Ram Gopal Varma: ಶಿಕ್ಷಣ ಪದ್ಧತಿಯನ್ನು ಹೂತು ಹಾಕಿ”: ಎಐ ಅಬ್ಬರದ ನಡುವೆ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಪೋಸ್ಟ್!

Education should be killed Ram Gopal Varma sparks online storm with sharp critique of traditional schooling

ಮುಂಬೈ: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ನೀಟ್ ಪರೀಕ್ಷಾ ಅಕ್ರಮ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೆನ್ನಲ್ಲೇ, ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ವೈದ್ಯಕೀಯ ಶಿಕ್ಷಣದ ಭವಿಷ್ಯದ ಕುರಿತು ಹಂಚಿಕೊಂಡಿರುವ ಸುದೀರ್ಘ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದರೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಅಬ್ಬರ ಜೋರಾಗಿರುವ ಈ ಕಾಲದಲ್ಲಿ, ಇನ್ನು ಮುಂದೆ ಸಾಂಪ್ರದಾಯಿಕ ವೈದ್ಯಕೀಯ ಕೋರ್ಸ್‌ಗಳ ಅಗತ್ಯವೇನಿದೆ ಎಂದು ಪ್ರಶ್ನಿಸಿರುವ ವರ್ಮಾ, ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಎಐ ತಂತ್ರಜ್ಞಾನದ ಕಡೆಗೆ ಮುನ್ನಡೆಸಬೇಕು

ದೇಶದಲ್ಲಿ ನೀಟ್ ಪರೀಕ್ಷಾ ಅಕ್ರಮವನ್ನು ವಿರೋಧಿಸಿ ವಿರೋಧ ಪಕ್ಷಗಳು ನಡೆಸಿದ ತೀವ್ರ ಪ್ರತಿಭಟನೆಗೆ ಮಣಿದು ಶಿಕ್ಷಣ ಸಚಿವರು ರಾಜೀನಾಮೆ ನೀಡಿದ ಎರಡು ದಿನಗಳ ನಂತರ ವರ್ಮಾ ಈ ಪೋಸ್ಟ್ ಹಾಕಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ “ಶಿಕ್ಷಣ ವ್ಯವಸ್ಥೆಯನ್ನು ಕೊಲ್ಲಬೇಕು” ಎಂಬ ಕಟು ಶೀರ್ಷಿಕೆಯಡಿ ಬರೆದುಕೊಂಡಿರುವ ಅವರು, ಪೋಷಕರು ಮತ್ತು ಹಿರಿಯರು ತಮ್ಮ ಮಕ್ಕಳನ್ನು ಹಳೆಯ ಕಾಲದ ಶಿಕ್ಷಣ ಪದ್ಧತಿಗೆ ತಳ್ಳುವ ಬದಲು ಎಐ ತಂತ್ರಜ್ಞಾನದ ಕಡೆಗೆ ಮುನ್ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

ನಮ್ಮ ದೇಶದ ಸಾಂಪ್ರದಾಯಿಕ ವೈದ್ಯಕೀಯ ಶಿಕ್ಷಣ ಪದ್ಧತಿಯನ್ನು ಕಟುವಾಗಿ ಟೀಕಿಸಿರುವ ವರ್ಮಾ, ಕೇವಲ ಬಾಯಿಪಾಠ ಮಾಡುವುದು, ಪರೀಕ್ಷೆ ಬರೆದು ಪಾಸಾಗುವುದು, ಪದವಿ ಪಡೆದು ಕೆಲಸ ಹಿಡಿಯುವುದು ಎಂಬ ಹಳೆಯ ಸೂತ್ರದ ಕಾಗದವನ್ನು ಈಗ ಹರಿದು ಹಾಕುವ ಸಮಯ ಬಂದಿದೆ ಎಂದಿದ್ದಾರೆ. ಒಬ್ಬ ವೈದ್ಯಕೀಯ ವಿದ್ಯಾರ್ಥಿ ಎಂಬಿಬಿಎಸ್ ಮಾಡಲು ಐದು ವರ್ಷ, ಸ್ನಾತಕೋತ್ತರ ಪದವಿಗೆ ಎರಡು ವರ್ಷ ಹಾಗೂ ಸ್ಪೆಷಲೈಸೇಶನ್ ಮಾಡಲು ಮತ್ತೊಂದು ಮೂರು ವರ್ಷ ಸೇರಿದಂತೆ ಒಟ್ಟು ಹತ್ತು ವರ್ಷಗಳ ಕಾಲ ಓದುತ್ತಾನೆ. ಆದರೆ ಇಷ್ಟೆಲ್ಲಾ ಕಷ್ಟಪಟ್ಟು ಆತ ಕಲಿಯುವ ವಿಷಯಗಳು ಈಗಾಗಲೇ ಪ್ರತಿಯೊಬ್ಬರ ಜೇಬಿನಲ್ಲಿರುವ ಮೊಬೈಲ್ ಫೋನ್‌ನ ಎಐ ತಂತ್ರಜ್ಞಾನಕ್ಕೆ ಗೊತ್ತಿರುತ್ತದೆ. ವೈದ್ಯರು ರೋಗಿಗಳನ್ನು ತಪಾಸಣೆ ನಡೆಸಿ, ಹಳೆಯ ಜ್ಞಾನದ ಆಧಾರದ ಮೇಲೆ ಕಾಯಿಲೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುತ್ತಾರೆ. ಆದರೆ ಎಐ ತಂತ್ರಜ್ಞಾನವು ಯಾವುದೇ ಸುಸ್ತು ಅಥವಾ ಗೊಂದಲವಿಲ್ಲದೆ, ಮನುಷ್ಯರಿಗಿಂತ ಅತ್ಯಂತ ನಿಖರವಾಗಿ ಹಾಗೂ ವೇಗವಾಗಿ ಈ ಕೆಲಸವನ್ನು ಮಾಡಬಲ್ಲದು ಎಂದು ವರ್ಮಾ ವಾದಿಸಿದ್ದಾರೆ.

ಆಧುನಿಕ ಎಐ ತಂತ್ರಜ್ಞಾನಕ್ಕೆ ಬುನಾದಿ ಹಾಕಿದ ಜೆಫ್ರಿ ಹಿಂಟನ್ ಅವರೇ ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ಕೂಗಿ ಹೇಳುತ್ತಿದ್ದಾರೆ. ಮುಂದಿನ ಒಂದೆರಡು ವರ್ಷಗಳಲ್ಲಿ ವೈದ್ಯರು ಮಾಡುವ ಎಲ್ಲಾ ಕೆಲಸಗಳನ್ನು ಎಐ ತಂತ್ರಜ್ಞಾನವೇ ವಹಿಸಿಕೊಳ್ಳಲಿದೆ ಎಂದು ತಜ್ಞರು ಒಪ್ಪಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವಿದ್ಯಾರ್ಥಿಗಳು ಇನ್ನೂ ಏಕೆ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ ಅಥವಾ ವೈದ್ಯಕೀಯ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ ಎಂದು ವರ್ಮಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಾಯಿಲೆ ಪತ್ತೆ ಹಚ್ಚುವುದು ಡಿಜಿಟಲ್ ರೂಪದಲ್ಲಿ ಮತ್ತು ಶಸ್ತ್ರಚಿಕಿತ್ಸೆಗಳು ರೋಬೋಟ್‌ಗಳ ಮೂಲಕ ನಡೆಯುವಾಗ, ಮಾನವ ವೈದ್ಯರು ಕೇವಲ ಮಧ್ಯವರ್ತಿಗಳಾಗುತ್ತಾರೆ ಅಷ್ಟೆ. ಅದಕ್ಕಾಗಿ 10 ವರ್ಷಗಳ ಕಾಲ ಕೋರ್ಸ್ ಮಾಡುವ ಅಗತ್ಯವೇ ಇರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯು ಈಗಾಗಲೇ ಶವಗಾರದಲ್ಲಿದೆ ಎಂದು ಜರೆದಿರುವ ವರ್ಮಾ, ನನ್ನ ಫೋನ್‌ಗೆ ಗೊತ್ತಿರುವ ವಿಷಯವನ್ನು ನಾನೇಕೆ ಬಾಯಿಪಾಠ ಮಾಡಬೇಕು ಎಂದು ಪ್ರಶ್ನಿಸುವ ಇಂದಿನ ಯುವಕರನ್ನು ಹುಚ್ಚರಂತೆ ನೋಡಲಾಗುತ್ತಿದೆ. ಪೋಷಕರು ಮತ್ತು ಶಿಕ್ಷಕರು ಈ ಕಹಿಸತ್ಯವನ್ನು ಒಪ್ಪಿಕೊಳ್ಳದೆ ಭ್ರಮೆಯಲ್ಲಿದ್ದಾರೆ. ಹಿರಿಯರ ಅಜ್ಞಾನದಿಂದಾಗಿ ಯುವ ಪೀಳಿಗೆಯ ಭವಿಷ್ಯ ಹಾಳಾಗುವ ಮುನ್ನ, ಇಂದಿನ ಶಿಕ್ಷಣ ಪದ್ಧತಿಯನ್ನು ಕಸದ ಬುಟ್ಟಿಗೆ ಎಸೆದು ಯುವಕರನ್ನು ಸೂಪರ್ ಫಾಸ್ಟ್ ಆಗಿ ತಂತ್ರಜ್ಞಾನದ ಕಡೆಗೆ ತಿರುಗಿಸುವುದೊಂದೇ ಉಳಿದಿರುವ ಏಕೈಕ ದಾರಿ ಎಂದು ಅವರು ತಮ್ಮ ಪೋಸ್ಟ್ ಕೊನೆಗೊಳಿಸಿದ್ದಾರೆ.

ವಿವಾದ ಹುಟ್ಟುಹಾಕಿದ ಹೇಳಿಕೆ

ರಾಮ್ ಗೋಪಾಲ್ ವರ್ಮಾ ಅವರ ಈ ವಿವಾದಾತ್ಮಕ ಹೇಳಿಕೆಗೆ ಇಂಟರ್ನೆಟ್‌ನಲ್ಲಿ ಪರ-ವಿರೋಧದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸರ್ಜರಿಗಳು ರೋಬೋಟ್ ಮೂಲಕ ನಡೆಯುತ್ತಿವೆ ಎನ್ನುವುದು ತಪ್ಪು ಮಾಹಿತಿ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೊಬ್ಬರು ಭಾರತದ ಅತಿ ದೊಡ್ಡ ಹಗರಣವೇ ಶಿಕ್ಷಣ ವ್ಯವಸ್ಥೆ, ಎಲ್‌ಕೆಜಿ ಮಗುವಿಗೆ 4 ಲಕ್ಷ ರೂಪಾಯಿ ಫೀಸ್ ಕಟ್ಟುವ ಪೋಷಕರು ವರ್ಮಾ ಹೇಳಿದ ಕಹಿಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬೆಂಬಲಿಸಿದ್ದಾರೆ. ಇನ್ನೊಂದೆಡೆ, ಬಡ ಮಕ್ಕಳಿಗೆ ಇಂದಿಗೂ ಶಿಕ್ಷಣವೇ ಆಸರೆಯಾಗಿದ್ದು, ಎಲ್ಲರಿಗೂ ತಂತ್ರಜ್ಞಾನದ ಹಾದಿ ಸುಲಭವಲ್ಲ ಎಂಬ ಕಾಮೆಂಟ್‌ಗಳೂ ಬಂದಿವೆ.

ದೇಶವನ್ನು ತಲ್ಲಣಗೊಳಿಸಿದ ಈ ಪರೀಕ್ಷಾ ಅಕ್ರಮದ ಕುರಿತು ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಪ್ರತಿಕ್ರಿಯಿಸಿದ್ದು, ಪೇಪರ್ ಲೀಕ್ ಪ್ರಕರಣವು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಈ ವಿದ್ಯಾರ್ಥಿ ಹೋರಾಟ ರಾಜಕೀಯವಾಗಿ ಹಾದಿ ತಪ್ಪಬಾರದು ಎಂದಿದ್ದರು. ಇವರೊಂದಿಗೆ ನಟರಾದ ನಸೀರುದ್ದೀನ್ ಶಾ, ರತ್ನಾ ಪಾಠಕ್ ಶಾ, ಅಭಯ್ ಡಿಯೋಲ್, ಸೋನಾಕ್ಷಿ ಸಿನ್ಹಾ ಮತ್ತು ರಿತೇಶ್ ದೇಶ್‌ಮುಖ್ ಸೇರಿದಂತೆ ಹಲವು ಪ್ರಮುಖ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ಬಹಿರಂಗ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: ವಿಜಯ್ ಭೇಟಿಯಾಗಿ ಕೇಕ್ ಕತ್ತರಿಸೋದು ತ್ರಿಷಾ ಮಾತ್ರ! ಮುಂದೊಂದು ದಿನ ಅವರೇ ಡಿಸಿಎಂ ಆದ್ರೂ ಅಚ್ಚರಿಯಿಲ್ಲ: ಮಾಜಿ ಸಚಿವ ಉದಯಕುಮಾರ್ ವ್ಯಂಗ್ಯ

Leave a Reply

Your email address will not be published. Required fields are marked *