TOP NEWS

Crime: ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು: ಮಹಜರು ವೇಳೆ ಹಲ್ಲೆಗೆ ಯತ್ನಿಸಿದ ಆರೋಪಿ ಪೆಟ್ಟಂ ಸುರೇಶ ಕಾಲಿಗೆ ಫೈರಿಂಗ್

Crime Bengaluru Police Shoot Accused Pettam Suresh in Leg During Spot Mahajar Near Kudurugere After Attack Attempt

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುದುರುಗೆರೆ ಬಳಿ ಶನಿವಾರ ಬೆಳ್ಳಂಬೆಳಿಗ್ಗೆ ಪೊಲೀಸರ ಸರ್ವಿಸ್ ರಿವಾಲ್ವರ್ ಸದ್ದು ಮಾಡಿದೆ. ಲೇಡಿಸ್ ಪಿಜಿಯಲ್ಲಿ ಮೊಬೈಲ್ ಕಳ್ಳತನ ಮಾಡಿ ಯುವತಿಯರ ಮುಂದೆ ಅಸಭ್ಯವಾಗಿ ವರ್ತಿಸಿದ್ದ ವಿಕೃತಕಾಮಿ (Crime) ಆರೋಪಿ ಪೆಟ್ಟಂ ಸುರೇಶ ಎಂಬಾತನ ಕಾಲಿಗೆ ಚಿಕ್ಕಜಾಲ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಗುಂಡು ಹಾರಿಸಿ ಬಂಧಿಸಿದ್ದಾರೆ. ಸ್ಥಳ ಮಹಜರು ಪ್ರಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿಯು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಈ ಫೈರಿಂಗ್ ನಡೆಸಲಾಗಿದೆ.

ಇತ್ತೀಚೆಗೆ ಚಿಕ್ಕಜಾಲ ವ್ಯಾಪ್ತಿಯ ಮಹಿಳಾ ಪೇಯಿಂಗ್ ಗೆಸ್ಟ್ (ಪಿಜಿ) ಒಂದಕ್ಕೆ ನುಗ್ಗಿದ್ದ ಆರೋಪಿ ಪೆಟ್ಟಂ ಸುರೇಶ, ಅಲ್ಲಿದ್ದ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದನು. ಅಷ್ಟೇ ಅಲ್ಲದೆ, ಅಲ್ಲಿದ್ದ ಯುವತಿಯರ ಮುಂದೆ ತನ್ನ ಮರ್ಮಾಂಗ ತೋರಿಸಿ ಅತ್ಯಂತ ವಿಕೃತವಾಗಿ ವರ್ತಿಸಿ ಸ್ಥಳದಿಂದ ಪರಾರಿಯಾಗಿದ್ದನು. ಈ ಘಟನೆಯಿಂದ ಪಿಜಿ ನಿವಾಸಿಗಳಲ್ಲಿ ತೀವ್ರ ಆತಂಕ ಮನೆಮಾಡಿತ್ತು. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿ ಪೆಟ್ಟಂ ಸುರೇಶನನ್ನು ವಶಕ್ಕೆ ಪಡೆದಿದ್ದರು.

ಸ್ಥಳ ಮಹಜರು ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ

ಆರೋಪಿಯನ್ನು ಬಂಧಿಸಿದ ಬಳಿಕ ಹೆಚ್ಚಿನ ತನಿಖೆ ಹಾಗೂ ಸಾಕ್ಷ್ಯ ಸಂಗ್ರಹಕ್ಕಾಗಿ ಪೊಲೀಸರು ಕುದುರುಗೆರೆ ಬಳಿ ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಆರೋಪಿ ಪೆಟ್ಟಂ ಸುರೇಶ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಎಚ್ಚೆತ್ತ ಚಿಕ್ಕಜಾಲ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್, ಮೊದಲಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಆರೋಪಿ ಹಲ್ಲೆ ಮುಂದುವರಿಸಿದಾಗ ಇನ್ಸ್‌ಪೆಕ್ಟರ್ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ; ಹೆಚ್ಚುವರಿ ಪ್ರಕರಣ ದಾಖಲು

ಗುಂಡೇಟಿನಿಂದ ಕಾಲಿಗೆ ಗಾಯಗೊಂಡಿರುವ ಆರೋಪಿ ಪೆಟ್ಟಂ ಸುರೇಶನನ್ನು ಪೊಲೀಸರು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನು ಬೆಳ್ಳಂಬೆಳಿಗ್ಗೆ ಕುದುರುಗೆರೆ ಭಾಗದಲ್ಲಿ ಗುಂಡಿನ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.

ಈ ಹಿಂದೆಯೂ ಪಿಜಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಹಾಗೂ ಯುವತಿಯರೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಈತನ ವಿರುದ್ಧ ಇದೀಗ ಕಳ್ಳತನ ಮತ್ತು ಲೈಂಗಿಕ ಕಿರುಕುಳದ ಜೊತೆಗೆ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಡಿಯೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪತ್ನಿಯರು ನಾಪತ್ತೆ ಎಂದು ಕಟ್ಟುಕಥೆ ಹೆಣೆದ ಸಹೋದರರು: ತನಿಖೆಯಲ್ಲಿ ಬಯಲಾದ ಕೊಡಲಿ ಕೊಲೆ

Leave a Reply

Your email address will not be published. Required fields are marked *