ನವದೆಹಲಿ: ರಾವಣನನ್ನು ವೈಭವೀಕರಿಸುವ ದುರುದ್ದೇಶದಿಂದ ಚಿತ್ರತಂಡವು ಮೂಲ ಕಥೆಯನ್ನು (Ramayana) ತಿರುಚಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ‘ರಾಮಾಯಣ’ ಸಿನಿಮಾಗೆ ನೀಡಿರುವ ಸೆನ್ಸಾರ್ ಪ್ರಮಾಣಪತ್ರವನ್ನು ರದ್ದುಗೊಳಿಸಿ ಚಿತ್ರ ಪ್ರದರ್ಶನವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಶನಿವಾರ ಆಗ್ರಹಿಸಿದೆ. ಸಿನಿಮಾ ತೆರೆಕಂಡ ಕೆಲವೇ ದಿನಗಳಲ್ಲಿ ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಬಜರಂಗ ಲಾಲ್ ಬಾಗ್ರಾ ಅವರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಹರ್ಷಿ ವಾಲ್ಮೀಕಿಯವರ ಮೂಲ ರಾಮಾಯಣದ ಹಲವು ಅಂಶಗಳನ್ನು ಬದಲಾಯಿಸಲಾಗಿದೆ, ಕಟ್ಟುಕಥೆಗಳನ್ನು ಸೇರಿಸಲಾಗಿದೆ ಹಾಗೂ ಪ್ರಮುಖ ಪಾತ್ರಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಕಥೆಯ ತಿರುಚುವಿಕೆ ಆರೋಪ
ಪ್ರಕಟಣೆಯೊಂದರಲ್ಲಿ ಮಾತನಾಡಿರುವ ಬಜರಂಗ ಲಾಲ್ ಬಾಗ್ರಾ, ಶ್ರೀರಾಮನ ಕೋಟ್ಯಂತರ ಹಿಂದೂ ಭಕ್ತರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವ ಮೂಲಕ ಸಿನಿಮಾದಲ್ಲಿ ರಾಜಕೀಯ ನಿರೂಪಣೆಯೊಂದನ್ನು ತರಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ. ಶ್ರೀರಾಮನ ವ್ಯಕ್ತಿತ್ವದ ಮಹತ್ವದ ಭಾಗಗಳಾದ ಅಹಲ್ಯಾ ಉದ್ಧಾರ, ನಿಷಾದರಾಜ ಗುಹನ ಸ್ನೇಹ ಮತ್ತು ಕೇವಟನ ಭಕ್ತಿಯಂತಹ ಪ್ರಸಂಗಗಳನ್ನು ಚಿತ್ರದಲ್ಲಿ ಪ್ರಸ್ತಾಪಿಸಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಋಷಿಮುನಿಗಳ ತಪಸ್ಸು, ಯಜ್ಞ ಮತ್ತು ಗುರುಕುಲಗಳಿಗೆ ಅಡ್ಡಿಪಡಿಸುತ್ತಿದ್ದ ದುಷ್ಟ ರಾಕ್ಷಸರ ಸಂಹಾರದ ಮೂಲಕ ಸಮಾಜವನ್ನು ರಕ್ಷಿಸುವ ಶ್ರೀರಾಮನ ಮಹಾನ್ ಉದ್ದೇಶವನ್ನು, ಕೇವಲ ಪತ್ನಿಯ ಅಪಹರಣದ ಸೇಡಿಗಾಗಿ ನಡೆದ ವೈಯಕ್ತಿಕ ಹೋರಾಟದಂತೆ ಚಿತ್ರಿಸಲಾಗಿದೆ ಎಂದು ಅವರು ಟೀಕಿಸಿದ್ದಾರೆ.
ರಾವಣನ ವೈಭವೀಕರಣಕ್ಕೆ ತೀವ್ರ ವಿರೋಧ
ಅಹಂಕಾರಿ ರಾವಣನನ್ನು ಶೋಷಿತರ ರಕ್ಷಕನಂತೆ ಬಿಂಬಿಸುವ ಮೂಲಕ ರಾಜಕೀಯ ಉದ್ದೇಶ ಸಾಧಿಸಲು ಯತ್ನಿಸಲಾಗಿದೆ ಎಂದು ಬಾಗ್ರಾ ದೂರಿದ್ದಾರೆ. ಜ್ಞಾನ, ಭಕ್ತಿ ಮತ್ತು ಶಕ್ತಿಯ ಉತ್ತುಂಗದಲ್ಲಿದ್ದರೂ ಅಹಂಕಾರದಿಂದ ಸಕಲ ಜೀವಿಗಳಿಗೆ ಹಿಂಸೆ ನೀಡುತ್ತಿದ್ದ ರಾವಣ ಅನೈತಿಕನಾಗಿದ್ದ ಎಂಬುದು ರಾಮಾಯಣದ ಪ್ರತಿಯೊಂದು ಆವೃತ್ತಿಯಲ್ಲೂ ಸ್ಪಷ್ಟವಾಗಿ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.
ಸಹಸ್ರಾರು ವರ್ಷಗಳಿಂದ ನಡೆದುಬಂದ ರಾಮಾಯಣ ಪರಂಪರೆ ಹಾಗೂ ಶ್ರೀರಾಮನಲ್ಲಿ ಅಪಾರ ನಂಬಿಕೆ ಇಟ್ಟಿರುವ ಕೋಟ್ಯಂತರ ಮಂದಿಯ ಭಾವನೆಗಳಿಗೆ ಈ ಚಿತ್ರದಿಂದ ತೀವ್ರ ಘಾಸಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ರಾಜಕೀಯ ಮೌಲ್ಯಗಳನ್ನು ರೂಪಿಸುವ ರಾಮಾಯಣದ ಇಂತಹ ತಿರುಚುವಿಕೆಯು ಸಮಾಜದ ನೈತಿಕ ತಳಹದಿಯ ಮೇಲಿನ ದಾಳಿಯಾಗಿದ್ದು, ಹಿಂದೂ ಸಮಾಜದ ಭಾವನೆಗಳೊಂದಿಗೆ ಆಟವಾಡುವ ಇಂತಹ ಪ್ರಯತ್ನಗಳನ್ನು ಜನರು ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಾಣದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ಭಾಗಗಳ ಈ ಚಿತ್ರದ ಮೊದಲ ಭಾಗವು ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಂಡಿತ್ತು.
ಇದನ್ನೂ ಓದಿ: ಮಾಸ್ ಆ್ಯಕ್ಷನ್ ಬದಲು ಈ ಬಾರಿ ‘ಫ್ಯಾಮ್ ಜಾಮ್’ ಕಥೆ? ನವೆಂಬರ್ 22ರಂದು ಹೊರಬೀಳಲಿದೆ ಸುದೀಪ್-ಪ್ರೇಮ್ ಚಿತ್ರದ ಗುಟ್ಟು
