TOP NEWS

Ram Charan: ಬುಮ್ರಾ ಫುಟ್ಬಾಲರ್ ಅಂದಿದ್ದ ರಾಮ್ ಚರಣ್, ಈಗ ‘ಧುರಂಧರ್’ ಹೇಳಿಕೆಯಿಂದ ಮತ್ತೆ ಟ್ರೋಲ್

Actor ram Charan trolled for his statement about Dhurandhar

ಬೆಂಗಳೂರು: ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮೂರು ವಾರಗಳ ಹಿಂದೆ ತೆರೆಕಂಡ ಈ ಚಿತ್ರ ಕೇವಲ 18 ದಿನಗಳಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಸೂಪರ್ ಹಿಟ್ ಲಿಸ್ಟ್ ಸೇರಿದೆ. ‘ಆರ್‌ಆರ್‌ಆರ್’ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ರಾಮ್ ಚರಣ್‌ಗೆ ‘ಪೆದ್ದಿ’ ಸಿನಿಮಾ ದೊಡ್ಡ ಮರುಜೀವ ನೀಡಿದೆ. ಆದರೆ, ಈ ಭರ್ಜರಿ ಗೆಲುವಿನ ಸಂಭ್ರಮದ ನಡುವೆಯೂ ನಟ ಚರಣ್ ತಮ್ಮ ನಾಲಿಗೆ ಸಸಿಲಿಕೆಯಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸತತವಾಗಿ ಟ್ರೋಲಿಗರಿಗೆ ಆಹಾರವಾಗುತ್ತಿದ್ದಾರೆ.

ಕ್ರಿಕೆಟಿಗನನ್ನು ಫುಟ್ಬಾಲರ್ ಎಂದಿದ್ದ ಚರಣ್! ರಾಮ್ ಚರಣ್ ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ‘ಪೆದ್ದಿ’ ಸಿನಿಮಾದ ಪ್ರಚಾರದ ವೇಳೆ ಭಾರತದ ಹೆಮ್ಮೆಯ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರನ್ನು ಓರ್ವ ‘ಫುಟ್‌ಬಾಲ್ ಆಟಗಾರ’ ಎಂದು ಸಂಬೋಧಿಸಿ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ವಿವಾದ ತಣ್ಣಗಾಗುವ ಮುನ್ನವೇ ಈಗ ಬಾಲಿವುಡ್‌ನ ‘ಧುರಂಧರ್’ ಸಿನಿಮಾ ಕುರಿತು ನೀಡಿರುವ ಮತ್ತೊಂದು ಹೇಳಿಕೆ ಅವರನ್ನು ಮತ್ತೆ ಟ್ರೋಲ್ ಸುಳಿಗೆ ಸಿಲುಕಿಸಿದೆ.

ಟ್ವೀಟ್ ಗೊಂದಲ ಹಾಗೂ ಒಟಿಟಿ ಹೇಳಿಕೆ ಖಾಸಗಿ ಮಾಧ್ಯಮವೊಂದರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಮ್ ಚರಣ್, ದೇಶಪ್ರೇಮದ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, “ನಾನು ಕಳೆದ ವಾರವಷ್ಟೇ ಒಟಿಟಿಯಲ್ಲಿ ‘ಧುರಂಧರ್’ ಸಿನಿಮಾ ನೋಡಿದೆ. ಅದೊಂದು ಅದ್ಭುತ ಚಿತ್ರ” ಎಂದು ಹೇಳಿಕೊಂಡಿದ್ದರು. ಆದರೆ, ಇದೇ ಮಾರ್ಚ್ 20 ರಂದು ಚಿತ್ರಮಂದಿರಗಳಲ್ಲಿ ‘ಧುರಂಧರ್’ ಬಿಡುಗಡೆಯಾದ ಮರುದಿನವೇ ರಾಮ್ ಚರಣ್ ತಮ್ಮ ಎಕ್ಸ್ ಖಾತೆಯಲ್ಲಿ ಚಿತ್ರವನ್ನು ಕೊಂಡಾಡಿ ಸುದೀರ್ಘ ವಿಮರ್ಶೆ ಬರೆದಿದ್ದರು. ನಿರ್ದೇಶಕ ಆದಿತ್ಯ ಧರ್ ಹಾಗೂ ನಟ ರಣವೀರ್ ಸಿಂಗ್ ಅವರ ಕೆಲಸವನ್ನು ಅಂದು ಮುಕ್ತಾಕಂಠದಿಂದ ಶ್ಲಾಘಿಸಿದ್ದ ಚರಣ್, ಈಗ ಇತ್ತೀಚೆಗಷ್ಟೇ ಒಟಿಟಿಯಲ್ಲಿ ಸಿನಿಮಾ ನೋಡಿದೆ ಎಂದು ಹೇಳಿರುವುದು ನೆಟ್ಟಿಗರ ಗೊಂದಲಕ್ಕೆ ಕಾರಣವಾಗಿದೆ. ಅಂದು ಸಿನಿಮಾ ನೋಡದೆಯೇ ಕೇವಲ ಪ್ರಚಾರಕ್ಕಾಗಿ ಟ್ವೀಟ್ ಮಾಡಿದ್ದೀರಾ ಎಂದು ಟ್ರೋಲಿಗರು ಚರಣ್ ಕಾಲೆಳೆಯುತ್ತಿದ್ದಾರೆ.

ಯಥಾಪ್ರಕಾರ ಮೆಗಾ ಹೀರೊ ಪರ ಬ್ಯಾಟಿಂಗ್ ಬೀಸಿರುವ ಅಭಿಮಾನಿಗಳು, ರಾಮ್ ಚರಣ್ ಅವರು ಈಗಾಗಲೇ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ್ದರು, ಆದರೆ ಕಳೆದ ವಾರ ಒಟಿಟಿಯಲ್ಲಿ ಎರಡನೇ ಬಾರಿಗೆ (Rewatch) ವೀಕ್ಷಿಸಿರುವುದಾಗಿ ಹೇಳಿದ್ದಾರೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಸುಕುಮಾರ್ ಜೊತೆ ಮುಂದಿನ ಸಿನಿಮಾ ಸದ್ಯ ‘ಪೆದ್ದಿ’ ಚಿತ್ರದ ಭರ್ಜರಿ ಯಶಸ್ಸನ್ನು ಆಸ್ವಾದಿಸುತ್ತಿರುವ ರಾಮ್ ಚರಣ್, ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಟಾಲಿವುಡ್‌ನ ಸ್ಟಾರ್ ನಿರ್ದೇಶಕ ಸುಕುಮಾರ್ ಅವರ ಜೊತೆ ಚರಣ್ ಕೈಜೋಡಿಸಲಿದ್ದು, ಇನ್ನೆರಡು ತಿಂಗಳಲ್ಲಿ ಈ ನೂತನ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ ‘ರಂಗಸ್ಥಳಂ’ ಸಿನಿಮಾ ಇಂಡಸ್ಟ್ರಿ ಹಿಟ್ ಆಗಿತ್ತು. ಇದೀಗ ಸುಕುಮಾರ್ ಹಾಗೂ ರಾಮ್ ಚರಣ್ ಒಟ್ಟಿಗೆ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಸಿನಿರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಫ್ಯಾಷನ್ ರೀಲ್ಸ್ ಚಾಳಿ, ಸೆಲೆಬ್ರಿಟಿಗಳಿಗೆ ಸಂಕಷ್ಟ: ನವಿಲು ಗರಿ ಉಡುಪು ಧರಿಸಿದ ಕಿಶನ್, ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು!

Leave a Reply

Your email address will not be published. Required fields are marked *