ನವದೆಹಲಿ: ಸ್ಟ್ಯಾಂಡ್ಅಪ್ ಕಾಮಿಡಿ ಶೋ ಒಂದರಲ್ಲಿ ಪ್ರೇಕ್ಷಕನೊಬ್ಬ ಮಹಿಳೆಯರ ಕುರಿತು ಆಡಿದ್ದ ವಿಕೃತ ಮಾತುಗಳು ತೀವ್ರ ಸ್ವರೂಪದ ವಿವಾದ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಾಮಿಡಿಯನ್ ಪ್ರಣೀತ್ ಮೋರೆ (Pranit More) ರಾಷ್ಟ್ರೀಯ ಮಹಿಳಾ ಆಯೋಗದ (NCW) ಎದುರು ವಿಚಾರಣೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದ ₹370 ಬಿರಿಯಾನಿ ಕಥೆ ಕೆಲ ದಿನಗಳ ಹಿಂದೆ ನಡೆದಿದ್ದ ಕಾಮಿಡಿ ಪ್ರದರ್ಶನದಲ್ಲಿ ಹಿಮಾಂಶು ಜಾಂಗ್ರಾ ಎಂಬ 23 ವರ್ಷದ ಯುವಕನೊಬ್ಬ ತಾನು ಮಹಿಳೆಯೊಬ್ಬಳ ಜೊತೆ ಡೇಟಿಂಗ್ಗೆ ಹೋಗಿದ್ದ ಸಂದರ್ಭವನ್ನು ಹಂಚಿಕೊಂಡಿದ್ದ. ಅಲ್ಲಿ ಆಕೆಗೆ ₹370 ಕೊಟ್ಟು ಚಿಕನ್ ಬಿರಿಯಾನಿ ಕೊಡಿಸಿದ್ದಕ್ಕೆ ಪ್ರತಿಯಾಗಿ, ಆಕೆಯಿಂದ ತನಗೆ ದೈಹಿಕ ಸುಖದ ರೂಪದಲ್ಲಿ ‘ರಿಟರ್ನ್’ ಸಿಗಬೇಕಿತ್ತು ಎಂಬರ್ಥದಲ್ಲಿ ಸಾರ್ವಜನಿಕವಾಗಿ ಅಸಹ್ಯ ಕಾಮೆಂಟ್ ಮಾಡಿದ್ದ. ಈ ಆಕ್ಷೇಪಾರ್ಹ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಂತೆಯೇ, ರಾಷ್ಟ್ರೀಯ ಮಹಿಳಾ ಆಯೋಗವು ತಕ್ಷಣವೇ ಸ್ವಯಂಪ್ರೇರಿತವಾಗಿ (Suo Motu) ಕೇಸ್ ದಾಖಲಿಸಿಕೊಂಡಿತ್ತು.
Pranir More and Madhur Virli appears before NCW
— Gagan Choudhary (@trigguuuu) June 23, 2026
Looks Madhur Virli has zero regret on whatever he said was completely wrong. Did he ever apologize? pic.twitter.com/0LHRR8NKvv
ಈ ವಿವಾದಿತ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದ ಕಾಮಿಡಿಯನ್ ಪ್ರಣೀತ್ ಮೋರೆ, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಯೂ-ಟರ್ನ್ ಹೊಡೆದು ಕ್ಷಮೆಯಾಚಿಸಿದ್ದರು. ಆ ಯುವಕನ ಮಾತುಗಳನ್ನು ಕೇಳಿ ಆ ಸಮಯದಲ್ಲಿ ನಕ್ಕು ಸುಮ್ಮನಾಗುವ ಬದಲು, ವೇದಿಕೆಯ ಮೇಲಿಂದಲೇ ಅದನ್ನು ಖಂಡಿಸಬೇಕಿತ್ತು ಎಂದು ಪ್ರಣೀತ್ ಒಪ್ಪಿಕೊಂಡಿದ್ದರು. ಮತ್ತೊಂದೆಡೆ, ವಿವಾದ ಸೃಷ್ಟಿಸಿದ್ದ ಹಿಮಾಂಶು ಕೂಡ ಸಾರ್ವಜನಿಕವಾಗಿ ಕ್ಷಮೆ ಕೋರಿ ತನ್ನೆಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬಂದ್ ಮಾಡಿದ್ದ. ಆದಾಗ್ಯೂ, ಮಹಿಳಾ ಆಯೋಗವು ಇವರಿಬ್ಬರಿಗೂ ಸಮನ್ಸ್ ಜಾರಿ ಮಾಡಿ ಜೂನ್ 22 ರಂದು ವಿಚಾರಣೆಗೆ ಹಾಜರಾಗಲು ಆದೇಶಿಸಿತ್ತು.
ಕೋರ್ಟ್ ಕಚೇರಿ ಮೆಟ್ಟಿಲೇರಿದ ಕಾಮಿಡಿಯನ್ಸ್ ನಿಗದಿತ ಸಮಯದಂತೆ ಕಾಮಿಡಿಯನ್ ಪ್ರಣೀತ್ ಮೋರೆ ಹಾಗೂ ಹಿಮಾಂಶು ಜಾಂಗ್ರಾ ಇಬ್ಬರೂ ಮುಖಕ್ಕೆ ಮಾಸ್ಕ್ ಧರಿಸಿ ಆಯೋಗದ ಮುಂದೆ ಹಾಜರಾದರು. ಇದೇ ವೇಳೆ, ಮಹಿಳೆಯರ ವಿರುದ್ಧ ಅತ್ಯಂತ ಕೀಳು ಮಟ್ಟದ ಜೋಕ್ ಮಾಡಿದ ಆರೋಪ ಎದುರಿಸುತ್ತಿರುವ ಮತ್ತೊಬ್ಬ ಸ್ಟ್ಯಾಂಡ್ಅಪ್ ಕಾಮಿಡಿಯನ್ ಮಧುರ್ ವಿರ್ಲಿ ಕೂಡ ತನಿಖೆಗೆ ಹಾಜರಾಗಿದ್ದರು. ಮಾಧ್ಯಮದವರು ಇವರನ್ನು ಮಾತನಾಡಿಸಲು ಮುಂದಾದರೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಕಚೇರಿಯ ಒಳಗೆ ಹೆಜ್ಜೆ ಇಟ್ಟಿದ್ದಾರೆ.
ಕ್ರಿಯೇಟಿವ್ ಫ್ರೀಡಂ ಹೆಸರಲ್ಲಿ ಅತ್ಯಾಚಾರ-ಕೊಲೆಯ ಜೋಕ್ ಒಪ್ಪಲ್ಲ: ಆಯೋಗದ ಚಾಟಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹಟ್ಕರ್ ನೇತೃತ್ವದಲ್ಲಿ ನಡೆದ ಈ ಹಿರಿಯ ಮಟ್ಟದ ವಿಚಾರಣೆಯಲ್ಲಿ, ಆರೋಪಿಗಳು ಸಲ್ಲಿಸಿದ ಲಿಖಿತ ಕ್ಷಮಾಪಣೆಯನ್ನು ಆಯೋಗವು ಕಡಾಖಂಡಿತವಾಗಿ ತಿರಸ್ಕರಿಸಿದೆ. ಹಾಸ್ಯ ಹಾಗೂ ಮನರಂಜನೆಯ ನೆಪದಲ್ಲಿ ಇಂತಹ ಅಸಭ್ಯ ಮತ್ತು ಮಹಿಳಾ ವಿರೋಧಿ ಚಿಂತನೆಗಳನ್ನು ಸಮಾಜದಲ್ಲಿ ಸಾಮಾನ್ಯೀಕರಿಸುತ್ತಿರುವುದಕ್ಕೆ ಅಧ್ಯಕ್ಷರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಯೋಗ ಗೌರವಿಸುತ್ತದೆ, ಆದರೆ ಅದರ ಹೆಸರಿನಲ್ಲಿ ಮಹಿಳೆಯರ ಶಾರೀರಿಕ ಸ್ವಾಯತ್ತತೆಯನ್ನು ಪ್ರಶ್ನಿಸುವುದನ್ನು ಅಥವಾ ಅತ್ಯಾಚಾರ ಮತ್ತು ಕೊಲೆಯಂತಹ ಘೋರ ಅಪರಾಧಗಳನ್ನು ಹಾಸ್ಯದ ವಸ್ತುವನ್ನಾಗಿ ಬಳಸಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಆಯೋಗವು ಕಟು ಶಬ್ದಗಳಲ್ಲಿ ಎಚ್ಚರಿಸಿದೆ.
