತೀಚೆಗೆ ರೋಮ್ನಲ್ಲಿ ವ್ಯಾಟಿಕನ್ ಕಾರ್ಡಿನಲ್ ಪೀಟರ್ ಕೊಡ್ವೋ ಟರ್ಕ್ಸನ್ ಹಾಗೂ ಆಹ್ವಾನಿತ ಕ್ಯಾಥೋಲಿಕ್ ಅಧಿಕಾರಿಗಳಿಗಾಗಿ ವಿಶೇಷ ಪ್ರದರ್ಶನ ಮಾಡಲಾಗಿತ್ತು. ಚಿತ್ರದ ಸಂಗೀತ ಮತ್ತು ದೃಶ್ಯ ವೈಭವವನ್ನು ಶ್ಲಾಘಿಸಿದ್ದ ಕಾರ್ಡಿನಲ್, ಭಾರತೀಯ ಮಹಾಕಾವ್ಯವನ್ನು ಬೈಬಲ್ ಕಥಾನಕಗಳೊಂದಿಗೆ ಹೋಲಿಕೆ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿ ‘ಬಿಲಾಂಗಿಂಗ್’ ಪುಸ್ತಕದ ತೆರೆಮರೆಯ ಕಥೆಗಳು: ರಾಹುಲ್-ಪ್ರಿಯಾಂಕಾ ಜತೆಗಿನ ಸಂವಾದದಲ್ಲಿ ಸ್ಫೋಟಕ ವಿಚಾರಗಳು!
