ನವದೆಹಲಿ: ಅದಾನಿ ಗ್ರೂಪ್ (Adani) ಶೀಘ್ರದಲ್ಲೇ ವಿಮಾನ ಯಾನ (ಏರ್‌ಲೈನ್) ಉದ್ಯಮಕ್ಕೆ ಕಾಲಿಡಲಿದೆ ಎಂದು ಹರಿದಾಡುತ್ತಿದ್ದ ವರದಿಗಳನ್ನು ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯು ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಕಂಪನಿಯು, ವಿಮಾನ ಯಾನ ಕ್ಷೇತ್ರಕ್ಕೆ ಪ್ರವೇಶಿಸುವ ಯಾವುದೇ ಪ್ರಸ್ತಾಪವನ್ನು ತಾವು ಪರಿಶೀಲಿಸುತ್ತಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸಂಪೂರ್ಣ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದೆ.
ವಿರೋಧ ವ್ಯಕ್ತಪಡಿಸಿದ್ದ ಇಂಡಿಗೋ-ಏರ್ ಇಂಡಿಯಾ
ಅದಾನಿ ಸಮೂಹವು ಏರ್‌ಲೈನ್ ಉದ್ಯಮಕ್ಕೆ ಕಾಲಿಡಲು ಆಸಕ್ತಿ ತೋರಿದೆ ಎಂಬ ಸುದ್ದಿಗಳು ಹೊರಬಿದ್ದ ಬೆನ್ನಲ್ಲೇ, ದೇಶದ ಪ್ರಮುಖ ವಿಮಾನ ಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಏರ್ ಇಂಡಿಯಾ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡುವ ಸಂಸ್ಥೆಯೇ ವಿಮಾನ ಯಾನ ಉದ್ಯಮವನ್ನೂ ನಡೆಸಿದರೆ ಹಿತಾಸಕ್ತಿಗಳ ಸಂಘರ್ಷ (ಕಾನ್ಫ್ಲಿಕ್ಟ್ ಆಫ್ ಇಂಟರೆಸ್ಟ್) ಉಂಟಾಗುತ್ತದೆ ಹಾಗೂ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆ ಇಲ್ಲದಂತಾಗುತ್ತದೆ ಎಂದು ಈ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದ್ದವು. ವಿಮಾನ ನಿಲ್ದಾಣದ ಮಾಲೀಕರು ಏರ್‌ಲೈನ್ ಹೊಂದುವುದಕ್ಕೆ ಇರುವ ನಿಯಮಾವಳಿಗಳ ಸಡಿಲಿಕೆಗೆ ಅದಾನಿ ಸಂಸ್ಥೆ ಸರ್ಕಾರವನ್ನು ಕೋರಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ವಾಗ್ದಾಳಿ ನಡೆದಿತ್ತು.
ವದಂತಿಗಳಿಗೆ ತೆರೆ ಎಳೆದ ಸಂಸ್ಥೆ
ಈ ಕುರಿತು ಪ್ರತಿಕ್ರಿಯಿಸಿದ್ದ ಇಂಡಿಗೋ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ, ವಿಮಾನ ನಿಲ್ದಾಣದ ಮಾಲೀಕರೇ ಏರ್‌ಲೈನ್ ನಡೆಸುವುದು ಜಾಗತಿಕವಾಗಿ ಎಲ್ಲೂ ಇಲ್ಲ. ಇದು ಹಿತಾಸಕ್ತಿಗಳ ಸಂಘರ್ಷಕ್ಕೆ ದಾರಿ ಮಾಡಿಕೊಡುವುದಲ್ಲದೆ, ದೀರ್ಘಾವಧಿಯಲ್ಲಿ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದರು. ಆದರೆ, ಈಗ ಅದಾನಿ ಸಂಸ್ಥೆಯು ಈ ಎಲ್ಲಾ ವರದಿಗಳನ್ನು ಸುಳ್ಳು ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದೆ.
ಇದನ್ನೂ ಓದಿ: ಉಜ್ವಲ ಫಲಾನುಭವಿಗಳಿಗೆ ಮತ್ತಷ್ಟು ನಿರಾಳ: ತೈಲ ಕಂಪನಿಗಳ ನಷ್ಟ ತಾನೇ ಭರಿಸಿದ ಸರ್ಕಾರ
