ನವದೆಹಲಿ: ದೇಶಾದ್ಯಂತ ತೀವ್ರ ಆಂದೋಲನಕ್ಕೆ ಕಾರಣವಾಗಿರುವ ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಬೆನ್ನಲ್ಲೇ, ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ (Big News) ತನ್ನ ಕಾನೂನು ಚೌಕಟ್ಟನ್ನು ಮತ್ತಷ್ಟು ಬಲಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ವಿಡಿಯೋ ಸಂದೇಶದ ಮೂಲಕ ಕಠಿಣ ಕ್ರಮದ ಭರವಸೆ ನೀಡಿದ ಮರುದಿನವೇ, ಕೇಂದ್ರ ಸರ್ಕಾರವು 2024ರ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆಗೆ ಮಹತ್ವದ ತಿದ್ದುಪಡಿಗಳನ್ನು ತಂದಿದೆ. ಪರೀಕ್ಷಾ ವಂಚನೆ ಮತ್ತು ಪೇಪರ್ ಲೀಕ್ ದಂಧೆಗೆ ಸಂಪೂರ್ಣ ಬ್ರೇಕ್ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪನೆ
ಮೂಲಗಳ ಪ್ರಕಾರ, ಈ ಹೊಸ ತಿದ್ದುಪಡಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಮುಖ ನಿಯಮವನ್ನು ಸೇರಿಸಲಾಗಿದೆ. ಈ ನ್ಯಾಯಾಲಯಗಳು ಕೇವಲ ಮೂರು ತಿಂಗಳ ಒಳಗಾಗಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆ ಪ್ರಕಟಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ, ಅಕ್ರಮದಲ್ಲಿ ಭಾಗಿಯಾಗುವ ಜಾಲಗಳಿಗೆ ವಿಧಿಸಲಾಗುವ ಜೈಲು ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಈ ಅಪರಾಧಕ್ಕೆ 3 ರಿಂದ 5 ವರ್ಷಗಳ ಜೈಲು ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸುವ ನಿಯಮವಿದ್ದು, ಹೊಸ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ತಪ್ಪಿತಸ್ಥರಿಗೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಬರೋಬ್ಬರಿ 10 ಕೋಟಿ ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಸಂಘಟಿತ ಅಪರಾಧಗಳ ಸಂದರ್ಭದಲ್ಲಿ ಕನಿಷ್ಠ 1 ಕೋಟಿ ರೂಪಾಯಿ ದಂಡದೊಂದಿಗೆ ಕಠಿಣ ಶಿಕ್ಷೆ ಇರಲಿದ್ದು, ಈ ನೂತನ ತಿದ್ದುಪಡಿ ಮಸೂದೆಯನ್ನು ಮುಂಬರುವ ಸೋಮವಾರ ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ.
ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ
ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 150ಕ್ಕೂ ಹೆಚ್ಚು ಪೇಪರ್ ಲೀಕ್ ಪ್ರಕರಣಗಳು ನಡೆದಿದ್ದರೂ ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಇಂತಹ ಪ್ರಕರಣಗಳ ಆಲಿಕೆಗೆ ವಿಶೇಷ ನ್ಯಾಯಾಲಯ ಘೋಷಿಸಿದ ನಂತರ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಸಾಮಾನ್ಯ ವಿಷಯವಲ್ಲ, ಇದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಒಪ್ಪಿಕೊಂಡಿರುವ ಪ್ರಧಾನಿ, ಕಳೆದ ಎರಡುವರೆ ತಿಂಗಳಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಆರೋಪಿಗಳನ್ನು ಜೈಲಿಗಟ್ಟಲಾಗಿದೆ ಎಂದಿದ್ದಾರೆ. ವಿದ್ಯಾರ್ಥಿಗಳ ಒಂದು ವರ್ಷ ವ್ಯರ್ಥವಾಗದಂತೆ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತಕ್ಷಣವೇ ಪರೀಕ್ಷೆಗಳನ್ನು ಮರು ಆಯೋಜಿಸಲು ಸರ್ಕಾರ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿದೆ ಎಂದು ಅವರು ವಿವರಿಸಿದ್ದಾರೆ. ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯ ನಂತರ ಸಂಸತ್ತಿನ ಮುಂದಿನ ವಾರದ ಅಧಿವೇಶನದಲ್ಲೇ ಈ ಮಸೂದೆಯನ್ನು ಆದಷ್ಟು ಬೇಗ ಪಾಸ್ ಮಾಡಲು ಪ್ರಯತ್ನಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ. ಆದರೆ ಪ್ರಧಾನಿ ಅವರ ಈ ನಡೆಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ವಿದ್ಯಾರ್ಥಿಗಳು ಈಗಲೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ ಎಂದು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ಹೊಸ ಏರ್ಲೈನ್ಸ್ ಆರಂಭಿಸುವ ಸುದ್ದಿ ಸಂಪೂರ್ಣ ಸುಳ್ಳು: ಅಧಿಕೃತ ಸ್ಪಷ್ಟನೆ ನೀಡಿದ ಅದಾನಿ ಸಂಸ್ಥೆ
