ಕೋಲ್ಕತಾ: ಪಶ್ಚಿಮ ಬಂಗಾಳದ (West Bengal) ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟದ ಮೆನುವಿನಿಂದ ಮೊಟ್ಟೆಯನ್ನು ತೆಗೆದುಹಾಕಲಾಗುತ್ತದೆ ಎಂಬ ವದಂತಿಗಳು ಇಡೀ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಈ ವರದಿಗಳ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (TMC) ರಾಜ್ಯಸಭಾ ನಾಯಕ ಡೆರೆಕ್ ಒಬ್ರಿಯಾನ್ ಅವರು ಬುಧವಾರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹೊಸ ಸರ್ಕಾರವು ಶಾಲಾ ಮಕ್ಕಳ ಪೌಷ್ಟಿಕಾಂಶವನ್ನು ಕಸಿದುಕೊಳ್ಳುತ್ತಿದೆ ಮತ್ತು ಬಂಗಾಳದಲ್ಲಿ ಬಲವಂತವಾಗಿ ‘ಸಸ್ಯಾಹಾರವನ್ನು ಹೇರಲು’ ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಸ್ಕಾನ್ ಸಂಸ್ಥೆಗೆ ಬಿಸಿಯೂಟದ ಜವಾಬ್ದಾರಿ
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ಸರ್ಕಾರವು ಕೋಲ್ಕತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟವನ್ನು ತಯಾರಿಸಿ ವಿತರಿಸುವ ಜವಾಬ್ದಾರಿಯನ್ನು ಇಸ್ಕಾನ್ (ISKCON) ಸಂಸ್ಥೆಗೆ ವಹಿಸಲು ನಿರ್ಧರಿಸಿತ್ತು. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಮೆನು ಎಂಬ ಪಟ್ಟಿಯೊಂದು ವೈರಲ್ ಆಗಿದ್ದು, ಅದರಲ್ಲಿ ಮೊಟ್ಟೆಯ ಬದಲಿಗೆ ಪನೀರ್ ಮತ್ತು ಸೋಯಾಬೀನ್ ಆಧಾರಿತ ಸಸ್ಯಹಾರಿ ಪ್ರೊಟೀನ್ ಆಹಾರಗಳನ್ನು ನೀಡಲಾಗುವುದು ಎಂದು ಉಲ್ಲೇಖಿಸಲಾಗಿತ್ತು. ಇದುವೇ ಟಿಎಂಸಿ ನಾಯಕರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿತ್ತು.
ಈ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತೀಕ್ಷ್ಣವಾಗಿ ಬರೆದುಕೊಂಡಿದ್ದ ಡೆರೆಕ್ ಒಬ್ರಿಯಾನ್, “ಚುನಾವಣಾ ಪ್ರಚಾರದ ಸಮಯದಲ್ಲಿ ಮತಕ್ಕಾಗಿ ನಡೆದ ಮೀನು ತಿನ್ನುವ ತಮಾಷೆಯ ನಾಟಕ ಮುಗಿದ ನಂತರ, ಗುಜರಾತ್ ಜಿಮ್ಖಾನಾದ ಅಸಲಿ ಮುಖ ಈಗ ಅನಾವರಣಗೊಂಡಿದೆ. ರಾಜಕೀಯ ವಿರೋಧಿಗಳ ಮೇಲೆ ಮೊಟ್ಟೆ ಎಸೆಯುವ ಇವರು, ಇತ್ತ ಮಕ್ಕಳ ಬಿಸಿಯೂಟದಿಂದಲೇ ಮೊಟ್ಟೆಯನ್ನು ಕಿತ್ತುಕೊಂಡು ಅವರ ಪೌಷ್ಟಿಕಾಂಶಕ್ಕೆ ಕುತ್ತು ತರುತ್ತಿದ್ದಾರೆ. ಬಂಗಾಳದ ಮೇಲೆ ಇಂತಹ ಸಸ್ಯಾಹಾರ ಹೇರಿಕೆಯನ್ನು ಇಲ್ಲಿನ ಜನತೆ ಕಡಾಖಂಡಿತವಾಗಿ ತಿರಸ್ಕರಿಸುತ್ತಾರೆ” ಎಂದು ಕಿಡಿಕಾರಿದ್ದರು.
After the fish🐠eating tamasha during the election campaign, the Gujarat Gymkhana finally reveals itself. New BJP govt at work in Bengal. Throw eggs at rivals. But DEPRIVE CHILDREN of nutrition by taking🥚🥚eggs off from midday meals. Imposing vegetarianism. Bengal rejects this
— Derek O'Brien | ডেরেক ও'ব্রায়েন (@derekobrienmp) June 24, 2026
ವೈರಲ್ ಮೆನು ಬಗ್ಗೆ ಸ್ಪಷ್ಟನೆ ನೀಡಿದ ಇಸ್ಕಾನ್ ಉಪಾಧ್ಯಕ್ಷ
ಈ ವಿವಾದ ಇಡೀ ರಾಜ್ಯದಲ್ಲಿ ಭಾರಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗುತ್ತಿದ್ದಂತೆಯೇ, ಇಸ್ಕಾನ್ ಕೋಲ್ಕತಾ ಘಟಕದ ಉಪಾಧ್ಯಕ್ಷರಾದ ರಾಧಾರಮಣ್ ದಾಸ್ ಅವರು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಅಧಿಕೃತ ಸ್ಪಷ್ಟನೆ ನೀಡಿ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಧ್ಯಾಹ್ನದ ಬಿಸಿಯೂಟದ ಪ್ರಸ್ತಾಪಿತ ಮೆನು ಸುಳ್ಳಾಗಿದ್ದು, ಅಂತಹ ಯಾವುದೇ ನಿರ್ಧಾರವನ್ನು ಇಸ್ಕಾನ್ ಸಂಸ್ಥೆ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಕೋಲ್ಕತಾದ ಶಾಲೆಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಸಂಬಂಧಿಸಿದಂತೆ ಕೆಲವರು ನಕಲಿ ಮೆನು ಪಟ್ಟಿಯನ್ನು ಹಂಚಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ನಾವು ಅಂತಹ ಯಾವುದೇ ಮೆನುವನ್ನು ಅಂತಿಮಗೊಳಿಸಿಲ್ಲ ಮತ್ತು ಈ ಪಟ್ಟಿಯನ್ನು ನಮ್ಮ ಸಂಸ್ಥೆಯಿಂದ ಬಿಡುಗಡೆ ಮಾಡಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಸರ್ಕಾರದೊಂದಿಗೆ ಚರ್ಚಿಸಿ ಮೆನು ಅಂತಿಮಗೊಂಡ ತಕ್ಷಣ, ನಾವೇ ಅಧಿಕೃತವಾಗಿ ಪ್ರಕಟಿಸುತ್ತೇವೆ. ದಯವಿಟ್ಟು ಯಾರೂ ಇಂತಹ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ” ಎಂದು ರಾಧಾರಮಣ್ ದಾಸ್ ವಿನಂತಿಸಿದ್ದಾರೆ. ಇಸ್ಕಾನ್ ಸಂಸ್ಥೆಯ ಈ ಸ್ಪಷ್ಟನೆಯಿಂದಾಗಿ ಸದ್ಯಕ್ಕೆ ಎದ್ದಿದ್ದ ಮೊಟ್ಟೆ ವಿವಾದದ ಬಿರುಗಾಳಿ ಕೊಂಚ ತಣ್ಣಗಾದಂತಾಗಿದೆ.
ಇದನ್ನೂ ಓದಿ: ₹370 ಬಿರಿಯಾನಿ ಕಾಮೆಂಟ್ ವಿವಾದ; ಕಾಮಿಡಿಯನ್‌ಗಳ ಕ್ಷಮಾಪಣೆ ತಿರಸ್ಕರಿಸಿದ ಮಹಿಳಾ ಆಯೋಗ!
