TOP NEWS

Chikkamagaluru: ಎರಡನೇ ದಿನದ ‘ಆಪರೇಷನ್ ಒಂಟಿ ಸಲಗ’ ಚುರುಕು: ಕಾರ್ಯಾಚರಣೆಗೆ ಎಂಟ್ರಿ ಕೊಟ್ಟ ಏಕಲವ್ಯ

Chikkamagaluru Operation Tusker Enters Day 2 Kumki Elephant Ekalavya Deployed as Villagers Stage Day Night Protest in Makonahalli

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವ ಒಂಟಿ ಸಲಗವನ್ನು ಸೆರೆಹಿಡಿಯುವ ಅರಣ್ಯ ಇಲಾಖೆಯ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಒಂಟಿ ಸಲಗವು ಒಂದೇ ಕಡೆ ನಿಲ್ಲದೆ ಪದೇ ಪದೇ ತನ್ನ ಸ್ಥಳವನ್ನು ಬದಲಾಯಿಸುತ್ತಿರುವುದರಿಂದ ಕಾರ್ಯಾಚರಣೆಗೆ ಸವಾಲಾಗಿದ್ದು, ಇದೀಗ ಕಾರ್ಯಾಚರಣೆಗೆ ಬಲ ತುಂಬಲು ಮೈಸೂರಿನ ಭೀಮನಕಟ್ಟೆಯಿಂದ ‘ಏಕಲವ್ಯ’ ಆನೆಯನ್ನು ಕರೆಸಲಾಗಿದೆ.

ಹಿಂದಿನ ದಿನದ ಕಾರ್ಯಾಚರಣೆಯ ವೇಳೆ ಸಾಕಾನೆಗಳಾದ ಅಯ್ಯಪ್ಪ ಮತ್ತು ಜ್ಯೂನಿಯರ್ ಅರ್ಜುನ ಸ್ವಲ್ಪಮಟ್ಟಿಗೆ ಭಯಪಟ್ಟುಕೊಂಡ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯು ಅನುಭವಿ ಆನೆ ಏಕಲವ್ಯನನ್ನು ರಾತ್ರಿಯೇ ಮತ್ತಾವರ ಅರಣ್ಯ ಇಲಾಖೆಯ ಪ್ರವಾಸಿ ಮಂದಿರಕ್ಕೆ ಕರೆತಂದಿದೆ. ಸದ್ಯ ಒಂಟಿ ಸಲಗವು ಮತ್ತಾವರ ಭಾಗದಿಂದ ಬಸ್ಕಲ್, ಹಾಂದಿ, ಮಾಲಹಳ್ಳಿ, ಇಂದ್ರುವಳ್ಳಿ, ದೊಡ್ಡನಗುಡ್ಡ, ನಂದೀಪುರ, ಬಾರೀಕೆರೆ ಹಾಗೂ ಗಬ್ಬಳ್ಳಿ ಸುತ್ತಮುತ್ತ ಸಂಚರಿಸುತ್ತಿದೆ. ಬಸ್ಕಲ್ ಬಳಿಯ ಮನೆಯೊಂದರ ಸಮೀಪ ಸಲಗ ಕಾಣಿಸಿಕೊಂಡಿದ್ದು, ಈ ಭಾಗದ ನಿವಾಸಿಗಳು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಮಾಕೋನಹಳ್ಳಿ ಸುತ್ತಮುತ್ತ ಡ್ರೋನ್ ಕ್ಯಾಮೆರಾ ಮತ್ತು ಥರ್ಮಲ್ ಡ್ರೋನ್‌ಗಳ ನೆರವಿನಿಂದ ಸಲಗದ ಚಲನವಲನದ ಮೇಲೆ ತೀವ್ರ ನಿಗಾ ಇರಿಸಿ, ಎಲ್ಲಾ ಆಯಾಮಗಳಿಂದಲೂ ಸೆರೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.

ಕಾಡಾನೆ ಹಾವಳಿ ಖಂಡಿಸಿ ಮಾಕೋನಹಳ್ಳಿಯಲ್ಲಿ ಅಹೋರಾತ್ರಿ ಧರಣಿ, ರಸ್ತೆ ತಡೆ

ಒಂದೆಡೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಮತ್ತೊಂದೆಡೆ ಆನೆ ಸ್ಥಳಾಂತರ ಹಾಗೂ ನಿರಂತರ ಕಾಡಾನೆ ಹಾವಳಿಯನ್ನು ಖಂಡಿಸಿ ಸ್ಥಳೀಯರು ಮತ್ತು ರೈತರು ಇಂದಿನಿಂದ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸರ್ಕಲ್‌ನಲ್ಲಿ ಜಮಾಯಿಸಿದ ಆನೆ ಪೀಡಿತ ಗ್ರಾಮಗಳ ಜನರು, ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಮೂಡಿಗೆರೆ ತಾಲೂಕಿನ ಪ್ರಮುಖ ಮಾಕೋನಹಳ್ಳಿ ರಸ್ತೆ ಹಾಗೂ ಬೇಲೂರು-ಮೂಡಿಗೆರೆ ಮುಖ್ಯ ರಸ್ತೆಗೆ ಅಡ್ಡಲಾಗಿ ಕುಳಿತು ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಕಾಡಾನೆ ದಾಳಿಯಿಂದ ನಾಶವಾಗಿರುವ ಕಾಫಿ ಮತ್ತು ಅಡಿಕೆ ಗಿಡಗಳನ್ನು ರಸ್ತೆಗೆ ಅಡ್ಡಲಾಗಿ ಹಾಕುವ ಮೂಲಕ ರೈತರು ತಮ್ಮ ಅಳಲನ್ನು ತೋಡಿಕೊಂಡರು. ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಗುಂಡ್ಲುಪೇಟೆಯಲ್ಲಿ ಮತ್ತೆ ಹುಲಿ ಕಾಟ: ದಾಳಿಗೆ ರೈತನ ಹಸು ಬಲಿ

ಇನ್ನೊಂದೆಡೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ. ಗ್ರಾಮದ ರೈತ ಚನ್ನೂರಪ್ಪ ಅವರಿಗೆ ಸೇರಿದ ಹಸು ಹುಲಿಯ ದಾಳಿಗೆ ತುತ್ತಾಗಿ ಸಾವನ್ನಪ್ಪಿದೆ. ಕೆಲ ದಿನಗಳ ಹಿಂದಷ್ಟೇ ಈ ಭಾಗದಲ್ಲಿ ಉಪಟಳ ನೀಡುತ್ತಿದ್ದ ಹುಲಿಯೊಂದನ್ನು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಆದರೆ ಇದೀಗ ಮತ್ತೆ ಹುಲಿಯ ಓಡಾಟ ಕಂಡುಬಂದಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಅರಣ್ಯ ಇಲಾಖೆ ತಕ್ಷಣವೇ ಕಾರ್ಯಾಚರಣೆ ನಡೆಸಿ ಹುಲಿ ದಾಳಿ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:  ರಕ್ತದಾನ ಮನುಷ್ಯನಿಗೆ ಮರುಜೀವ ನೀಡಿದಂತೆ; ಯುವಕರು ರಕ್ತದಾನಕ್ಕೆ ಮುಂದಾಗಲಿ: ಸಿ. ಪುಟ್ಟರಂಗಶೆಟ್ಟಿ ಕರೆ

Leave a Reply

Your email address will not be published. Required fields are marked *