TOP NEWS

DK Shivakumar: ವಿದ್ಯಾರ್ಥಿಗಳ ನೀಟ್ ಪ್ರತಿಭಟನೆ; ತಡವಾಗಿ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ: ಸಿಎಂ ಡಿ ಕೆ ಶಿವಕುಮಾರ್

DK Shivakumar Slams Central Governments Delayed Response to NEET Student Protests

ಬೆಂಗಳೂರು: “ತಿಂಗಳಾದ ಬಳಿಕ ಎಚ್ಚೆತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಲು ಮುಂದಾಗಿರುವುದು ಆಶಾದಾಯಕ ನಡೆ” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ಹೇಳಿದರು.

ಬೆಂಗಳೂರು ಟೆಕ್ ಸಮ್ಮಿಟ್ ಸಿಇಒಗಳ ಉಪಹಾರ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು.

ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಶಿಕ್ಷಣದ ವಿಚಾರದ ಚರ್ಚೆಯ ಕುರಿತು ಕೇಳಿದಾಗ, “ಈಗ ಇಡೀ ದೇಶವೇ ಎಚ್ಚೆತ್ತುಕೊಂಡಿದೆ. ನಾವೆಲ್ಲರೂ ಈ ದೇಶದ ವಿದ್ಯಾರ್ಥಿ, ಯುವ ಜನರ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ” ಎಂದರು.

ಎಲ್ಲರೊಂದಿಗೆ ಮಾತನಾಡಲು ಸಿದ್ಧ

ತಮಿಳುನಾಡು ಸಿಎಂ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ನಾನು ಈಗ ಅದನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಈ ವಾರ ಸಚಿವ ಸಂಪುಟ ವಿಸ್ತರಣೆ ಮತ್ತು ಇತರೇ ವಿಷಯಗಳ ಕಾರ್ಯನಿರತವಾಗಿದ್ದೇವೆ. ಕೆಲವು ವಿಚಾರಗಳಲ್ಲಿ ನಾವು ಎಲ್ಲರೊಂದಿಗೆ ಮಾತನಾಡಲು, ಎಲ್ಲರೊಂದಿಗೆ ಹಂಚಿಕೊಳ್ಳಲು, ಎಲ್ಲರೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ” ಎಂದರು.

ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಫಿಕ್ಸ್?

ನವದೆಹಲಿ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ಪದತ್ಯಾಗ ಮಾಡಬೇಕೆಂಬ ಆಗ್ರಹ ತೀವ್ರಗೊಂಡಿದೆ. ಪ್ರತಿಭಟನಾಕಾರರ ಬಿಗಿ ನಿಲುವಿಗೆ ಕೊನೆಗೂ ಮಣಿದಿರುವ ಕೇಂದ್ರ ಸರ್ಕಾರ, ಸಚಿವರ ರಾಜೀನಾಮೆ ವಿಚಾರವಾಗಿ ಅಂತಿಮ ನಿರ್ಧಾರ ಪ್ರಕಟಿಸಲು ನಾಳೆಯವರೆಗೆ ಕಾಲಾವಕಾಶ ಕೋರಿದೆ. ಇದರೊಂದಿಗೆ ಶಿಕ್ಷಣ ಸಚಿವರ ವಜಾ ಬಹುತೇಕ ಖಚಿತ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ತಪ್ಪಿತಸ್ಥರನ್ನು ಮಟ್ಟಹಾಕಲು ಕಠಿಣ ಕಾನೂನು ತಿದ್ದುಪಡಿ ಹಾಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆಗೆ ಈಗಾಗಲೇ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ದೇಶದ ಯುವ ಸಮೂಹದ ಭವಿಷ್ಯದ ಜೊತೆ ಆಟವಾಡುವ ದಂಧೆಕೋರರ ವಿರುದ್ಧ ರಾಜಿ ಇಲ್ಲದ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ಈ ನಡುವೆ, ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಕಳೆದ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಖ್ಯಾತ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಶಾಂತಿಯುತವಾಗಿ ಧರಣಿ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪೊಲೀಸ್ ಕೇಸ್ ಅಥವಾ ಎಫ್‌ಐಆರ್ ದಾಖಲಿಸುವುದಿಲ್ಲ ಎಂದು ಸರ್ಕಾರ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಆದರೆ, ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಘಟನೆಯು ಸರ್ಕಾರದ ಪ್ರತಿನಿಧಿಗಳೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದೆ. ಸಚಿವರ ರಾಜೀನಾಮೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರವು ಒಂದು ದಿನದ ಸಮಯಾವಕಾಶ ಕೇಳಿದೆ ಎಂದು ಸಭೆಯ ಬಳಿಕ ಸಿಜೆಪಿ ಮುಖಂಡರು ಸ್ಪಷ್ಟಪಡಿಸಿದ್ದು, ಪ್ರಧಾನ್ ಅಧಿಕಾರದಿಂದ ಕೆಳಗಿಳಿಯುವವರೆಗೂ ಹೋರಾಟ ವಿಶ್ರಮಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸದ್ಯ ರಾಜಧಾನಿಯ ಜಂತರ್ ಮಂತರ್‌ನತ್ತ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಧಾವಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಮೆಟ್ರೋ ರೈಲು ನಿಗಮವು ನಗರದ ಪ್ರಮುಖ 17 ಮೆಟ್ರೋ ನಿಲ್ದಾಣಗಳ ಸೇವೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ. ಸಚಿವರ ಭವಿಷ್ಯ ನಿರ್ಧಾರವಾಗಲಿರುವ ನಾಳಿನ ಬೆಳವಣಿಗೆಯತ್ತ ಈಗ ಇಡೀ ದೇಶ ಕಣ್ಣಿಟ್ಟಿದೆ.

ಇದನ್ನೂ ಓದಿ: ಶ್ರವಣಬೆಳಗೊಳ-ಮಡಿಕೇರಿ ರೈಲ್ವೆ ಮಾರ್ಗ: ನಿರೀಕ್ಷಿತ ಸಂಚಾರ ವಿರಳ, ಯೋಜನೆಗೆ ತೊಡಕು

Leave a Reply

Your email address will not be published. Required fields are marked *