TOP NEWS

Actor Dhanveer: ತಂದೆ-ತಾಯಿಗೆ ನಿಂದಿಸಿದ ಕೋಪದಲ್ಲಿ ಬೈದೆ, ಕ್ಷಮಿಸಿ: ಪೊಲೀಸರ ಮುಂದೆ ನಟ ಧನ್ವೀರ್ ಹೇಳಿಕೆ

Abused Him Out of Anger Seek Forgiveness actor Dhanveer Tells Police Denies Remarks on DK Shivakumar and Zaid Khan as AI Fake

ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ಕರೆ ಮಾಡಿ ಬೈದಿರುವುದು ನಿಜ ಎಂದು ಆರ್.ಆರ್. ನಗರ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ನಟ ಧನ್ವೀರ್ ಗೌಡ (Actor Dhanveer) ಒಪ್ಪಿಕೊಂಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವಿವಾದಾತ್ಮಕ ವಿಡಿಯೊ ಮತ್ತು ಆಡಿಯೊಗಳ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದು, ಅವುಗಳನ್ನು ತಮ್ಮ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಸೃಷ್ಟಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾಗರಾಜ್‌ಗೆ ಬೈದಿದ್ದಾಗಿ ಒಪ್ಪಿಕೊಂಡ ಧನ್ವೀರ್

ಆರ್.ಆರ್. ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ವಿಚಾರಣೆಯ ವೇಳೆ ಧನ್ವೀರ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾವು ಕರೆ ಮಾಡಿ ನಾಗರಾಜ್ ಅವರಿಗೆ ಬೈದಿರುವುದು ಹಾಗೂ ಅವಾಚ್ಯ ಪದಗಳಿಂದ ನಿಂದಿಸಿರುವುದು ನಿಜವೆಂದು ಅವರು ಹೇಳಿದ್ದಾರೆ. “ನನ್ನ ಕಡೆಯಿಂದ ತಪ್ಪಾಗಿದೆ ಸರ್, ದಯವಿಟ್ಟು ಕ್ಷಮಿಸಿಬಿಡಿ” ಎಂದು ಪೊಲೀಸರ ಮುಂದೆ ವಿಷಾದ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾರಣವನ್ನೂ ವಿವರಿಸಿರುವ ಧನ್ವೀರ್, ವಿಜಯಲಕ್ಷ್ಮಿ ಮತ್ತು ನಾಗರಾಜ್ ತಮ್ಮ ಮನೆಗೆ ಬಂದು ಗಲಾಟೆ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ತಂದೆ-ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು ಮತ್ತು ಅದರಿಂದ ಉಂಟಾದ ತೀವ್ರ ಕೋಪದಲ್ಲೇ ಮ್ಯಾನೇಜರ್ ನಾಗರಾಜ್ ಅವರಿಗೆ ಬೈದಿದ್ದೇನೆ ಎಂದು ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದಾರೆ.

ವೈರಲ್ ವಿಡಿಯೊ ಹಾಗೂ ಆಡಿಯೊ ಕುರಿತು ಸ್ಪಷ್ಟನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರ ಕುರಿತು ತಾವು ಯಾವುದೇ ಹೇಳಿಕೆ ನೀಡಿಲ್ಲ ಎಂದು ಧನ್ವೀರ್ ಖಚಿತಪಡಿಸಿದ್ದಾರೆ. ಹರಿದಾಡುತ್ತಿರುವ ಆ ವೀಡಿಯೊ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ರಚಿಸಲಾದ ನಕಲಿ ವೀಡಿಯೊ ಆಗಿದೆ ಎಂದು ಅವರು ಹೇಳಿದ್ದಾರೆ.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಹಾಗೂ ಗಲಾಟೆ ನಡೆದಿದ್ದು, ತಾವು ಲೆಕ್ಕಪತ್ರ ನೀಡಲು ಸಂಪೂರ್ಣ ಸಿದ್ಧವಿರುವುದಾಗಿ ಧನ್ವೀರ್ ತಿಳಿಸಿದ್ದಾರೆ. ಆದರೆ, ಸಂಬಂಧಪಟ್ಟವರೇ ಲೆಕ್ಕ ಚುಕ್ತಾ ಮಾಡಲು ಬರುತ್ತಿಲ್ಲ ಎಂದು ದೂರಿದ್ದಾರೆ. ತಮಗೆ ಸಾರ್ವಜನಿಕವಾಗಿ ಕೆಟ್ಟ ಹೆಸರು ತರಬೇಕೆಂಬ ದುರುದ್ದೇಶದಿಂದಲೇ ಇಂತಹ ಆಡಿಯೊಗಳನ್ನು ಸೃಷ್ಟಿಸಿ ಹರಿಬಿಡಲಾಗಿದೆ ಎಂಬ ಅಂಶವನ್ನು ಅವರು ಪೊಲೀಸರ ಮುಂದೆ ಪ್ರಸ್ತಾಪಿಸಿದ್ದಾರೆ.

ಹೈಕೋರ್ಟ್ ಸೂಚನೆ ಮತ್ತು ತನಿಖೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಟ ಧನ್ವೀರ್ ಈ ಹಿಂದೆ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖೆಗೆ ಸಹಕರಿಸಿ ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ಧನ್ವೀರ್ ಅವರಿಗೆ ನಿರ್ದೇಶನ ನೀಡಿತ್ತು. ನ್ಯಾಯಾಲಯದ ಸೂಚನೆಯ ಅನ್ವಯ ಅವರು ವಿಚಾರಣೆಗೆ ಹಾಜರಾಗಿದ್ದು, ಆರ್.ಆರ್. ನಗರ ಪೊಲೀಸರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ನಟ ದರ್ಶನ್‌ಗೆ ವಿಕ್ಟೋರಿಯಾ ಆಸ್ಪತ್ರೆ ಶಿಫ್ಟ್ ಸದ್ಯಕ್ಕಿಲ್ಲ: ಪರಪ್ಪನ ಅಗ್ರಹಾರ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆಗೆ ವ್ಯವಸ್ಥೆ

Leave a Reply

Your email address will not be published. Required fields are marked *