TOP NEWS

HD Kumaraswamy: ಚುನಾವಣಾ ಆಯೋಗದ ಒಳಜಗಳ, KPSC ಅಕ್ರಮ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಚಿವ ಹೆಚ್‌ಡಿಕೆ ಆಕ್ರೋಶ!

Election Commission Must Resolve Its Internal Turmoil Itself HD Kumaraswamy

ಬೆಂಗಳೂರು: ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ವಿಚಾರ ಹಾಗೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಬೃಹತ್ ನೇಮಕಾತಿ ಹಗರಣದ ಕುರಿತಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್ ಸರ್ಕಾರ ಮತ್ತು ಆಡಳಿತಾರೂಢ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಲವು ಪ್ರಚಲಿತ ವಿದ್ಯಮಾನಗಳ ಕುರಿತು ರಾಜ್ಯ ಸರ್ಕಾರದ ನಡೆ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ನ ಹೋರಾಟಗಳ ವೈಖರಿಯನ್ನು ಕಟುವಾಗಿ ಟೀಕಿಸಿದರು.

ಚುನಾವಣಾ ಆಯೋಗ ತನ್ನ ಗೌರವ ಕಾಪಾಡಿಕೊಳ್ಳಲಿ: ಚುನಾವಣಾ ಆಯೋಗದ ಆಯುಕ್ತರ ನಡುವೆ ಮೂಡಿರುವ ಭಿನ್ನಾಭಿಪ್ರಾಯ ಹಾಗೂ ಸೃಷ್ಟಿಯಾಗಿರುವ ಗೊಂದಲಗಳ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಚುನಾವಣಾ ಆಯೋಗದಲ್ಲಿ ಏತಕ್ಕಾಗಿ ಭಿನ್ನಾಭಿಪ್ರಾಯ ಮೂಡಿದೆ ಎಂಬುದನ್ನು ಸ್ವತಃ ಆಯೋಗವೇ ದೇಶದ ಜನತೆಗೆ ಸ್ಪಷ್ಟಪಡಿಸಬೇಕು. ಅಲ್ಲಿರುವ ಮೂವರು ಉನ್ನತ ಅಧಿಕಾರಿಗಳು ತಮ್ಮ ನಡುವಿನ ಈ ವಾತಾವರಣಕ್ಕೆ ಕಾರಣವೇನು ಎಂಬುದನ್ನು ತಿಳಿಸಿ, ಆ ಮೂಲಕ ಜವಾಬ್ದಾರಿಯುತ ವ್ಯವಸ್ಥೆಯ ಹಾಗೂ ಸ್ವಾಯತ್ತ ಸಂಸ್ಥೆಯ ಗೌರವವನ್ನು ಎತ್ತಿ ಹಿಡಿಯಬೇಕು,” ಎಂದು ಸಲಹೆ ನೀಡಿದರು.

ಇದೇ ವೇಳೆ ಈ ವಿಚಾರವನ್ನಿಟ್ಟುಕೊಂಡು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ನಡೆಯನ್ನು ಪ್ರಶ್ನಿಸಿದ ಅವರು, “ಕಾಂಗ್ರೆಸ್‌ನವರು ಯಾವ ಪುರುಷಾರ್ಥಕ್ಕಾಗಿ ಇಂದು ಧರಣಿ ನಡೆಸುತ್ತಿದ್ದಾರೆ? ಪ್ರಜಾಪ್ರಭುತ್ವದ ಆಧಾರಸ್ತಂಭವಾಗಿರುವ ಚುನಾವಣಾ ಆಯೋಗವು ಇಷ್ಟು ವರ್ಷಗಳ ಕಾಲ ತನ್ನ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಿಕೊಂಡು ಬಂದಿದೆ. ಕೇವಲ ಆಯುಕ್ತರ ನಡುವಿನ ಪತ್ರ ವ್ಯವಹಾರ ಹಾಗೂ ಭಿನ್ನಾಭಿಪ್ರಾಯಗಳನ್ನು ಮಹಾಪರಾಧ ಎಂಬಂತೆ ಬಿಂಬಿಸಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ತಮ್ಮ ಆಡಳಿತಾವಧಿಯಲ್ಲಿ ಇವರೇನೇನು ಅಕ್ರಮಗಳನ್ನು ಎಸಗಿದ್ದಾರೆ ಎಂಬುದು ದೇಶದ ಜನತೆಗೆ ಚೆನ್ನಾಗಿ ತಿಳಿದಿದೆ,” ಎಂದು ತಿರುಗೇಟು ನೀಡಿದರು.

ಕಾಕ್ರೋಚ್ ಪಾರ್ಟಿ ಹಾಗೂ ಜೆನ್ ಝೀಗಳಿಗೆ ಬಹಿರಂಗ ಆಹ್ವಾನ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಪಟ್ಟು ಹಿಡಿದಿರುವ ‘ಕಾಕ್ರೋಚ್ ಪಾರ್ಟಿ’ಯ ಗಡುವಿನ ಕುರಿತು ವ್ಯಂಗ್ಯವಾಡಿದ ಕೇಂದ್ರ ಸಚಿವರು, “ದೇಶದಲ್ಲಿ ಹೋರಾಟ ಮಾಡುತ್ತಿರುವ ಜೆನ್ ಝೀ (Gen Z) ಯುವಕರಿಗೆ ನಾನು ಆಹ್ವಾನ ನೀಡುತ್ತೇನೆ. ಅವರು ಮೊದಲು ಕರ್ನಾಟಕಕ್ಕೆ ಬರಲಿ. ಇಲ್ಲಿ ಕೆಪಿಎಸ್‌ಸಿಯಲ್ಲಿ ನಡೆದಿರುವ ಭ್ರಷ್ಟಾಚಾರದ ದಂಡಯಾತ್ರೆಯ ವಿರುದ್ಧ ಹೋರಾಟ ನಡೆಸಲಿ. ಕೆಪಿಎಸ್‌ಸಿಯಲ್ಲಿ ಖದೀಮರು ಮತ್ತು ದರೋಡೆಕೋರರು ತುಂಬಿಕೊಂಡಿದ್ದಾರೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಹಾಗಾದರೆ ಅಂತಹ ಅಯೋಗ್ಯರನ್ನು, ಖದೀಮರನ್ನು ಆ ಹುದ್ದೆಗಳಿಗೆ ಅಧ್ಯಕ್ಷರನ್ನಾಗಿ ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿದ್ದು ಯಾರು? ಕೆಪಿಎಸ್‌ಸಿ ಎಂಬ ಸಂಸ್ಥೆ ಕೆಟ್ಟಿಲ್ಲ, ಆದರೆ ಅಲ್ಲಿಗೆ ಸೂಕ್ತ ವ್ಯಕ್ತಿಗಳನ್ನು ನೇಮಿಸದ ಈ ಸರ್ಕಾರವೇ ಸಂಸ್ಥೆಯ ಅಧೋಗತಿಗೆ ಮುಖ್ಯ ಕಾರಣ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಅವರು, “ದೇಶದಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಭಾರಿ ಅನಾಹುತವಾಯಿತು ಎಂದು ಜೆನ್ ಝೀ ಯುವಜನತೆ ಹೋರಾಟಕ್ಕಿಳಿದಿದ್ದರು. ಆದರೆ, ಕರ್ನಾಟಕದ ಕೆಪಿಎಸ್‌ಸಿಯಲ್ಲಿ ಅದಕ್ಕಿಂತಲೂ ನೂರು ಪಟ್ಟು ದೊಡ್ಡ ಮಟ್ಟದ ಹಗರಣ ನಡೆದಿದೆ. ರಾಜ್ಯದ ಯುವಕರಿಗೆ ೭೬ ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಸಿಎಂ ನೀಡಿದ್ದ ಭರವಸೆ ಏನಾಯಿತು? ಕೆಪಿಎಸ್‌ಸಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಯಾವ ರೀತಿಯಲ್ಲಿ ನಡೆಯಿತು ಎಂಬುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದುವರೆಗೂ ಯಾವುದೇ ಸೂಕ್ತ ಉತ್ತರ ನೀಡಿಲ್ಲ. ಕೆಪಿಎಸ್‌ಸಿಯ ಈ ಬೃಹತ್ ಭ್ರಷ್ಟಾಚಾರದ ಜಾಲಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರತ್ಯಕ್ಷ ಹಾಗೂ ಪರೋಕ್ಷ ಕುಮ್ಮಕ್ಕಿದೆ,” ಎಂದು ನೇರ ಆರೋಪ ಮಾಡಿದರು.

ಜ್ಞಾನೇಂದ್ರ ಕುಮಾರ್ ಇಡಿ ದಾಳಿ ಹಾಗೂ ಸಿಐಡಿ ತನಿಖೆಯ ರಹಸ್ಯ: ಇಡಿ (ED) ದಾಳಿಗೊಳಗಾದ ಜ್ಞಾನೇಂದ್ರ ಕುಮಾರ್ ಪ್ರಕರಣವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಸರ್ಕಾರವನ್ನು ತೀವ್ರವಾಗಿ ತೊಳೆಯಲಾರಂಭಿಸಿದರು. “ಇಡಿ ದಾಳಿ ನಡೆದ ಬಳಿಕ ಜ್ಞಾನೇಂದ್ರ ಕುಮಾರ್ ಮೂರು ದಿನಗಳ ಕಾಲ ಎಲ್ಲಿ ನಾಪತ್ತೆಯಾಗಿದ್ದ? ಆತನನ್ನು ಯಾರು, ಎಲ್ಲಿಗೆ ಕರೆದುಕೊಂಡು ಹೋಗಿದ್ದರು? ತದನಂತರ ಆತನನ್ನು ವಾಪಸ್ ಕರೆತಂದು ಖಾಸಗಿ ರೆಸಾರ್ಟ್‌ನಲ್ಲಿ ಬಚ್ಚಿಟ್ಟವರು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಸಚಿವ ಖರ್ಗೆಯವರಾಗಲಿ ಅಥವಾ ಈ ಸರ್ಕಾರವಾಗಲಿ ಉತ್ತರ ನೀಡಿದೆಯಾ? ಸಿಐಡಿ ತನಿಖೆಯ ಮೂಲಕ ಇಡೀ ಅಕ್ರಮವನ್ನು ಮುಚ್ಚಿಹಾಕಲು ಸರ್ಕಾರ ಸಕಲ ಪ್ರಯತ್ನ ನಡೆಸುತ್ತಿದೆ. ಇದೇ ಕಾರಣಕ್ಕೆ ಮಾನ್ಯ ಹೈಕೋರ್ಟ್ ಮಧ್ಯಪ್ರವೇಶಿಸಿ ಹೈಕೋರ್ಟ್ ಮೇಲ್ವಿಚಾರಣೆಯ ಎಸ್‍ಐಟಿ (SIT) ರಚನೆಗೆ ಆದೇಶಿಸಿದೆ. ಸರ್ಕಾರದ ಬಳಿ ಪಾರದರ್ಶಕತೆ ಇದ್ದರೆ ಹೈಕೋರ್ಟ್ ಎಸ್‌ಐಟಿಗೆ ಯಾಕೆ ಹೆದರುತ್ತಿದ್ದೀರಿ? ನಿಮಗೇನು ಭಯ? ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ತನಿಖಾ ಸಂಸ್ಥೆಗಳು ಬೇಕು ಎನ್ನುವ ಒಂದೇ ಕಾರಣಕ್ಕೆ ನೀವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅರ್ಜಿ ಸಲ್ಲಿಸಿದ್ದೀರಿ,” ಎಂದು ಗಂಭೀರವಾಗಿ ತೊಳಲಿದರು.

ಶಾಸಕರ ಕುರಿತ ಡಿಸಿಎಂ ಹೇಳಿಕೆಗೆ ಖಂಡನೆ: ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಕಾಂಗ್ರೆಸ್ ಪಕ್ಷವನ್ನು ಹಾಗೂ ಅವರ ಶಾಸಕರನ್ನು ಆ ದೇವರೇ ಕಾಪಾಡಬೇಕು. ಇಂತಹ ನಾಯಕರನ್ನು ಇಟ್ಟುಕೊಂಡಿದ್ದೇವಲ್ಲ ಎಂದು ಕಾಂಗ್ರೆಸ್‌ನ ಶಾಸಕರಿಗೇ ಅಸಹ್ಯ ಎನಿಸಿರಬೇಕು. ಶಾಸಕರ ಕುರಿತು ಸದನದಲ್ಲಿ ಅಂತಹ ಹಗುರ ಹೇಳಿಕೆ ನೀಡಿದಾಗ ಕಾಂಗ್ರೆಸ್‌ನ ಶಾಸಕರೇ ಎದ್ದು ನಿಂತು ಪ್ರತಿಭಟನೆ ಮಾಡಬೇಕಿತ್ತು. ವಿಧಾನಸೌಧದ ಪವಿತ್ರ ಸದನದಲ್ಲಿ ಸಿಎಂ ಸ್ಥಾನದಲ್ಲಿದ್ದವರು ಇಂತಹ ಮಾತುಗಳನ್ನಾಡಿದಾಗ, ರಾಜ್ಯದ ಎಲ್ಲಾ ೨೨೪ ಶಾಸಕರೂ ಪಕ್ಷಾತೀತವಾಗಿ ಅವರ ಹೇಳಿಕೆಯ ವಿರುದ್ಧ ಒಗ್ಗಟ್ಟಿನಿಂದ ಪ್ರತಿಭಟಿಸಬೇಕಿತ್ತು,” ಎಂದು ತೀವ್ರವಾಗಿ ಹರಿಹಾಯ್ದರು

ಇದನ್ನೂ ಓದಿ: ಮೈಸೂರು ದಸರಾ 2026: ಆನೆಗಳ ಸುರಕ್ಷತೆಗೆ ಆದ್ಯತೆ, ಮರದ ಅಂಬಾರಿ ತಾಲೀಮು ಮುಂದೂಡಿಕೆ!

Leave a Reply

Your email address will not be published. Required fields are marked *